ಸಕ್ಕರೆ ಸಚಿವೆಗೆ ಕಬ್ಬಿನ ಬೆಲೆ ಏನು ಎಂಬುದೇ ತಿಳಿದಿಲ್ಲ: ಶಿವಾನಂದ ಗುರುಮಠ
ಬೆಂಗಳೂರು, ನ.22: ಎಸ್‌ಎಪಿ ಕಾನೂನಿನ ಅನ್ವಯ ಕಬ್ಬು ದರ ನಿಗದಿ ಮಾಡದೆ ರಾಜ್ಯ ಸರಕಾರ ಕಬ್ಬು ಬೆಳೆಗಾರರಿಗೆ ವಂಚನೆ ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಶಿವಾನಂದ ಗುರುಮಠ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಎಸ್‌ಎಪಿ ಕಾನೂನಿನ್ವಯ ಪ್ರತೀ ವರ್ಷ ದರ ನಿಗದಿ ಮಾಡಬೇಕಿರುವುದು ಸರಕಾರದ ಕರ್ತವ್ಯ. ಆದರೆ, ಕಳೆದ ಮೂರು ವರ್ಷಗಳಿಂದ ಕಬ್ಬಿಗೆ ದರ ನಿಗದಿ ಮಾಡದೆ ಕೇಂದ್ರ ಸರಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರವನ್ನೇ ನೀಡುತ್ತಿದೆ. ಈ ಮೂಲಕ ಕಾರ್ಖಾನೆ ಮಾಲಕರಿಗೆ ಲಾಭ ಮಾಡಿಕೊಡುತ್ತಿದೆ ಎಂದು ಆಪಾದಿಸಿದರು.
2014-15 ರಲ್ಲಿ 2200, 2015-16 ಮತ್ತು 2016-17 ರಲ್ಲಿ 2300 ಹಾಗೂ 2017-18 ರಲ್ಲಿ 2550 ರೂ.ಗಳನ್ನು ಕೇಂದ್ರ ಸರಕಾರ ನಿಗದಿ ಮಾಡಿದ್ದರೆ ರಾಜ್ಯ ಸರಕಾರವೂ ಇದನ್ನು ಮಾತ್ರ ನೀಡುವಂತೆ ಸೂಚನೆ ನೀಡಿದೆ ಎಂದ ಅವರು, ಕಬ್ಬು ದರ ನಿಗದಿ ಮಾಡುವ ಸಲುವಾಗಿ ರೈತ ಪ್ರತಿನಿಧಿಗಳನ್ನು ಒಳಗೊಂಡಂತೆ ನೇಮಿಸಿರುವ ರಾಜ್ಯ ಕಬ್ಬು ನಿಯಂತ್ರಣ ಮಂಡಳಿಯಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗಿದೆ ಹೊರತು ಲಾಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2017-18ರ ಹಂಗಾಮಿ ಸಕ್ಕರೆ ಕಾರ್ಖಾನೆಗಳೆ ಮುಂದೆ ಬಂದು 3200-3500 ರೂ.ಗಳು 1 ಟನ್ ಕಬ್ಬಿಗೆ ದರ ನೀಡಲು ಮುಂದಾಗಿದ್ದರೂ ಸರಕಾರ ಉತ್ತರ ಕರ್ನಾಟಕದ ಕಾರ್ಖಾನೆಗಳಿಗೆ 2700 ಹಾಗೂ ದಕ್ಷಿಣ ಕರ್ನಾಟಕದ ಕಾರ್ಖಾನೆಗಳಿಗೆ 2500 ದರ ನಿಗದಿ ಪಡಿಸಿದೆ. ಇದಕ್ಕೆಲ್ಲಾ ಕಾರಣ ಈ ಮಂಡಳಿಯೇ ಆಗಿದೆ. ಹೀಗಾಗಿ, ಈ ಮಂಡಳಿಯನ್ನು ವಿಸರ್ಜಿಸಬೇಕು ಎಂದು ಅವರು ಆಗ್ರಹಿಸಿದರು.
ಸಕ್ಕರೆ ಸಚಿವರಾದ ಗೀತಾ ಮಹದೇವ್ ಪ್ರಸಾದ್‌ಗೆ ಕಬ್ಬಿನ ಬೆಲೆ ಏನು ಎಂಬುದು ತಿಳಿದಿಲ್ಲ. ಆದ್ದರಿಂದ ಅವೈಜ್ಞಾನಿಕ ದರ ನಿಗದಿ ಮಾಡುತ್ತಿದ್ದಾರೆ. ಅಲ್ಲದೆ, ಮಂಡಳಿಯಲ್ಲಿರುವ ಅಧಿಕಾರಿಗಳು ಮತ್ತು ರೈತ ಪ್ರತಿನಿಧಿಗಳು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ. ಆದುದರಿಂದ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಕಬ್ಬಿಗೆ ನ್ಯಾಯಯುತವಾದ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.