ಎಚ್ಚರಿಕೆ... ಇದು ಹೊಟ್ಟೆ ಕ್ಯಾನ್ಸರ್‌ನ 6 ಲಕ್ಷಣಗಳು

Update: 2017-11-22 10:32 GMT

 ಹೊಟ್ಟೆಯ ಕ್ಯಾನ್ಸರ್ ಈ ಮಾರಣಾಂತಿಕ ರೋಗದ ಅತ್ಯಂತ ಯಾತನಾಮಯ ರೂಪಗಳಲ್ಲೊಂದಾಗಿದೆ. ಆದರೆ ಹೆಚ್ಚಿನವರಲ್ಲಿ ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ನೋವು ಒಂದಾಗಿರುವುದಿಲ್ಲ. ವಾಸ್ತವದಲ್ಲಿ ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಹಂತಗಳ ಅತ್ಯಂತ ಸಾಮಾನ್ಯ ಅಂಶವೆಂದರೆ ಅದು ಯಾವುದೇ ಲಕ್ಷಣಗಳನ್ನೇ ತೋರಿಸುವುದಿಲ್ಲ ಎನ್ನುತ್ತಾರೆ ನ್ಯೂಯಾರ್ಕ್‌ನ ವೌಂಟ್ ಸಿನಾಯ್ ಹೆಲ್ತ್ ಸಿಸ್ಟಮ್‌ನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಸರ್ಜಿಕಲ್ ಅಂಕಾಲಜಿಸ್ಟ್ ಡಾ.ಉಮತ್ ಸಾರ್ಪೆಲ್. ನಾವೆಲ್ಲ ಆಗಾಗ್ಗೆ ಹೊಟ್ಟೆನೋವು ಅನುಭವಿಸುತ್ತಿರುತ್ತೇವೆ ಮತ್ತು ಇಂತಹ ನೋವು ಜನರನ್ನು ಹೊಟ್ಟೆ ಕ್ಯಾನ್ಸರ್‌ನ ಚಿಂತೆಗೆ ತಳ್ಳಬಹುದು. ಆದರೆ ಹೊಟ್ಟೆ ಕ್ಯಾನ್ಸರ್ ಅತ್ಯಂಂತ ಸಾಮಾನ್ಯ ಕ್ಯಾನ್ಸರ್ ರೂಪಗಳಲ್ಲಿ ಸೇರಿಲ್ಲ ಮತ್ತು ಹೊಟ್ಟೆನೋವಿನ ಹೆಚ್ಚಿನ ಪ್ರಕರಣಗಳಲ್ಲಿ ಹೊಟ್ಟೆ ಕ್ಯಾನ್ಸರ್ ನೋವಿಗೆ ಕಾರಣವಾಗಿರುವುದಿಲ್ಲ ಎಂದೂ ಸಾರ್ಪೆಲ್ ಹೇಳಿದ್ದಾರೆ.

ಅಂದಾಜು ಪ್ರತಿ 111 ಮಹಿಳೆಯರಲ್ಲಿ ಓರ್ವಳಿಗೆ ಆಕೆಯ ಜೀವನದ ಯಾವುದಾದರೂ ಘಟ್ಟದಲ್ಲಿ ಹೊಟ್ಟೆ ಕ್ಯಾನ್ಸರ್ ಕಾಣಿಸಿಕೊಂಡರೆ, ಪುರುಷರಲ್ಲಿ ಈ ಪ್ರಮಾಣ ಹೆಚ್ಚು ಎನ್ನುತ್ತದೆ ಅಮೆರಿಕನ್ ಕ್ಯಾನ್ಸರ್ ಸೊಸೈಟಿ. ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಹೊಟ್ಟೆ ಕ್ಯಾನ್ಸರ್‌ನ ಅಪಾಯವೂ ಹೆಚ್ಚುತ್ತದೆ ಎನ್ನುತ್ತಾರೆ ಡಾ.ಸಾರ್ಪೆಲ್.

