ಕೆಪಿಎಂಇ ಕಾಯ್ದೆ: ಜನಪರ ಅಂಶಗಳು ಕೈ ಬಿಟ್ಟಿದ್ದಕ್ಕೆ ಆಕ್ಷೇಪ

Update: 2017-11-22 16:57 GMT

ಬೆಂಗಳೂರು, ನ.22: ಸರಕಾರ ಸದನದಲ್ಲಿ ಮಂಡಿಸಿರುವ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಕಾಯ್ದೆ-2017ರಲ್ಲಿ ಜನಪರವಾದ ಅಂಶಗಳನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂದು ಕರ್ನಾಟಕ ಜನಾರೋಗ್ಯ ಚಳವಳಿ ಆಕ್ಷೇಪ ವ್ಯಕ್ತಪಡಿಸಿದೆ.

ಸರಕಾರ ತಯಾರಿಸಿದ್ದ ವಿಧೇಯಕದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸಲು ಹಾಗೂ ರೋಗಿಗಳ ಹಕ್ಕುಗಳನ್ನು ಕಾಪಾಡಲು ಉಪಬಂಧಗಳನ್ನು ಒಳಗೊಂಡಿತ್ತು. ಆದರೆ, ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾಲಕರನ್ನು ಸಂತೃಪ್ತಿಗೊಳಿಸಲು ಮಸೂದೆಯ ಕೆಲ ಅಂಶಗಳನ್ನು ದುರ್ಬಲಗೊಳಿಸಿದೆ. ಈ ಮಸೂದೆ ಮಂಡಿಸುವ ಸಮಯದಲ್ಲಿ ಖಾಸಗಿ ವೈದ್ಯಕೀಯ ಲಾಬಿ ಮತ್ತು ಮುಖ್ಯಮಂತ್ರಿಗಳ ನಡುವೆ ಗುಪ್ತ ಸಭೆ ನಡೆದಿರುವುದು ಖಂಡನೀಯ.

ಆರೋಗ್ಯ ಸೇವೆಗಳ ಹತೋಟಿ ಮೀರಿದ ವ್ಯಾಪಾರೀಕರಣವನ್ನು ನಿಯಂತ್ರಿಸುವಲ್ಲಿ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಖಾಸಗಿ ಆರೋಗ್ಯ ವಲಯದ ನಿಯಂತ್ರಣವು ಅತ್ಯಾವಶ್ಯಕವಾದ ಮೊದಲನೆ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ನಾಗರಿಕರ ಗುಂಪುಗಳು ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದವು. ಆದರೆ, ಅಂತಿಮವಾಗಿ ವಿಧೇಯಕ ಮಂಡನೆ ವೇಳೆಗೆ ಹಲವು ಜನಪರವಾದ ಅಂಶಗಳನ್ನು ಕೈ ಬಿಟಿ್ಟದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ವೈದ್ಯಕೀಯ ಸಂಘಟನೆಗಳು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಾ ಖಾಸಗಿ ವೈದ್ಯರನ್ನು ಬೀದಿಗಿಳಿದು ಪ್ರತಿಭಟಿಸುವ ಮಟ್ಟಿಗೆ ತಂದಿಟ್ಟಿದ್ದವು. ಅಲ್ಲದೆ, ಜೈಲು ಶಿಕ್ಷೆಯನ್ನು ಪದೇ ಪದೇ ಪ್ರಸ್ತಾಪ ಮಾಡುವ ಮೂಲಕ ಸಾರ್ವಜನಿಕರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದ್ದರು. ವೈದ್ಯರ ಸಂಘಗಳಲ್ಲಿ ಸದಸ್ಯರಾಗಿರುವವರು ಕಳೆದ ವಾರದ ಘಟನೆಯಲ್ಲಿ ತಮ್ಮ ಪಾತ್ರದ ಬಗ್ಗೆ ಸೂಕ್ಷ್ಮವಾಗಿ ಹಾಗೂ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಂಘಟನೆಯ ಮುಖಂಡರು ಮನವಿ ಮಾಡಿದ್ದಾರೆ.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆ ವಿರೋಧಿಸುತ್ತಾ, ನರಳುತ್ತಿರುವ ರೋಗಿಗಳ ಪರವಾಗಿ ನಿಲ್ಲದೆ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡುವ ಮೂಲಕ ವಿರೋಧ ಪಕ್ಷಗಳು ಜನಪರವಾಗಿ ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ತೋರಿಸಿವೆ. ಬಿಜೆಪಿ ನಾಯಕ ಕಾಯ್ದೆಯನ್ನೇ ರದ್ದು ಮಾಡುತ್ತೇವೆ ಎಂದು ಹೇಳಿಕೆ ನೀಡಿದರೆ, ಜೆಡಿಎಸ್ ನಾಯಕ ಕುಮಾರಸ್ವಾಮಿ ಹಣವಿಲ್ಲದಿದ್ದರೆ ಬಡವರು ಯಾಕೆ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ಹೇಳಿಕೆ ನೀಡುವ ಮೂಲಕ ತಮ್ಮ ಉದ್ದಟತನ ಪ್ರದರ್ಶಿಸಿದ್ದಾರೆ ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News