ಬೆಂಗಳೂರು ನಗರದಲ್ಲಿ ಶೀಘ್ರವೆ ಇಲೆಕ್ಟ್ರಿಕ್ ಬಸ್ ಸಂಚಾರ: ಸಚಿವ ರೇವಣ್ಣ

Update: 2017-11-22 18:05 GMT

ಬೆಳಗಾವಿ, ನ. 22: ಬೆಂಗಳೂರು ನಗರದಲ್ಲಿನ ಮಾಲಿನ್ಯ ನಿಯಂತ್ರಣ ತಡೆಗಟ್ಟುವ ಉದ್ದೇಶದಿಂದ ಇಲೆಕ್ಟ್ರಿಕ್ (ವಿದ್ಯುತ್ ಚಾಲಿತ) ಬಸ್ ಖರೀದಿ ಸಂಬಂಧ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಬೆಂಗಳೂರು ನಗರದಲ್ಲಿ ಇಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಎನ್.ಎ.ಹಾರೀಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಇಲೆಕ್ಟ್ರಿಕ್ ಬಸ್ ಖರೀದಿಸಲು ಹಲವು ರಿಯಾಯಿತಿಗಳನ್ನು ಕೇಂದ್ರಕ್ಕೆ ಕೋರಿದ್ದು, ಮತ್ತೊಂದು ಸುತ್ತಿನ ಮಾತುಕತೆಯ ನಂತರ ಹೊಸ ಬಸ್‍ಗಳ ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು.

ಕೆಎಸ್ಸಾರ್ಟಿಸಿ, ಬಿಎಚಿಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಲಾಭದತ್ತ ಕೊಂಡೊಯ್ಯಲು ಇಲಾಖೆ ಕ್ರಮ ಕೈಗೊಂಡಿದೆ. ಸಾರಿಗೆ ಇಲಾಖೆ ಸರಕಾರಕ್ಕೆ ಆದಾಯ ತರುವ ಇಲಾಖೆಯಾಗಿದೆ. ಈ ಇಲಾಖೆ ಅಧೀನದಲ್ಲಿರುವ ಸಂಸ್ಥೆಗಳನ್ನು ನಷ್ಟದಿಂದ ಹೊರ ತರಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ನಾಲ್ಕು ಕಡೆ ಸ್ಯಾಟ್‍ಲೈಟ್ ಬಸ್ ನಿಲ್ದಾಣ ನಿರ್ಮಾಣ: ಬೆಂಗಳೂರು ನಗರದ ಶಾಂತಿನಗರ, ಮೈಸೂರು ರಸ್ತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣಗಳ ಮಾದರಿಯಲ್ಲೇ ಕೆ.ಆರ್.ಪುರಂನಲ್ಲಿಯೂ ಸ್ಯಾಟ್ ಲೈಟ್ ಬಸ್ ನಿಲ್ದಾಣ ಪ್ರಾರಂಭಿಸಲಾಗುವುದು. ಅಲ್ಲದೆ, ಪೀಣ್ಯದಲ್ಲಿನ ಬಸವೇಶ್ವರ ಸ್ಯಾಟ್‍ಲೈಟ್ ಬಸ್ ನಿಲ್ದಾಣಕ್ಕೆ ಬಿಎಚಿಟಿಸಿ, ಮೆಟ್ರೋ ಹಾಗೂ ಖಾಸಗಿ ಬಸ್ ಸಂಪರ್ಕ ಕಲ್ಪಿಸುವ ಮೂಲಕ ಆ ಬಸ್ ನಿಲ್ದಾಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಹಾರೀಸ್, ಮೆಟ್ರೋ ಸಂಚಾರ ಇರುವ ಕಡೆ ಬಿಎಚಿಟಿಸಿಯಿಂದ ಮಿನಿಬಸ್ ಸಂಪರ್ಕ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು. ಅಲ್ಲದೆ, ಒಂದರಿಂದ ಹತ್ತನೆ ತರಗತಿಯವರೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ರೇವಣ್ಣ, ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News