ಮಲ ಅಥವಾ ವಾಂತಿಯಲ್ಲಿ ರಕ್ತ

ದೊಡ್ಡ ಕರುಳಿನಲ್ಲಿ ಉರಿಯೂತಕ್ಕೆ ಕಾರಣವಾಗುವ ಕೊಲೈಟಿಸ್ ಮತ್ತು ಕ್ರೋನ್ಸ್ ಡಿಸೀಸ್ ವ್ಯಕ್ತಿಯನ್ನು ಕಾಡಿದಾಗ ಮಲ ಅಥವಾ ವಾಂತಿಯಲ್ಲಿ ರಕ್ತವು ಸೇರಿಕೊಂಡಿ ರುತ್ತದೆ. ಈ ರಕ್ತಸ್ರಾವವು ಹೊಟ್ಟೆಯ ಕ್ಯಾನ್ಸರ್‌ಗೆ ಸಂಬಂಧಿಸಿದ್ದರೆ ಮಲವು ಕಡುಕೆಂಪು ಅಥವಾ ಕಪ್ಪುಬಣ್ಣದ್ದಾಗಿರುತ್ತದೆ. ಹಸಿವು ದೂರ

ಹೊಟ್ಟೆ ಹಸಿಯುತ್ತಿದೆ ಎಂದು ಊಟದ ಬಟ್ಟಲಿನೆದುರು ಕುಳಿತು ಒಂದೆರಡು ತುತ್ತುಗಳನ್ನು ತಿನ್ನುವಷ್ಟರಲ್ಲೇ ನಿಮ್ಮ ಹಸಿವು ಮಾಯವಾದರೆ ಮತ್ತು ಊಟವು ಹಿಡಿಸದಿದ್ದರೆ ಅದು ಹೊಟ್ಟೆಯ ಕ್ಯಾನ್ಸರ್‌ನ್ನು ಸೂಚಿಸಬಹುದು. ನೀವು ಎಂದಿನಂತೆ ತಿನ್ನುವ ಪ್ರಮಾಣದ ಬದಲಾಗಿ ಸ್ವಲ್ಪವೇ ತಿಂದಾಗ ನಿಮಗೆ ಹೊಟ್ಟೆ ತುಂಬಿದಂತೆ ಅನಿಸಿದರೆ ಅದನ್ನು ಖಂಡಿತವಾಗಿಯೂ ಕಡೆಗಣಿಸಬಾರದು ಎನ್ನುತ್ತಾರೆ ಡಾ.ಸಾರ್ಪೆಲ್.

ಹೊಟ್ಟೆ ನೋವು

ಕೆಲವು ಪ್ರಕರಣಗಳಲ್ಲಿ ಹೊಟ್ಟೆಯೊಳಗೆ ನೋವು ಕ್ಯಾನ್ಸರ್‌ನ್ನು ಸೂಚಿಸಬಹುದು. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಹೊಟ್ಟೆ ನೋವಿಗೆ ಬೇರೆ ಬೇರೆ ಕಾರಣಗಳಿರುತ್ತವೆ. ಹೊಟ್ಟೆಯ ಕ್ಯಾನ್ಸರ್‌ಗೆ ಸಂಬಂಧಿಸಿದ ನೋವಿನ ವಿಶಿಷ್ಟ ಲಕ್ಷಣವೆಂದರೆ ಅದು ನಿರಂತರವಾಗಿರುತ್ತದೆ ಮತ್ತು ಹೊಟ್ಟೆಯಲ್ಲಿ ಕಿವಿಚಿದಂತಾಗುತ್ತದೆ. ಅದು ಎಲ್ಲೋ ಒಂದು ದಿನ ಕಾಡಿ ಬಳಿಕ ಒಂದೆರಡು ವಾರ ದೂರವಾಗಿ ಮತ್ತೆ ಕಾಡುವ ನೋವಿನಂತಲ್ಲ.

