×
Ad

ನ.23ರಿಂದ ಹೂಡಿಕೆದಾರರ ಶೃಂಗಸಭೆ-2017

Update: 2017-11-22 22:23 IST

ಬೆಂಗಳೂರು, ನ.22: ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ನ.23 ಮತ್ತು 24 ರಂದು ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ‘ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ- 2017’ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಶೃಂಗಸಭೆಯ ಪೂರ್ವತಯಾರಿ ವೀಕ್ಷಣೆ ನಡೆಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಆರು ವಿವಿಧ ವಿಷಯಗಳ ಮೇಲೆ ವಿಚಾರ ಸಂಕಿರಣಗಳು ನಡೆಯಲಿದ್ದು, ವಿಷಯ ತಜ್ಞರು, ಉದ್ದಿಮೆದಾರರು, ಜನಪ್ರತಿನಿಧಿಗಳು ವಿಷಯ ಮಂಡನೆ ಮಾಡಲಿದ್ದಾರೆ. ಉದ್ದಿಮೆದಾರರಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ತಮ್ಮ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಲು ಉತ್ತಮ ಅವಕಾಶ ಸಿಗಲಿದೆ ಎಂದು ಹೇಳಿದರು.

ಶೃಂಗಸಭೆ ನಡೆಯುವ ಆವರಣದಲ್ಲಿ 1000 ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗಿದೆ. 300 ದೊಡ್ಡ ಕೈಗಾರಿಕೆಗಳು ಹಾಗೂ 700 ಕ್ಕೂ ಹೆಚ್ಚು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಭಾಗವಹಿಸಲಿವೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಹಾಗೂ ಅವರುಗಳ ನಡುವೆ ಒಡನಾಟ ಬೆಸೆಯಲು ಇದೊಂದು ಉತ್ತಮ ವೇದಿಕೆಯಾಗಿದ್ದು, ರಾಜ್ಯದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಉಚಿತವಾಗಿ ಮಳಿಗೆಗಳನ್ನು ನೀಡಲಾಗುತ್ತಿದೆ ಎಂದರು.

ಈ ಶೃಂಗ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಫಾಟಿಸಲಿದ್ದು, ಎರಡು ದಿನಗಳ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ ಸೇರಿದಂತೆ ಶ್ರೇಷ್ಠ ರಫ್ತು ಮತ್ತು ಶ್ರೇಷ್ಠ ಉತ್ಪಾದನಾ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಮೊದಲ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News