ರೈಲಿನ ಸೀಟಿನಡಿ ಮಲಗಿ ಪ್ರಯಾಣಿಸಿದ ಜೂನಿಯರ್ ಅಥ್ಲೀಟ್ ಗಳು

Update: 2017-11-23 18:55 GMT

ಹೊಸದಿಲ್ಲಿ, ನ.23: ವಿಜಯವಾಡದಲ್ಲಿ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ದಿಲ್ಲಿಗೆ ವಾಪಸಾಗುತ್ತಿದ್ದ ಸುಮಾರು 30 ಅಥ್ಲೀಟ್‌ಗಳ ಪೈಕಿ ಕೇವಲ ಇಬ್ಬರಿಗೆ ರೈಲು ಟಿಕೆಟ್ ಕಾಯ್ದಿರಿಸಿದ್ದು, ಉಳಿದವರು ರೈಲಿನ ಸೀಟಿನಡಿ, ಶೌಚಾಲಯದ ಬಾಗಿಲ ಬಳಿ ಮಲಗಿಕೊಂಡು ಹೈದರಾಬಾದ್‌ನಿಂದ ದಿಲ್ಲಿಗೆ ಪ್ರಯಾಣಿಸಿದ ಘಟನೆ ವರದಿಯಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ದಣಿದಿದ್ದ ಅಥ್ಲೀಟ್‌ಗಳು ಸೋಮವಾರ ರಾತ್ರಿ 9:30ಕ್ಕೆ ದಿಲ್ಲಿಯ ರೈಲು ಏರಿದ್ದರು. ಕೇವಲ ಇಬ್ಬರಿಗೆ ಮಾತ್ರ ಟಿಕೆಟ್ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಉಳಿದ ಆಟಗಾರರು ರೈಲಿನ ಸೀಟಿನ ಅಕ್ಕಪಕ್ಕ ಹಾಗೂ ತಾತ್ಕಾಲಿಕವಾಗಿ ಖಾಲಿಯಿದ್ದ ಸೀಟುಗಳಲ್ಲಿ ಕುಳಿತು ಪ್ರಯಾಣಿಸಿದ್ದರು. ಪ್ರಯಾಣಿಕರು ಬಂದಾಗ ಸೀಟು ಬಿಟ್ಟುಕೊಟ್ಟಿದ್ದರು. ‘‘ಎರಡು ದಿನ ಚಾಂಪಿಯನ್‌ಶಿಪ್‌ನಲ್ಲಿ ಆಡಿ ನಮಗೆ ತುಂಬಾ ಮೈಕೈ ನೋವಾಗಿತ್ತು. ಕೆಲವು ಅಥ್ಲೀಟ್‌ಗಳು ಕುಳಿತುಕೊಳ್ಳಲು ಆಸನವಿಲ್ಲದೇ ಕೆಲವು ಸಮಯ ನಿಂತುಕೊಂಡೇ ಇದ್ದರು. ಕೆಲವರು ರೈಲಿನ ಶೌಚಾಲಯದ ಬಳಿ ಮಲಗಿಕೊಂಡಿದ್ದರು’’ ಎಂದು ಡಿಸ್ಕಸ್ ಎಸೆತಗಾರ ಪ್ರದೀಪ್ ಅತ್ರಿ ಹೇಳಿದ್ದಾರೆ.

‘‘ನನಗೆ ಈಗಲೂ ಮೈಕೈನೋವಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗಿ ಫಿಸಿಯೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದೇನೆ. ನನಗೆ ಮೊದಲೇ ಮಾಂಸಖಂಡದ ಸೆಳೆತವಿತ್ತು. ರೈಲಿನಲ್ಲಿ ಪ್ರಯಾಣಿಸಿದ ಬಳಿಕ ಅದು ಮತ್ತಷ್ಟು ಹೆಚ್ಚಾಗಿದೆ’’ ಎಂದು ಇನ್ನೋರ್ವ ಅಥ್ಲೀಟ್ ಹೇಳಿದ್ದಾರೆ.

  ‘‘ಚಾಂಪಿಯನ್‌ಶಿಪ್ ಮುಂದೂಡಲ್ಪಟ್ಟಿರುವುದು ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. ಟೂರ್ನಿಯು ನ.10ಕ್ಕೆ ಆರಂಭವಾಗಬೇಕಾಗಿತ್ತು. ಆದರೆ ಅದು ನ.16ಕ್ಕೆ ಮುಂದೂಡಲ್ಪಟ್ಟಿತ್ತು. ದಿನಾಂಕ ಖಚಿತವಾಗದೇ ರೈಲಿನ ಟಿಕೆಟ್ ಮಾಡಲು ಸಾಧ್ಯವಾಗುವುದಿಲ್ಲ. ನಮಗೆ ಅ.19 ರಂದು ಟೂರ್ನಿಯ ದಿನಾಂಕ ಗೊತ್ತಾ ಗಿತ್ತು. ಆಗ ಟಿಕೆಟ್ ಬುಕ್ ಮಾಡಿದ್ದೆವು. ವಿಜಯವಾಡಕ್ಕೆ ತೆರಳಲು ಟಿಕೆಟ್ ಲಭಿಸಿತ್ತು. ಆದರೆ, ಟೂರ್ನಿಯು ಮುಂದೂಡಲ್ಪಟ್ಟ ಕಾರಣ ರಿಟರ್ನ್ ಟಿಕೆಟ್‌ನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ’’ ಎಂದು ದಿಲ್ಲಿ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಸಂದೀಪ್ ಮೆಹ್ತಾ ಹೇಳಿದ್ದಾರೆ.

 ‘‘ನಾಲ್ಕು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ದಿಲ್ಲಿಯ 120 ಅಥ್ಲೀಟ್‌ಗಳು ಭಾಗವಹಿಸಿದ್ದರು. ಹೆಚ್ಚಿನವರು ತಮ್ಮದೇ ಪ್ರಯಾಣದ ವ್ಯವಸ್ಥೆ ಮಾಡಿಕೊಂಡಿದ್ದರು. ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಡೆದಿತ್ತು’’ ಎಂದು ಅತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News