ಭಾರತದ ರೇಟಿಂಗ್‌ನ್ನು ಮೂಡಿಸ್ ಹೆಚ್ಚಿಸಿದ ಬಳಿಕ ಟಾಮ್ ಮೂಡಿಯನ್ನು ಟ್ರಾಲ್ ಮಾಡಿದ್ದು ನಿಜಕ್ಕೂ ಸಿಪಿಎಂ ಕಾರ್ಯಕರ್ತರೇ?

Update: 2017-11-23 10:37 GMT

ಆಸ್ಟ್ರೇಲಿಯದ ಕ್ರಿಕೆಟಿಗ ಟಾಮ್ ಮೂಡಿ ಕಳೆದ ರವಿವಾರ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದರು. ಟಾಮ್ ಮೂಡಿಯನ್ನು ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆ ಮೂಡಿಸ್ ಎಂದು ಗೊಂದಲ ಮಾಡಿಕೊಂಡ ಸಿಪಿಎಂ ಕಾರ್ಯಕರ್ತರು ಅವರ ಫೇಸ್‌ಬುಕ್ ಪೇಜ್‌ನ ಮೇಲೆ ಅವಾಚ್ಯ ಶಬ್ದಗಳಿಂದ ಕೂಡಿದ ಟೀಕಾಪ್ರಹಾರ ನಡೆಸಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ಸೇರಿದಂತೆ ಇತರ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿದ್ದವು. ಮೂಡಿಸ್ ಭಾರತದ ರೇಟಿಂಗ್‌ನ್ನು ಮೇಲ್ದರ್ಜೆಗೇರಿಸಿರುವುದನ್ನು ಸಿಪಿಎಂ ಕಾಮ್ರೇಡ್ ಗಳಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಕೇರಳದಲ್ಲಿನ ಸಿಪಿಎಂ ಸೈಬರ್ ಯೋಧರು ಟಾಮ್ ಮೂಡಿಯನ್ನು ಟೀಕಿಸುವ ಮೂಲಕ ಸ್ವತಃ ನಗೆಪಾಟಲಾಗಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ'ದ ವರದಿಯು ಅಣಕಿಸಿತ್ತು.

ಆದರೆ ಭಾರತದ ರೇಟಿಂಗ್‌ನ್ನು ಮೂಡಿಸ್ ಹೆಚ್ಚಿಸಿದ ನಂತರ ಕ್ರಿಕೆಟಿಗ ಟಾಮ್ ಮೂಡಿಯನ್ನು ಟ್ರಾಲ್ ಮಾಡಿದವರು ಸಿಪಿಎಂ ಕಾರ್ಯಕರ್ತರಾಗಿರಲಿಲ್ಲ ಬದಲಿಗೆ ಸಂಘಪರಿವಾರದ ಬೆಂಬಲಿಗರು ಎಂದು altnews.in ವರದಿ ಮಾಡಿದೆ.

ನ.18ರಂದು ಮಧ್ಯಾಹ್ನ ಮೊದಲ ಬಾರಿಗೆ ದಿ ನ್ಯೂಸ್ ಮಿನಿಟ್ ಸಿಪಿಎಂ  ಕಾರ್ಯಕರ್ತರನ್ನು ಗೇಲಿ ಮಾಡಿ ವರದಿಯನ್ನು ಪ್ರಕಟಿಸಿತ್ತು. 30 ನಿಮಿಷಗಳ ಬಳಿಕ ಟೈಮ್ಸ್ ಆಫ್ ಇಂಡಿಯಾ ತನ್ನ ವರದಿಯನ್ನು ಪ್ರಕಟಿಸಿತ್ತು.

 ಟ್ವಿಟರ್ ಬಳಕೆದಾರ ರಾಹುಲ್ ರಾಜ್ ಈ ಬಗ್ಗೆ ಟ್ವೀಟಿಸಿದ್ದ ಮೊದಲಿಗರಲ್ಲಿ ಒಬ್ಬನಾಗಿದ್ದ. ಕೆಲವು ಫೇಸ್‌ಬುಕ್ ಐಡಿಗಳ ಸ್ಕ್ರೀನ್ ಶಾಟ್‌ಗಳನ್ನು ಪೋಸ್ಟ್ ಮಾಡಿ ಇವೆಲ್ಲ ಸಿಪಿಎಂ ಪರ ಅಕೌಂಟ್‌ಗಳಾಗಿವೆ ಎಂದಾತ ಬಣ್ಣಿಸಿದ್ದ. ಶೀಘ್ರವೇ ಸಿಪಿಎಂ ಕಾರ್ಯಕರ್ತರನ್ನು ಅಣಕಿಸಿ ಇನ್ನಷ್ಟು ಟ್ವೀಟ್‌ಗಳು ಹರಿದು ಬರತೊಡಗಿದ್ದವು.

