ಕೈದಿಗಳ ಅಸಹಜ ಸಾವಿನ ಕುರಿತು ಮಾಹಿತಿ ನೀಡಲು ಹಿರಿಯ ವಕೀಲ ಚಿನ್ನಪ್ಪಗೆ ಹೈಕೋರ್ಟ್ ಸೂಚನೆ

Update: 2017-11-22 17:03 GMT

ಬೆಂಗಳೂರು, ನ.22: ರಾಜ್ಯದ ಕಾರಾಗೃಹಗಳಲ್ಲಿ ನಡೆದಿರುವ ಕೈದಿಗಳ ಸಾವಿನ ಅಂಕಿ ಅಂಶಗಳು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಕ್ರಮಗಳ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಲು ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರಿಗೆ ಹೈಕೋರ್ಟ್ ಸೂಚಿಸಿದೆ.

ಕೈದಿಗಳ ಅಸಹಜ ಸಾವು ಹಾಗೂ ಜೈಲುಗಳ ಸುಧಾರಣೆ ದಿಸೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ನ್ಯಾಯಪೀಠ, ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಿಸಿ, ಕೈದಿಗಳ ಸಾವಿನ ಅಂಕಿ ಅಂಶಗಳ ವರದಿ ನೀಡಲು ಸೂಚಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ಇತ್ತೀಚೆಗೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಜೈಲಿನಲ್ಲಿ ಕೈದಿಗಳು ಹಾಗೂ ಅಪರಾಧ ಪ್ರಕರಣಗಳಲ್ಲಿ ಸಿಲುಕಿದ ಅಪ್ರಾಪ್ತರು ಬಾಲ ಮಂದಿರಗಳಲ್ಲಿ ಅಸಹಜ ಸಾವಿಗೆ ತುತ್ತಾಗುತ್ತಲೇ ಇದ್ದಾರೆ ಎಂದು ಆತಂಕ ವ್ಯಕ್ತಪಡಿಸಿತ್ತು.

2012ರಿಂದ 2015ರ ನಡುವಿನ ಅವಧಿಯಲ್ಲಿ ದೇಶದಾದ್ಯಂತ ಜೈಲು ಹಾಗೂ ಮಕ್ಕಳ ರಕ್ಷಣಾ ಮಂದಿರಗಳಲ್ಲಿ 1,382 ಅಸಹಜ ಸಾವು ಸಂಭವಿಸಿವೆ. ಇಂತಹ ಸಾವುಗಳನ್ನು ತಡೆಯಲು ಹಾಗೂ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಜೈಲುಗಳ ಕೈಪಿಡಿ 2016ಅನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ. ಈ ಕುರಿತಂತೆ ಡಿಸೆಂಬರ್ 31ರೊಳಗೆ ರಾಜ್ಯ ಸರಕಾರಗಳು ವರದಿ ಸಲ್ಲಿಸಬೇಕು ಎಂದು ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News