ದುಬೈ ಅಮಿಟಿ ವಿವಿಯಿಂದ ತುಂಬೆ ಮೊಯ್ದಿನ್‌ ರಿಗೆ ಗೌರವ ಡಾಕ್ಟರೇಟ್

Update: 2017-11-21 19:12 GMT

ದುಬೈ, ನ. 22: ದುಬೈಯಲ್ಲಿ ತುಂಬೆ ಗ್ರೂಪ್ ಸಮೂಹ ಸಂಸ್ಥೆಗಳ ಸ್ಥಾಪಕ ಮತ್ತು ಅದರ ಅಧ್ಯಕ್ಷರೂ ಆಗಿರುವ ತುಂಬೆ ಮೊಯ್ದಿನ್ ಅವರಿಗೆ ದುಬೈಯ ಅಮಿಟಿ ವಿಶ್ವವಿದ್ಯಾಲಯವು ತನ್ನ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ದುಬೈಯಲ್ಲಿ ನವೆಂಬರ್ 20ರಂದು ನಡೆದ ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಹೆತ್ತವರ ಸಮ್ಮುಖದಲ್ಲಿ ತುಂಬೆ ಮೊಯ್ದಿನ್ ಅವರನ್ನು ಸನ್ಮಾನಿಸಲಾಯಿತು.

ಮೊಯ್ದಿನ್ ಅವರು ತುಂಬೆಯ ಖ್ಯಾತ ಉದ್ಯಮಿ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಅವರ ಸುಪುತ್ರ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ.

ರಾಷ್ಟ್ರದ ವೈದ್ಯಕೀಯ, ಶಿಕ್ಷಣ, ವ್ಯಾಪಾರ, ಕೈಗಾರಿಕೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ನೀಡಿರುವ ಗಣನೀಯ ಕಾಣಿಕೆಗಾಗಿ ಮೊಯ್ದಿನ್ ಅವರನ್ನು ಈ ಗೌರವದಿಂದ ಸನ್ಮಾನಿಸುತ್ತಿರುವುದಾಗಿ ಅಮಿಟಿ ವಿಶ್ವವಿದ್ಯಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರಮುಖವಾಗಿ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಮೊಯ್ದಿನ್ ಅವರು ನೀಡಿರುವ ಕಾಣಿಕೆ ಅತ್ಯಪೂರ್ವವಾಗಿದೆ. ಅನ್ವೇಷಣೆ ಮತ್ತು ಸಾಧನೆಯ ಉತ್ಸಾಹವನ್ನು ಪ್ರೋತ್ಸಾಹಿಸುವ ವಿಶ್ವವಿದ್ಯಾಲಯವಾಗಿ ಅಮೆಟಿಯು ಮೊಯ್ದಿನ್ ಅವರಂಥಾ ವ್ಯಕ್ತಿತ್ವವನ್ನು ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿರುವುದಾಗಿ ಅಮಿಟಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ. ಅಜಿತ್ ಕುಮಾರ್ ನಾಗ್ಪಾಲ್ ತಿಳಿಸಿದ್ದಾರೆ.

ಈ ಪದವಿಗಾಗಿ ತನ್ನನ್ನು ಆಯ್ಕೆ ಮಾಡಿರುವ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆಗಳನ್ನು ಸೂಚಿಸಿರುವ ತುಂಬೆ ಮೊಯ್ದಿನ್ ಅವರು, ''ನನ್ನ ಜೀವನದಾದ್ಯಂತ ಶಿಕ್ಷಣ
ಮತ್ತು ಆರೋಗ್ಯದ ಮೂಲಕ ಜನರ ಜೀವನವನ್ನು ಬದಲಿಸುವ ಮತ್ತು ಸಮುದಾಯಗಳನ್ನು ಬಲಪಡಿಸುವ ಹಾಗೂ ರಾಷ್ಟ್ರದ ಬೆಳವಣಿಗೆ ಮತ್ತು ಏಳಿಗೆಯಲ್ಲಿ ಕೈಜೋಡಿಸುವ ಭಾಗ್ಯ ನನಗೆ ದೊರಕಿದೆ. ಈ ನನ್ನ ಯಶಸ್ಸನ್ನು ದೇವರು, ಸರಕಾರದ ಬೆಂಬಲ ಮತ್ತು ನನ್ನ ತಂಡಕ್ಕೆ ಅರ್ಪಿಸುತ್ತೇನೆ. ಈ ಸನ್ಮಾನ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲು ನನ್ನನ್ನು ಪ್ರೇರೇಪಿಸಲಿದೆ'' ಎಂದರು.

ತುಂಬೆ ಗ್ರೂಪ್‌ನ ಯಶೋಗಾಥೆಯನ್ನು ವಿವರಿಸಿದ ಅವರು ವಿದ್ಯಾರ್ಥಿಗಳಿಗೆ ದೊಡ್ಡ ಕನಸುಗಳನ್ನು ಕಾಣುವಂತೆ ಮತ್ತು ತಮ್ಮ ಗುರಿಯತ್ತ ಗಮನ ಇಡುವಂತೆ ಕರೆ ನೀಡಿದರು. ವ್ಯಕ್ತಿಯೊಬ್ಬ ಸಮಾಜಕ್ಕೆ ತನ್ನಿಂದಾಗುವುದನ್ನು ನೀಡಿ ಜನರ ಜೀವನದಲ್ಲಿ ಬದಲಾವಣೆಗಳನ್ನು ತಂದಾಗ ಮಾತ್ರ ಆತನಿಗೆ ನಿಜವಾದ ಯಶಸ್ಸು ಸಿಗುವುದು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News