ರಾಫೇಲ್ ವಿಮಾನಗಳ ಖರೀದಿಯಲ್ಲಿ 12,600 ಕೋ.ರೂ.ಉಳಿಸಿದ ಎನ್‌ಡಿಎ ಸರಕಾರ

Update: 2017-11-23 17:10 GMT

ಹೊಸದಿಲ್ಲಿ,ನ.23: ಹಿಂದಿನ ಯುಪಿಎ ಸರಕಾರವು ಒಪ್ಪಿಕೊಂಡಿದ್ದ ಷರತ್ತುಗಳಿಗೆ ಹೋಲಿಸಿದರೆ ಫ್ರಾನ್ಸ್‌ನಿಂದ 36 ರಾಫೇಲ್ ಯುದ್ಧವಿಮಾನಗಳ ಖರೀದಿ ವ್ಯವಹಾರದಲ್ಲಿ ಮೋದಿ ಸರಕಾರದ ಚೌಕಾಸಿಯ ಫಲವಾಗಿ ಬೆಲೆಗಳಲ್ಲಿ ಬರೋಬ್ಬರಿ 350 ಮಿ.ಯುರೋಗಳ ಕಡಿತವಾಗಿದೆ. ಜೊತೆಗೆ ಶಸ್ತ್ರಾಸ್ತ್ರಗಳು, ನಿರ್ವಹಣೆ ಮತ್ತು ತರಬೇತಿಗೆ ಸಂಬಂಧಿಸಿದಂತೆ ಇನ್ನೊಂದು 1,300 ಮಿ.ಯುರೋ ಉಳಿತಾಯವಾಗಲಿದೆ.

ಎನ್‌ಡಿಎ ಸರಕಾರದಡಿ ರಾಫೇಲ್ ವಿಮಾನಗಳ ಖರೀದಿ ವೆಚ್ಚದಲ್ಲಿ ಏರಿಕೆಯಾಗಿದೆ ಎಂಬ ಮುಖ್ಯ ಪ್ರತಿಪಕ್ಷ ಕಾಂಗ್ರೆಸ್‌ನ ಆರೋಪಗಳನ್ನು ತಳ್ಳಿಹಾಕಿದ ಮೂಲಗಳು, ಒಟ್ಟು 12,600 ಕೋ.ರೂ.ಗಳ ಉಳಿತಾಯವಾಗಲಿದೆ ಎಂದು ಹೇಳಿವೆ.

ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ರಾಫೇಲ್ ವಿಮಾನಗಳ ತಯಾರಿಕೆ ವೆಚ್ಚದಲ್ಲಿ ತೀವ್ರ ಮತ್ತು ವಿವರಣೆಯಿಲ್ಲದ ಏರಿಕೆಯಾಗಿದ್ದು, ಇದರಿಂದಾಗಿ ಸರಕಾರವು ಅತ್ಯಂತ ಅಗತ್ಯವಾಗಿರುವ ತಂತ್ರಜ್ಞಾನ ವರ್ಗಾವಣೆಯಿಲ್ಲದೆ 36 ವಿಮಾನಗಳನ್ನು ಖರೀದಿಸಲು ಮಾತ್ರ ಶಕ್ತವಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ವಕ್ತಾರರು, ಪ್ರತಿ ವಿಮಾನದ ಖರೀದಿ ವೆಚ್ಚವು 526 ಕೋ.ರೂ.ಗಳಿಂದ 1,570 ಕೋ.ರೂ.ಗೇರಿದೆ ಮತ್ತು ಸರಕಾರವು ಮಾಹಿತಿಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದೆ ಎಂದು ಹೇಳಿದ್ದರು.

126 ರಾಫೇಲ್ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದ್ದ ಯುಪಿಎ ಒಪ್ಪಂದದಡಿ 18 ವಿಮಾನಗಳನ್ನು ಫ್ಯೈಅವೇ ಸ್ಥಿತಿಯಲ್ಲಿ ಪೂರೈಸಬೇಕಿತ್ತು, ಆದರೆ ಎನ್‌ಡಿಎ ಚೌಕಾಸಿಯ ಮೂಲಕ ಈ ಸ್ಥಿತಿಯಲ್ಲಿ ಪೂರೈಸಬೇಕಾದ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಹೆಚ್ಚಿಸಿದೆ. ಯುಪಿಎ ಯೋಜನೆಯಡಿ ಪ್ರತಿ ಯುದ್ಧವಿಮಾನಕ್ಕೆ 100 ಮಿ.ಯುರೋ ಬೆಲೆಯಾಗುತ್ತಿದ್ದರೆ ಅದೀಗ 90 ಮಿಲಿಯನ್‌ಗೆ ಇಳಿದಿದೆ. ಅಲ್ಲದೆ ಈಗಿನ ಸರಕಾರವು ಮೀಟಿಯೋರ್ ಕ್ಷಿಪಣಿಗಳನ್ನೂ ಖರೀದಿಸಿದ್ದು ,ಇದು ಈ ಯುದ್ಧವಿಮಾನಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿವೆ ಎಂದೂ ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News