×
Ad

ತುಮಕೂರು ವಿವಿಯಲ್ಲಿ ಇಂಗ್ಲಿಷ್ ಆಡಳಿತ ನಾಚಿಕೆಗೇಡು: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2017-11-22 18:06 IST

ಬೆಂಗಳೂರು, ನ.22: ತುಮಕೂರು ವಿಶ್ವವಿದ್ಯಾನಿಲಯದ ಆಡಳಿತ-ವ್ಯವಹಾರಗಳು ಇಂಗ್ಲಿಷ್‌ನಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದಿಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅವಮಾನಿಸುವ ರೀತಿಯಲ್ಲಿ ತುಮಕೂರು ವಿವಿಯ ಆಡಳಿತ ಸಿಬ್ಬಂದಿಗಳು ಇಂಗ್ಲಿಷ್‌ನ್ನೇ ಮುಖ್ಯ ವ್ಯವಹಾರಿಕ ಭಾಷೆಯನ್ನಾಗಿಸಿಕೊಂಡಿದ್ದಾರೆ. ಇದರಿಂದ ಕನ್ನಡ ಹೊರತು ಪಡಿಸಿ ಇತರೆ ವಿಷಯಗಳನ್ನು ಕನ್ನಡದಲ್ಲಿ ಪಿಎಚ್.ಡಿ ಮಂಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪಿಎಚ್.ಡಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯಗಳು ಸದಾ ವಿದ್ಯಾರ್ಥಿ ಸ್ನೇಹಿಯಾಗಿರಬೇಕು. ಆದರೆ, ತುಮಕೂರು ವಿವಿ ಅದಕ್ಕೆ ವ್ಯತಿರಿಕ್ತವಾಗಿದೆ. ಮುಂದಿನ ತಿಂಗಳೊಳಗಾಗಿ ವಿವಿಯಲ್ಲಿರುವ ಎಲ್ಲ ವಿಭಾಗದ ಆಡಳಿತ ಭಾಷೆ ಕನ್ನಡವಾಗಿರಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭಾಷೆಯ ವಿಷಯದಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಆದಾಗ್ಯು ಕನ್ನಡ ವಿರೋಧಿ ನಿಲುವನ್ನು ಮುಂದುವರೆಸಿದರೆ ಶಿಸ್ತು ಕ್ರಮಕ್ಕೆ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತುಮಕೂರು ವಿವಿಯ ಕುಲಪತಿಗೆ ಎಚ್ಚರಿಕೆ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಗೊತ್ತಿಲ್ಲದ ಅಧಿಕಾರಿಗಳು ಸರಕಾರದ ಆದೇಶವನ್ನು ಉಲ್ಲಂಘಿಸಿ ಇಂಗ್ಲಿಷ್‌ನಲ್ಲಿ ಆಡಳಿತ ವ್ಯವಹಾರ ನಡೆಸುತ್ತಿರುವುದು ಕಂಡುಬಂದಿದೆ. ಈ ಕೂಡಲೇ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕುಲಪತಿಗೆ ಸೂಚನೆ ನೀಡಿದ್ದೇನೆ.
-ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News