 ಆದರೆ ಮೂಡಿಸ್ ರೇಟಿಂಗ್ ಏಜೆನ್ಸಿಯನ್ನು ಆಸ್ಟ್ರೇಲಿಯದ ಕ್ರಿಕೆಟಿಗ ಟಾಮ್ ಮೂಡಿ ಎಂದು ಭಾವಿಸಿದ್ದರೆನ್ನಲಾದವರ ಫೇಸ್‌ಬುಕ್ ಪ್ರೊಫೈಲ್‌ಗಳು ಬೇರೆಯದೇ ಕಥೆಯನ್ನು ಹೇಳುತ್ತಿವೆ. ಟಾಮ್ ಮೂಡಿಯನ್ನು ಅವರ ಫೇಸ್‌ಬುಕ್ ಪೇಜ್‌ನಲ್ಲಿ ಹಿಗ್ಗಾಮುಗ್ಗಾ ನಿಂದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಓರ್ವನಾಗಿದ್ದ ಒಲಿಂಪಿಯನ್ ಆ್ಯಂಥನಿ ಆ್ಯಡಂ ಎಂಬಾತ ಮೂಡಿಯವರ ಪೇಜ್‌ನಲ್ಲಿ ಗರಿಷ್ಠ ಸಂಖ್ಯೆಯ, ಅಂದರೆ 20ಕ್ಕೂ ಹೆಚ್ಚಿನ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದ. ಆತನ ಫೇಸ್‌ಬುಕ್ ಪ್ರೊಫೈಲ್ ಆತ ಸಿಪಿಎಂ ಕಾರ್ಯಕರ್ತನಲ್ಲ ಎನ್ನುವುದನ್ನು ಬಟಾಬಯಲಾಗಿಸಿತ್ತು.

ಸಿಪಿಎಂ ಕಾರ್ಯಕರ್ತರ ಸೋಗಿನಲ್ಲಿ ಸಂಭಾವ್ಯ ನಕಲಿ ಪ್ರೊಫೈಲ್‌ಗಳ ಸುದ್ದಿ ಟ್ವಿಟರ್‌ನಲ್ಲಿ ಹರಿದಾಡತೊಡಗಿದಾಗ ಈ ಒಲಿಂಪಿಯನ್ ತನ್ನ ಪ್ರೊಫೈಲ್‌ನಿಂದ ಎಲ್ಲವನ್ನೂ ಅಳಿಸಿ ಹಾಕಿದ್ದ. ಮೊದಲು ತನ್ನ ಡಿಪಿಯನ್ನು ಬದಲಿಸಿದ್ದ ಆತ ಈಗ ತನ್ನ ಫೇಸ್‌ಬುಕ್ ಖಾತೆಯನ್ನೇ ಅಳಿಸಿಬಿಟ್ಟಿದ್ದಾನೆ!

ಒಲಿಂಪಿಯನ್ ಸೇರಿದಂತೆ ಏಳು ಫೇಸ್‌ಬುಕ್ ಐಡಿಗಳ ಮೂಲಕ ಟಾಮ್ ಮೂಡಿಯ ವಿರುದ್ಧ ದಾಳಿ ನಡೆಸಲಾಗಿತ್ತು. ಇವುಗಳನ್ನೇಆಧರಿಸಿ 'ಕೇರಳದಲ್ಲಿನ ಸಿಪಿಎಂ ಸೈಬರ್ ಕಾಮ್ರೇಡ್‌ಗಳು ಮೂಡಿಯನ್ನು ಟೀಕಿಸುವ ಅವಸರದಲ್ಲಿ ತಾವೇ ಸ್ವತಃ ನಗೆಪಾಟಲಿಗೆ ಗುರಿಯಾಗಿದ್ದಾರೆ' ಎಂದು ರಾಹುಲ್ ರಾಜ್, ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ನ್ಯೂಸ್ ಮಿನಿಟ್‌ನ ಪ್ರಭೃತಿಗಳು ಅಣಕಿಸಿದ್ದರು. ಆದರೆ ವಾಸ್ತವದಲ್ಲಿ ಈ ಏಳೂ ಫೇಸ್‌ಬುಕ್ ಐಡಿಗಳು ಸಿಪಿಎಂ ಕಾರ್ಯಕರ್ತರದ್ದಲ್ಲ ಮತ್ತು ಅವು ಆರೆಸ್ಸೆಸ್ ಸಿದ್ಧಾಂತವನ್ನು ನೆಚ್ಚಿಕೊಂಡ ಅಕೌಂಟ್‌ಗಳಾಗಿದ್ದು, ಹಿಂದೆಲ್ಲ ಆರೆಸ್ಸೆಸ್ ಮತ್ತು ಬಿಜೆಪಿ ಪರವಾದ ಪೇಜ್‌ಗಳನ್ನು ಹಂಚಿಕೊಂಡಿದ್ದವು ಎನ್ನುವುದು ಬಹಿರಂಗಗೊಂಡಿದೆ.

ಈ ಪ್ರೊಫೈಲ್‌ಗಳನ್ನು @advaidism ಹ್ಯಾಂಡಲ್  ಟ್ವಿಟರ್‌ನಲ್ಲಿ ಮೊದಲು ಬಯಲುಗೊಳಿಸಿತ್ತು. ಈ ಖಾತೆದಾರ ಮತ್ತು ಆತನ ಸ್ನೇಹಿತರು ತುಂಬ ಶ್ರಮ ವಹಿಸಿ ಸಿಪಿಎಂ ಕಾರ್ಯಕರ್ತರ ವಿರುದ್ಧದ ವ್ಯವಸ್ಥಿತ ಸಂಚಿನ ವಿರುದ್ಧ ಎಲ್ಲ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಶೇರ್ ಮಾಡಿಕೊಂಡಿದ್ದರೂ ಟೈಮ್ಸ್ ಆಫ್ ಇಂಡಿಯಾ ಅಥವಾ ದಿ ನ್ಯೂಸ್ ಮಿನಿಟ್ ಇವುಗಳನ್ನು ಪ್ರಕಟಿಸಿ ಸುಳ್ಳುಸುದ್ದಿಯನ್ನು ವರದಿ ಮಾಡಿದ್ದ ತಮ್ಮ ಪಾಪವನ್ನು ತೊಳೆದುಕೊಳ್ಳುವ ಗೋಜಿಗೆ ಹೋಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News