ದಿಲ್ಲಿಯಲ್ಲಿ ಕಳಸಾ-ಬಂಡೂರಿ ಹೋರಾಟ ಸಮಿತಿಯಿಂದ ಧರಣಿ

Update: 2017-11-22 17:07 GMT

ಬೆಂಗಳೂರು, ನ.22: ಕೇಂದ್ರ ಸರಕಾರಕ್ಕೆ ಕಾನೂನು ಸಲಹೆ ನೀಡುವಂತಹ ಸ್ಥಾನದಲ್ಲಿರುವ ಹಾಗೂ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿರುವ ಆತ್ಮಾರಾಮ್ ನಾಡಕರ್ಣಿ ಅವರು ಕಳಸಾ ಬಂಡೂರಿ ಹಾಗೂ ಮಹಾದಾಯಿ ನ್ಯಾಯಾಧೀಕರಣದಲ್ಲಿ ಗೋವಾ ಪರ ವಾದ ಮಂಡಿಸುತ್ತಿರುವುದು ಸರಿಯಲ್ಲ. ಹೀಗಾಗಿ, ಈ ಪ್ರಕರಣದಿಂದ ಅವರನ್ನು ಕೈಬಿಡಬೇಕು ಎಂದು ಕಳಸಾ ಬಂಡೂರಿ ಹೋರಾಟದ ನೇತೃತ್ವ ವಹಿಸಿರು ಡಾ.ಅಯ್ಯಪ್ಪ ಆಗ್ರಹಿಸಿದ್ದಾರೆ.

ಕಳೆದೆರಡು ದಿನಗಳಿಂದ ಹೊಸದಿಲ್ಲಿಯಲ್ಲಿ ಕಳಸಾ ಬಂಡೂರಿ ಹಾಗೂ ಮಹಾದಾಯಿ ಜೋಡಣೆಗೆ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಇಂಡಿಯಾ ಗೇಟ್ ಎದುರು ಮೌನ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಡಾ.ಅಯ್ಯಪ್ಪ, ಕೇಂದ್ರ ಸರಕಾರ ಮಹಾದಾಯಿ ವಿಷಯದಲ್ಲಿ ಗೋವಾ ಸರಕಾರದ ಪರ ತಮ್ಮ ಮೃದು ನೀತಿಯನ್ನು ತೋರಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಮಹಾದಾಯಿ ನ್ಯಾಯಾಧೀಕರಣದಲ್ಲಿ ಗೋವಾ ಪರ ವಾದ ಮಂಡಿಸುತ್ತಿರುವ ಆತ್ಮಾರಾಮ್ ನಾಡಕರ್ಣಿ ದೇಶದ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಕೇಂದ್ರ ಸರಕಾರಕ್ಕೆ ಕಾನೂನು ಸಲಹೆ ನೀಡುವ ಇಂತಹ ವ್ಯಕ್ತಿಗಳಿಂದ ನಿಷ್ಪಕ್ಷಪಾತ ಸಲಹೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದರು.

ರಾಜ್ಯದ ಪ್ರಮುಖ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣೆಯ ಸಂದರ್ಭದಲ್ಲಿ ಕೇವಲ ಮೂಗು ಒರೆಸುವ ಕಾರ್ಯದಲ್ಲಿ ತೊಡಗಿವೆ. ಇಂತಹ ಪಕ್ಷಗಳಿಂದ ಮಹಾದಾಯಿ ವಿಷಯದಲ್ಲಿ ನಾವು ಏನನ್ನೂ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ15 ದಿನಗಳೊಳಗೆ ಸಂತಸ ಸುದ್ದಿ ನೀಡುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಈಗ ಒಂದು ತಿಂಗಳು ಎನ್ನುತ್ತಿದ್ದಾರೆ. ಈ ಮೂಲಕ ತಮ್ಮ ದ್ವಂದ್ವ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಮಾತುಗಳನ್ನೇ ಬದಲಿಸುತ್ತಿರುವ ಯಡಿಯೂರಪ್ಪರಿಂದ ಒಳ್ಳೆಯ ಬೆಳವಣಿಗೆ ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಪರಿವರ್ತನಾ ಯಾತ್ರೆ ಹಾಗೂ ಇನ್ನಿತರೆ ಯಾತ್ರೆಗಳನ್ನು ಮಾಡುತ್ತಿರುವ ರಾಜಕೀಯ ಪಕ್ಷಗಳಿಗೆ ಈ ಚುನಾವಣೆಯ ಸಂದರ್ಭದಲ್ಲಿ ಸರಿಯಾದ ಪಾಠವನ್ನು ಉತ್ತರ ಕರ್ನಾಟಕದ ಜನರು ನೀಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಮಹಾದಾಯಿ ನ್ಯಾಯಾಧೀಕರಣಕ್ಕೆ ಭೇಟಿ ನೀಡಿದ್ದ ಪ್ರತಿಭಟನಾಕಾರರು ರಾಜ್ಯದ ಪರ ವಕಾಲತ್ತು ವಹಿಸುತ್ತಿರುವ ವಕೀಲರಾದ ಮೋಹನ್ ಕಾತರಕಿ, ಮಾರುತಿ ಬಿ ಝಿರಾಲಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಹೋರಾಟದಲ್ಲಿ ಮುಖಂಡರಾದ ಸತೀಶ್, ಅಮೃತ್ ಹಜಾರೆ, ಶೋಭಾ ಚಲುವಾದಿ, ಇಮಾಮ್ ಸಾಬ್ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

   
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News