ಸಾಮಾನ್ಯ ಶೀತದೊಂದಿಗೆ ಈ ಲಕ್ಷಣಗಳೂ ಇದ್ದರೆ ಖಂಡಿತ ಕಡೆಗಣಿಸಬೇಡಿ

Update: 2017-11-22 11:19 GMT

ನೆಗಡಿ ವಯೋಭೇದವಿಲ್ಲದೆ ಎಲ್ಲರನ್ನೂ ಕಾಡುವ ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಮಕ್ಕಳು ವರ್ಷಕ್ಕೆ 6ರಿಂದ 10 ಬಾರಿ ಶೀತದಿಂದ ಬಳಲಿದರೆ, ವಯಸ್ಕರು ಸರಾಸರಿ 2ರಿಂದ 4 ಬಾರಿ ಈ ಸಮಸ್ಯೆಯನ್ನು ಎದುರಿಸುತ್ತಾರೆ.

ಸಾಮಾನ್ಯ ಶೀತವು ಗಂಟಲು ಕೆರೆತ, ಕೆಮ್ಮು, ಕಟ್ಟಿಕೊಂಡಿರುವ ಅಥವಾ ಸೋರುತ್ತಿರುವ ಮೂಗು, ಸೀನು, ತಲೆನೋವು, ದೇಹಾಲಸ್ಯ ಮತ್ತು ಅಲ್ಪ ಜ್ವರ ಇವುಗಳೆಲ್ಲವನ್ನೂ ತನ್ನೊಂದಿಗೆ ಕಟ್ಟಿಕೊಂಡೇ ಬರುತ್ತದೆ. ಆದರೆ ಕೆಲವೊಮ್ಮೆ ಇದು ಸಾಮಾನ್ಯ ಶೀತವಲ್ಲ ಎಂದು ಸೂಚಿಸುವ ಲಕ್ಷಣಗಳು ಕಂಡುಬರಬಹುದು.

 ಶೀತ ಸಾಮಾನ್ಯವಾಗಿ ಒಂದು ವಾರದೊಳಗೆ ಗುಣವಾಗುತ್ತದೆ ಹೀಗಾಗಿ ಹೆಚ್ಚಿನವರು ವೈದ್ಯರ ಬಳಿಗೆ ಹೋಗುವ ತೊಂದರೆಯನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಹಲವಾರು ಗಂಭೀರ ಕಾಯಿಲೆಗಳು ಹಲವೊಮ್ಮೆ ಶೀತದಿಂದಲೇ ಆರಂಭವಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಸಾಮಾನ್ಯ ಶೀತ ಮತ್ತು ವೈದ್ಯರ ಸಲಹೆ ಪಡೆಯಲೇಬೇಕಾದ ಶೀತದ ಸಮಸ್ಯೆಗಳನ್ನು ಗುರುತಿಸಲು ಈ ಆರು ಎಚ್ಚರಿಕೆಯ ಸಂಕೇತಗಳ ಬಗ್ಗೆ ಅರಿವಿರಬೇಕು.

ದಿನಗಟ್ಟಲೆ ಜ್ವರದ ಕಾಟ

 ಸಾಧಾರಣ ಜ್ವರವು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯು ರೋಗಾಣು ಗಳೊಂದಿಗೆ ಹೋರಾಡುತ್ತಿರುವ ಸೂಚನೆಯನ್ನು ನೀಡುತ್ತದೆಯಾದರೂ 102 ಡಿಗ್ರಿಗಿಂತ ಹೆಚ್ಚಿನ ತೀವ್ರ ಜ್ವರವಿದ್ದರೆ ನಮ್ಮನ್ನು ಕಾಡುತ್ತಿರುವುದು ಸಾಮಾನ್ಯ ಶೀತವಾಗಿರದೆ ಬೇರೆಯದೇ ಅನಾರೋಗ್ಯವಾಗಿರಬಹುದು. ಜ್ವರವು ಅಲ್ಪಪ್ರಮಾಣದಲ್ಲಿದ್ದು, ಹಲವಾರು ದಿನಗಳವರೆಗೆ ಮುಂದುವರಿದರೆ ಅದೂ ಕಳವಳದ ವಿಷಯವಾಗುತ್ತದೆ. ಫ್ಲೂ ಅಥವಾ ಏಕಕೋಶ ವ್ಯಾಧಿಯಂತಹ, ಸಾಮಾನ್ಯ ಶೀತಕ್ಕಿಂತ ಹೆಚ್ಚಿನದಾದ ಆರೋಗ್ಯ ಸಮಸ್ಯೆಯ ವಿರುದ್ಧ ಹೋರಾಡಲು ನಮ್ಮ ಶರೀರವು ಪ್ರಯತ್ನಿಸುತ್ತಿದೆ ಎನ್ನುವುದನ್ನು ಅದು ಸೂಚಿಸುತ್ತದೆ.

