ರವಿಶಂಕರ್ ಮಧ್ಯಸ್ಥಿಕೆ ನಿಷ್ಪಕ್ಷಪಾತವಾಗಿಲ್ಲ: ಪಿಎಫ್‌ಐ ಆರೋಪ

Update: 2017-11-22 17:42 GMT

ಬೆಂಗಳೂರು, ನ.22: ಬಾಬರಿ ಮಸೀದಿ ಹಾಗೂ ರಾಮ ಮಂದಿರ ವಿಷಯದಲ್ಲಿ ರವಿ ಶಂಕರ್ ಮಧ್ಯಸ್ಥಿಕೆ ನಿಷ್ಪಕ್ಷಪಾತವಾಗಿಲ್ಲ. ಬದಲಿಗೆ, ಅವರು ಮಸೀದಿ ವಿರುದ್ಧ ಮತ್ತು ಮಂದಿರದ ಪರವಾಗಿರುವ ಪಕ್ಷಪಾತಿ ವಕೀಲರಾಗಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ಹೇಳಿದ್ದಾರೆ.

ಕೆಲವು ಹಿಂದುಗಳು ಮತ್ತು ಮುಸ್ಲಿಮರ ಮಧ್ಯೆ ನಡೆದ ಮಾತುಕತೆಗಳ ಬಳಿಕ ರವಿಶಂಕರ್ ನೀಡಿರುವ ಹೇಳಿಕೆಗಳು ಅವರ ಮಧ್ಯಸ್ಥಿಕೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಿದೆ. "ತಾನು ಮಾತನಾಡಿದ ಅತ್ಯಧಿಕ ಮುಸ್ಲಿಮರು ವಿವಾದಿತ ಸ್ಥಳದಲ್ಲಿ ರಾಮ ಮಂದಿರದ ನಿರ್ಮಾಣವನ್ನು ವಿರೋಧಿಸುತ್ತಿಲ್ಲ" ಎಂದು ರವಿಶಂಕರ್ ಹೇಳಿದ್ದರು. ಅರ್ಥಾತ್ ಬಾಬರಿ ಮಸೀದ್‌ನ ಹಕ್ಕುಗಳಲ್ಲಿ ಮುಸ್ಲಿಮರು ಶರಣಾಗಲು ಸಿದ್ಧರಿದ್ದಾರೆ ಎಂಬ ದುರುದ್ದೇಶಿತ ಹೇಳಿಕೆಯನ್ನು ನೀಡಿದ್ದಾರೆ. ಬಾಬರಿ ಮಸೀದಿ ಸ್ಥಳದಲ್ಲಿ ರಾಮ ಜನ್ಮಸ್ಥಾನ ಎಂಬುದು ವಿವಾದಿತ ಪುರಾಣವಾಗಿದ್ದು, 1528ರಲ್ಲಿ ಬಾಬರಿ ಮಸೀದ್ ನಿರ್ಮಾಣ, 1949ರಲ್ಲಿ ಬಾಬರಿ ಮಸೀದ್ ಒಳಗಡೆ ವಿಗ್ರಹವನ್ನು ಸ್ಥಾಪಿಸಿರುವುದು ವಾಸ್ತವವಾಗಿದೆ ಎಂದಿದ್ದಾರೆ.

ಆದುದರಿಂದ ಬಾಬರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರ ಎಂಬ ವಿವಾದಿತ ಪುರಾಣದ ಬದಲಾಗಿ ಬಾಬರಿ ಮಸೀದ್ ಎಂಬ ಸತ್ಯ ಹೊರಬರಬೇಕಿದೆ. ರವಿ ಶಂಕರ್ ನಡೆಸಿದ ಚರ್ಚೆಗಳ ಹೇಳಿಕೆಗಳು ಕೇವಲ ಮಂದಿರ ನಿರ್ಮಾಣವನ್ನು ಕೇಂದ್ರೀಕರಿಸಿದೆ ಮತ್ತು ಧ್ವಂಸ ಮಾಡಿರುವ ಸ್ಥಳದಲ್ಲಿ ಮಸೀದ್ ಪುನರ್ ನಿರ್ಮಾಣದ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಈ ವಿಷಯದಲ್ಲಿ ಸಂಧಾನಗಳಿಗೆ ಕಾನೂನಿನಲ್ಲಿ ಯಾವುದೇ ಮಹತ್ವವಿಲ್ಲ ಮತ್ತು ಈ ವಿಷಯಗಳಿಗೆ ಇದು ಪರಿಹಾರ ವಾಗುವುದಿಲ್ಲ. ಹೀಗಾಗಿ, ಮುಸ್ಲಿಂ ನಾಯಕರು ಸಮಯವನ್ನು ವ್ಯರ್ಥ ಮಾಡಬಾರದು ಮತ್ತು ಯಾವುದೇ ಸ್ವಯಂ ಘೋಷಿತ ಸಂಧಾನಕಾರರ ವಂಚನೆಗೆ ಬಲಿಯಾಗಬಾರದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News