ಬಿಎಸ್ ವೈ ಆಪ್ತ ಸೇರಿ 12 ಮಂದಿ ವಿರುದ್ಧ ಚಾರ್ಜ್‌ಶೀಟ್
ಬೆಮಗಳೂರು, ನ.22: ವಿನಯ್ ಅಪಹರಣ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್. ಸಂತೋಷ್ ಸೇರಿ 12 ಮಂದಿ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು 7ನೆ ಎಸಿಎಂಎಂ ನ್ಯಾಯಾಲಯಕ್ಕೆ 760 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಮೊದಲ ಆರೋಪಿಯನ್ನಾಗಿ ಎನ್.ಆರ್.ಸಂತೋಷ್ ಹೆಸರನ್ನು ನಮೂದಿಸಲಾಗಿದೆ.
ಅಪಹರಣ ಬಯಲು: ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ನಟಿಯೊಬ್ಬರನ್ನು ಬೆಂಗಳೂರಿನ ಅಶೋಕ ಹೊಟೇಲ್‌ನ ಕೊಠಡಿಗೆ ಬರುವಂತೆ 2016ರ ಡಿಸೆಂಬರ್ 21ರಂದು ಮೊಬೈಲ್‌ನ ವಾಟ್ಸಾಪ್ ಮೂಲಕ ಸಂದೇಶ ರವಾನಿಸಿದ್ದ. ಆದರೆ, ನಟಿ ವಾಟ್ಸಾಪ್ ಸಂದೇಶವನ್ನು ಸ್ಕ್ರೀನ್ ಶಾಟ್ ತೆಗೆದು ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಮೊಬೈಲ್‌ಗೆ ಕಳುಹಿಸಿದ್ದಳು. ಇದನ್ನು ತಿಳಿದ ಸಂತೋಷ್, ತನ್ನ ಬೆಂಬಲಿಗರೊಂದಿಗೆ ವಿನಯ್‌ನನ್ನು ಅಪಹರಣ ಮಾಡಲು ಯತ್ನಿಸಿದ್ದ ಎನ್ನುವ ಮಾಹಿತಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲು ನಟಿ ಅವರ ನಿವಾಸಕ್ಕೆ ಬಂದಿದ್ದ ವೇಳೆ ಸಂತೋಷ್ ಆಕೆಯ ಮೊಬೈಲ್ ಸಂಖ್ಯೆ ಪಡೆದು, ಸಂಪರ್ಕವನ್ನಿಟ್ಟುಕೊಂಡಿದ್ದ. ಇನ್ನು ವಿನಯ್ ಆಕೆಯೊಂದಿಗೆ ಈ ಮೊದಲೇ ಗೆಳೆತನ ಹೊಂದಿದ್ದ ಎಂದು ಹೇಳಲಾಗುತ್ತಿದೆ.