ಪದ್ಮಾವತಿ ಸಿನೆಮಾ ವಿವಾದ: ‘ತಲೆ ಕಡಿಯಿರಿ’ ಹೇಳಿಕೆ ಖಂಡಿಸಿ ಪ್ರತಿಭಟನೆ

Update: 2017-11-22 17:09 GMT

ಬೆಂಗಳೂರು, ನ.22: ಬಹು ನಿರೀಕ್ಷಿತ ಪದ್ಮಾವತಿ ಸಿನೆಮಾ ಬಿಡುಗಡೆ ಸಂಬಂಧ ಬಿಜಿಪಿ ನಾಯಕರ ವಿರೋಧ ಹಾಗೂ ನಟಿ ದೀಪಿಕಾ ಪಡುಕೋಣೆ ತಲೆ ಕಡಿಯುವ ಹೇಳಿಕೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆ, ಎಸ್‌ಎಫ್‌ಐ ಸಂಘಟನೆ ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ಪದ್ಮಾವತಿ ಸಿನೆಮಾ ಬಿಡುಗಡೆಯೇ ಆಗಿಲ್ಲ. ಸಿನೆಮಾದಲ್ಲಿ ಅಂತಹ ವಿಷಯಗಳು ಏನಿದೆ ಎಂದೂ ತಿಳಿದಿಲ್ಲ. ಆದರೂ, ನಟಿ, ನಿರ್ದೇಶಕನ ಕೊಲೆಗೆ ಪ್ರೇರೇಪಿಸುವ ಹೇಳಿಕೆ ನೀಡುವುದು ಖಂಡನೀಯ. ಅಲ್ಲದೆ, ಒಂದೆಡೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಎನ್ನುವ ಇವರ ನಿಜ ಬಣ್ಣ ಬಯಲಾಗಿದೆ ಎಂದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ ಮಾತನಾಡಿ, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹಾಕುವ ಪ್ರಕ್ರಿಯೆ ಖಂಡನೀಯ. ದೇಶದ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತಿಲ್ಲ. ಸಿನಿಮಾ ಸೆನ್ಸಾರ್ ಮಂಡಳಿಯ ಮೇಲೆ ಅವರಿಗೆ ನಂಬಿಕೆ ಇಲ್ಲದಂತಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ಲಕ್ಷ್ಮೀ, ಬೆಂ.ಉತ್ತರ ಜಿಲ್ಲಾ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ಶಾರದಾ, ಅನುೂಯ, ಆಶಾ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News