ರಾಸಲೀಲೆ ಸಿಡಿಯಲ್ಲಿರುವುದು ನಿತ್ಯಾನಂದ: ದೃಢಪಡಿಸಿದ ಎಫ್‌ಎಸ್‌ಎಲ್

Update: 2017-11-22 11:06 GMT

ಹೊಸದಿಲ್ಲಿ/ಬೆಂಗಳೂರು, ನ.22: ಬಿಡದಿಯ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣ ಸಂಬಂಧ ಸಿಡಿಯಲ್ಲಿರುವುದು ನಿತ್ಯಾನಂದನೇ ಎಂದು ಹೊಸದಿಲ್ಲಿಯ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಸಾಬೀತುಪಡಿಸಿದ್ದು, ಈ ಪ್ರಕರಣಕ್ಕೆ ಹೊಸ ತಿರುವು ದೊರೆತಂತಾಗಿದೆ.

ನಿತ್ಯಾನಂದ ಸ್ವಾಮಿ ಸಿನೆಮಾ ನಟಿಯೊಬ್ಬಕೆ ಜತೆ ರಾಸಲೀಲೆಯಲ್ಲಿ ತೊಡಗಿದ್ದ ಎನ್ನುವ ಸಿಡಿ ಪ್ರಕರಣ ಸಂಬಂಧ ಸಿಡಿಯಲ್ಲಿರುವ ವ್ಯಕ್ತಿ ನಾನಲ್ಲ ಎಂದು ನಿತ್ಯಾನಂದ ಸ್ವಾಮಿ ವಾದಿಸಿದ್ದರು. ಬಳಿಕ ತನಿಖಾಧಿಕಾರಿಗಳು ರಾಸಲೀಲೆ ಸಿಡಿಯನ್ನು ಹೊಸದಿಲ್ಲಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಇದನ್ನು ಪರಿಶೀಲಿಸಿದ ತಜ್ಞರು ಸಿಡಿಯಲ್ಲಿರುವುದು ಸ್ವತಃ ನಿತ್ಯಾನಂದನೇ ಎಂದು ಸಾಬೀತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಪ್ರಕರಣದ ಹಿನ್ನೆಲೆ

ನಿತ್ಯಾನಂದ ರಾಸಲೀಲೆ ಪ್ರಕರಣ ಸಂಬಂಧ ನಿತ್ಯ ಧರ್ಮಾನಂದ ಯಾನೆ ಲೆನಿನ್ ಕರುಪ್ಪನ್ ತಮಿಳುನಾಡಿನಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣದ ವಿಚಾರಣೆ ಕೈಗೊಂಡ  ತಮಿಳುನಾಡು ಪೊಲೀಸರು, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಬಿಡದಿ ಪೊಲೀಸ್ ಠಾಣೆಗೆ ಪ್ರಕರಣ ಹಸ್ತಾಂತರಿಸಿದ್ದರು.

2010ರಲ್ಲಿ ಸಿಐಡಿ ಸಿಡಿಯನ್ನು ಹೊಸದಿಲ್ಲಿಯ ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈಗ ಸಿಡಿಯಲ್ಲಿರುವುದು ನಿತ್ಯಾನಂದ ಎಂಬ ಅಂಶ ಸಾಬೀತಾಗಿರುವುದರಿಂದ ಪ್ರಕರಣದ ವಿಚಾರಣೆಗೆ ಹೊಸ ಆಯಾಮ ದೊರೆತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News