ಕಂಪ್ಯೂಟರ್‌ನಲ್ಲಿ ಕನ್ನಡ ಟೈಪ್ ಮಾಡಲು "ವಿವಿಧ ಕೀಲಿಮಣೆ ವಿನ್ಯಾಸಗಳು"

Update: 2017-11-25 17:02 GMT

ಟೆಪಿಂಗ್ ಕೆಲಸಕ್ಕೆ ಸೀಮಿತಗೊಳಿಸಿ ಕಂಪ್ಯೂಟರ್‌ನ್ನು ಇಂದಿಗೂ ಕೇವಲ ‘ಆಧುನಿಕ ಟೈಪ್‌ರೈಟರ್’ ನಂತೆ (ಗ್ಲೋರಿ ಫೈಡ್‌ಟೈಪ್‌ರೈಟರ್) ಬಳಸಲಾಗುತ್ತಿದೆ ಎಂಬುದು ಅತಿಶಯೋಕ್ತಿ ಯಲ್ಲ. ಇಂಗ್ಲಿಷ್ ಭಾಷೆಗೆ ಕ್ವೆರ್ಟಿ (QWERTY)ಕೀಲಿಮಣೆ (ಕೀ-ಬೋರ್ಡ್) ವಿನ್ಯಾಸವು ಏಕೈಕ ಸ್ಟಾಂಡರ್ಡ್ ವಿನ್ಯಾಸವಾಗಿ ಬಳಕೆಗೆ ಬಂದು ದಶಕಗಳೇ ಸಂದಿವೆ. ಇಂಗ್ಲಿಷೇತರ ಭಾಷೆಯ ಕಂಪ್ಯೂಟರ್ ಟೈಪಿಂಗ್‌ಗಾಗಿ ವಿವಿಧ ಕಾಲಘಟ್ಟದಲ್ಲಿ, ವಿವಿಧ ರೀತಿಯ ಬಳಕೆಕಾರರಿಗೆ ಅಗತ್ಯವಿದ್ದ, ವಿವಿಧ ವಿನ್ಯಾಸದ ಕೀಲಿಮ ಣೆಗಳನ್ನು ರೂಪಿಸಿ ತಂತ್ರಾಂಶಗಳಲ್ಲಿ ಅಳವಡಿಸುತ್ತಾ ಬರಲಾಗಿದೆ. ಕೇವಲ 26 ಅಕ್ಷರಗಳು ಇರುವ ಇಂಗ್ಲಿಷ್‌ನ ಪಠ್ಯವನ್ನು ಕಂಪ್ಯೂಟರ್‌ಗೆ ಊಡಿಸಲು ಕ್ವೆರ್ಟಿ (Qwerty)ಕೀಲಿಮಣೆ ಬಹಳ ಜನಪ್ರಿಯವಾಗಿದೆ. ಶಿಫ್ಟ್‌ಸಹಿತ ಮತ್ತು ಶಿಫ್ಟ್‌ರಹಿತ ಬಳಕೆಯಿಂದ 52 ಸಾಧ್ಯತೆಗಳು ದೊರೆಯುತ್ತವೆ. ಇದರಿಂದ ಇಂಗ್ಲಿಷ್‌ನ ಕ್ಯಾಪಿಟಲ್ ಮತ್ತು ಸ್ಮಾಲ್ ಲೆಟರ್‌ಗಳ ಪಠ್ಯ ಮೂಡಿಸಲು ಸಾಧ್ಯವಾಗಿದೆ.

