ಭಿನ್ನಾಭಿಪ್ರಾಯ ಶಮನಕ್ಕೆ ರಾಜ್ಯಾದ್ಯಂತ ಪ್ರವಾಸ: ಎಚ್.ಡಿ.ದೇವೇಗೌಡ
ಬೆಂಗಳೂರು, ನ.22: ರಾಜ್ಯದ ಕೆಲವೆಡೆ ಜೆಡಿಎಸ್ ಕಾರ್ಯಕರ್ತರು, ಮುಖಂಡರ ನಡುವೆ ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಯವಿದ್ದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಬುಧವಾರ ಕೊಪ್ಪಳದಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾರ್ಯಕರ್ತರ ನಡುವೆ ಐಕ್ಯತೆ ಮೂಡಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಕೊಪ್ಪಳ ಪ್ರವಾಸ ಕೈಗೊಂಡಿದ್ದೇನೆ. ಮುಂದಿನ ತಿಂಗಳು ಮೊದಲ ವಾರದಲ್ಲಿ ಪುನಃ ಕೊಪ್ಪಳಕ್ಕೆ ಬರಲಿದ್ದೇನೆ ಎಂದು ಮಾಹಿತಿ ನೀಡಿದರು.
ಕಳೆದ 10ವರ್ಷದ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತ ಜನತೆಗೆ ಹಲವು ವಿಷಯಗಳಲ್ಲಿ ಗೊಂದಲಕ್ಕೀಡು ಮಾಡಿದೆ. ಅಭಿವೃದ್ಧಿಯ ಕಲ್ಪನೆಯನ್ನೇ ತಿರುಗು ಮುರುಗು ಮಾಡಲಾಗಿದೆ. ಇದನ್ನು ಸರಿಪಡಿಸಿ ರಾಜ್ಯವನ್ನು ಸುಸ್ಥಿರ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಈ ಬಾರಿ ಜನತೆ ಜೆಡಿಎಸ್‌ಗೆ ಮತ ಹಾಕಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಹಾದಾಯಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಹಲವು ಬಾರಿ ಕೇಳಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಹಾದಾಯಿ ಪ್ರಕರಣವನ್ನು ಇತ್ಯರ್ಥ ಮಾಡಲು ಹೊರಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಜೆಡಿಎಸ್‌ನ ಹಿರಿಯ ಮುಖಂಡರ ಜತೆ ಚರ್ಚಿಸಿ, ಸಲಹೆಗಳನ್ನು ಪಡೆದು ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ತಿಳಿಸಿದ್ದೇನೆ. ಶೀಘ್ರವೇ ಪಟ್ಟಿ ಬಿಡುಗಡೆ ಮಾಡಲಾಗುವುದು.
-ಎಚ್.ಡಿ.ದೇವೇಗೌಡ, ರಾಷ್ಟ್ರಾಧ್ಯಕ್ಷ ಜೆಡಿಎಸ್