ಪದೇಪದೇ ಅನಾರೋಗ್ಯ

ನಾವು ಅನಾರೋಗ್ಯಕ್ಕೆ ಗುರಿಯಾಗಿ ಚೇತರಿಸಿಕೊಂಡ ಬಳಿಕ ಮತ್ತೆ ಅನಾರೋಗ್ಯ ಕ್ಕೀಡಾದರೆ ಅದು ಸೂಪರ್ ಇನ್‌ಫೆಕ್ಷನ್‌ನ ಲಕ್ಷಣವಾಗಿರುವ ಸಾಧ್ಯತೆಯಿದೆ. ಅಲ್ಪ ಜ್ವರದ ಬಳಿಕ ರೋಗ ನಿರೋಧಕ ವ್ಯವಸ್ಥೆಯು ದುರ್ಬಲಗೊಂಡಾಗ ದಾಳಿ ಮಾಡುವ ಗಂಭೀರ ಪೂರಕ ಸೋಂಕನ್ನು ಸೂಪರ್ ಇನ್‌ಫೆಕ್ಷನ್ ಎಂದು ಕರೆಯಲಾಗುತ್ತದೆ.

ತೀವ್ರ ತಲೆನೋವು

  ತಲೆನೋವು ಕಾಡುತ್ತಿದ್ದರೆ, ಕಣ್ಣು ಮತ್ತು ಮೂಗಿನ ಸುತ್ತ ಬಾಧೆಯಾಗುತ್ತಿದ್ದರೆ ಅದು ಸೈನಸ್ ಸೋಂಕಿನ ಲಕ್ಷಣವಾಗಿರಬಹುದು. ಇನ್ನೊಂದೆಡೆ ತಲೆನೋವು ನಿಮ್ಮ ಏಕಾಗ್ರತೆ ಯನ್ನು ಅಥವಾ ಸ್ಪಷ್ಟವಾಗಿ ಚಿಂತನೆಯನ್ನು ನಡೆಸುವ ಸಾಮರ್ಥ್ಯವನ್ನು ಕುಂದಿಸಿದರೆ ಅದು ಮೆನಿಂಜೈಟಿಸ್(ಮಿದುಳು ರೋಗ)ನಂತಹ ಕೇಂದ್ರ ನರ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಾಗಿರಬಹುದು.

ತೀವ್ರ ಮೈಕೈ ನೋವು

ನಿಮ್ಮ ಶರೀರವಿಡೀ ನೋಯುತ್ತಿದ್ದರೆ, ಹಾಸಿಗೆಯಿಂದ ಎದ್ದೇಳಲೂ ಕಷ್ಟವೆನ್ನಿಸುತ್ತಿದ್ದರೆ, ಜೊತೆಗೆ ಆಯಾಸ ಮತ್ತು ಸ್ನಾಯು ನೋವು ಕಾಡುತ್ತಿದ್ದರೆ ನೀವು ಫ್ಲೂದಿಂದ ನರಳುತ್ತಿದ್ದೀರಿ ಎನ್ನುವುದಕ್ಕೆ ಅದು ಪ್ರಬಲ ಸಂಕೇತವಾಗಿರುವ ಸಾಧ್ಯತೆಯಿದೆ.

ಹೊಟ್ಟೆಯ ಸಮಸ್ಯೆಗಳು

ವಾಕರಿಕೆ, ವಾಂತಿ ಮತ್ತು ಅತಿಸಾರ ಇವು ಸಾಮಾನ್ಯ ಶೀತದೊಂದಿಗೆ ಕಾಣಿಸಿಕೊಳ್ಳು ವುದಿಲ್ಲ. ಹೀಗಾಗಿ ನೀವು ಶೀತದಿಂದ ಬಳಲುತ್ತಿದ್ದಾಗ ಈ ಸಮಸ್ಯೆಗಳು ಕಾಡುತ್ತಿದ್ದರೆ ಅದು ಫ್ಲೂ ಅನ್ನು ಸೂಚಿಸಬಹುದು.

ಎದೆನೋವು, ಉಸಿರಾಟದ ತೊಂದರೆ

ಕೆಮ್ಮು ಸಾಮಾನ್ಯವಾಗಿ ಶೀತದ ಜೊತೆಗೇ ಗುರುತಿಸಿಕೊಂಡಿರುತ್ತದೆ. ಆದರೆ ಅದು ಉಸಿರಾಟದ ತೊಂದರೆ, ಉಬ್ಬಸ ಅಥವಾ ಎದೆನೋವನ್ನುಂಟು ಮಾಡಿದರೆ ಗಂಭೀರ ಕಳವಳಕ್ಕೆ ಕಾರಣವಾಗುತ್ತದೆ. ಉಸಿರಾಟಕ್ಕೆ ತೊಂದರೆಯು ನ್ಯುಮೋನಿಯಾ ಅಥವಾ ಬ್ರಾಂಕೈಟಿಸ್‌ನ ಸಂಕೇತವಾಗಿರಬಹುದು. ಎದೆನೋವು, ಎದೆ ಹಿಡಿದಂತಾಗುವುದು ಮತ್ತು ಉಸಿರಾಟಕ್ಕೆ ದಿಢೀರ್ ತೊಂದರೆ ಇವು ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ತಡೆಯನ್ನು ಸೂಚಿಸಬಹುದು.

ಸಾಮಾನ್ಯ ಶೀತದೊಂದಿಗೆ ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿದರೆ ಸಂಭಾವ್ಯ ಗಂಭೀರ ಕಾಯಿಲೆಗೆ ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News