ತೂಕ ಇಳಿಕೆ

  ಟೈಪ್ 1 ಮಧುಮೇಹ, ಅಡಿಸನ್ಸ್ ಕಾಯಿಲೆ, ಗ್ರೋನ್ಸ್ ಡಿಸೀಸ್‌ನಂತಹ ಸಮಸ್ಯೆಗಳಿರುವಾಗ ದೇಹತೂಕ ಕಡಿಮೆಯಾಗುತ್ತದೆ ಮತ್ತು ಇದಕ್ಕೆ ನಿರ್ದಿಷ್ಟ ಕಾರಣವನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಹೊಟ್ಟೆಯ ಕ್ಯಾನ್ಸರ್ ಕೂಡ ಇಂತಹ ರೋಗಗಳ ಸಾಲಿನಲ್ಲಿ ಸೇರುತ್ತದೆ. ಯಾವುದೇ ಡಯಟ್ ಮಾಡದೆ ದೇಹತೂಕ ಕಡಿಮೆಯಾದರೆ ಅದನ್ನು ಕಡೆಗಣಿಸುವಂತಿಲ್ಲ ಎನ್ನುತ್ತಾರೆ ಡಾ.ಸಾರ್ಪೆಲ್. ದೇಹತೂಕ ದಿಢೀರ್ ಆಗಿ ಕಡಿಮೆಯಾಗದೆ ಹಂತಹಂತವಾಗಿ ಇಳಿಯುತ್ತ ಹೋಗಬಹುದು. ಎಲ್ಲೋ ಆರು ತಿಂಗಳಿಗೆ ಒಂದೆರಡು ಕೆಜಿ ತೂಕ ಇಳಿದರೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಆದರೆ ಯಾವುದೇ ಡಯಟ್ ಅನುಸರಿಸದೆ ಗಣನೀಯ ಪ್ರಮಾಣದಲ್ಲಿ ತೂಕ ಕಡಿಮೆಯಾದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.

ಎದೆಯುರಿ

ಅಜೀರ್ಣ ಮತ್ತು ಅದಕ್ಕೆ ಸಂಬಂಧಿಸಿದ ಎದೆಯುರಿಯಂತಹ ಇತರ ಸಾಮಾನ್ಯ ಲಕ್ಷಣಗಳು ಹೊಟ್ಟೆ ಕ್ಯಾನ್ಸರ್‌ನ ಪೂರ್ವ ಲಕ್ಷಣಗಳಾಗಿರುವ ಸಾಧ್ಯತೆಗಳಿವೆ. ಹಾಗೆಯೇ ಈ ಲಕ್ಷಣಗಳು ಕ್ಯಾನ್ಸರ್‌ನಿಂದಲ್ಲದೆ ಬೇರೆ ಸಮಸ್ಯೆಗಳಿಂದಲೂ ಕಾಣಿಸಿಕೊಳ್ಳಬಹುದು. ಹೀಗಾಗಿ ಇವುಗಳ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಹೊಟ್ಟೆಯುಬ್ಬರ, ಅತಿಸಾರ ಮತ್ತು ಮಲಬದ್ಧತೆ

ಹೊಟ್ಟೆ ಕ್ಯಾನ್ಸರ್‌ನಿಂದಾಗಿ ಹೊಟ್ಟೆ ಉಬ್ಬರಿಸಿದ ಅನುಭವ ಅಥವಾ ಮಲವಿಸರ್ಜನೆ ಪ್ರಕ್ರಿಯೆಯಲ್ಲಿ ಏರುಪೇರುಗಳಿಗೆ ಕಾರಣವಾಗಬಹುದು. ಈ ಪ್ರತಿ ಲಕ್ಷಣವೂ ಹೊಟ್ಟೆ ಕ್ಯಾನ್ಸರ್ ಎಂದು ನೇರವಾಗಿ ಬೆಟ್ಟು ಮಾಡದಿದ್ದರೂ ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಇವೂ ಕಾಡಿದಾಗ ವೈದ್ಯರಿಗೆ ಯಾವುದೇ ವಿವರಣೆ ತೋಚದಿದ್ದರೆ ಕ್ಯಾನ್ಸರ್ ಸಂಬಂಧಿತ ತಪಾಸಣೆ ಮಾಡಿಸಿಕೊಳ್ಳಬೇಕಾಗಬಹುದು ಎನ್ನುತ್ತಾರೆ ಡಾ.ಸಾರ್ಪೆಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News