ಇಂಗ್ಲಿಷ್‌ಗಿಂತ ಹೆಚ್ಚಿನ ಸಂಖ್ಯೆಯ ಮೂಲ ಅಕ್ಷರಗಳು, ಒತ್ತಕ್ಷರಗಳು ಮತ್ತು ಗುಣಿತಾಕ್ಷರಗಳಿರುವ ಭಾರತೀಯ ಭಾಷೆಗಳನ್ನೂ ಸಹ ಕಂಪ್ಯೂಟರ್‌ಗೆ ಊಡಿಸುವಲ್ಲಿ ಇದೇ ಕೀಲಿಮಣೆಯು ಬಳಕೆಯಲ್ಲಿರುವುದು ಆಶ್ಚರ್ಯದ ವಿಷಯ ವೇನಲ್ಲ. ಸ್ವರಗಳು ಮತ್ತು ವ್ಯಂಜನಗಳು ತಾವಾಗಿಯೇ ಸೇರ್ಪಡೆ ಗೊಂಡು ಗುಣಿತಾಕ್ಷರವಾಗುವಂತೆ ಸಂಯೋಜನಾ ತಂತ್ರವನ್ನು ರೂಪಿಸಿ ಭಾರತೀಯ ಭಾಷಾ ಲಿಪಿಯ ಪಠ್ಯವನ್ನು ಕಂಪ್ಯೂಟರಿನಲ್ಲಿ ಮೂಡಿಸುವ ಕೀಲಿಮಣೆ ವಿನ್ಯಾಸವನ್ನು ರೂಪಿಸಲಾಗಿದೆ. ಹೀಗಾಗಿ, ಇಂಗ್ಲಿಷ್‌ನ ಸಾಂಪ್ರದಾಯಿಕ ಕ್ವೆರ್ಟಿ ಕೀಲಿಮಣೆಯೇ ಇಂದಿಗೂ ಭಾರತೀಯ ಭಾಷೆಗಳ ಲಿಪಿ ಮೂಡಿಕೆಗೆ ಬಳಕೆಯಲ್ಲಿದೆ. ಶಿಫ್ಟ್ ಕೀಲಿಯಂತಹ ಕಾಂಬಿನೇಷನ್ ಕೀಲಿಗಳನ್ನು ಬಳಸಿ ಟೈಪಿಂಗ್ ಕಲಿಯುವಾಗ ಬಳಕೆದಾರನ ನೆನಪಿನ ಶಕ್ತಿಗೆ ಸ್ವಲ್ಪ ಒತ್ತಡ ಇರುವುದು ಸಹಜ. ಇದನ್ನು ತಪ್ಪಿಸಲು ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿದ ಕಾರಣ ಕಾಲ ಕ್ರಮೇಣ ವಿವಿಧ ಕೀಲಿಮಣೆ ವಿನ್ಯಾಸಗಳು ರೂಪುಗೊಂಡು ಬಳಕೆಗೆ ಬಂದಿವೆ.

ಕನ್ನಡದ ಮಾತುಗಳನ್ನು ಲಿಪಿಯನ್ನಾಗಿಸಿ ನೀಡುವ ತಂತ್ರಜ್ಞಾನವು ಆವಿಷ್ಕಾರಗೊಂಡು ಬಳಕೆಯಲ್ಲಿರುವಾಗ ಕೀಲಿಮಣೆ ವಿನ್ಯಾಸಗಳ ಕುರಿತು ಬರೆಯುವುದು ಕ್ಲೀಷೆಯಾಗುವುದಿಲ್ಲ. ಅಗಾಧವಾದ ಪಠ್ಯವನ್ನು ಡಿಜಿಟೈಸ್ ಮಾಡಲು ಇಂದಿಗೂ ಕೀಲಿಮಣೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಕಂಪ್ಯೂಟರ್ ತಂತ್ರಾಂಶಗಳಲ್ಲಿ ಕನ್ನಡ ಲಿಪಿಯನ್ನು ಯಶಸ್ವಿಯಾಗಿ ಬಳಸಲು ಕಾಲಕಾಲಕ್ಕೆ ಆವಿಷ್ಕಾರಗೊಂಡ ವೈವಿಧ್ಯಮಯ ಕೀಲಿಮಣೆ ವಿನ್ಯಾಸಗಳು ಸಹಕಾರಿಯಾಗಿವೆ. ಟೈಪಿಂಗ್‌ಗಾಗಿ ಹಲವು ಕೀಲಿಮಣೆ ವಿನ್ಯಾಸಗಳಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನು ತಂತ್ರಾಂಶಗಳು ಹೊಂದಿರುತ್ತವೆ. ತನಗೆ ಅಗತ್ಯ ಕಂಡ ಅಥವಾ ತಾನು ಈ ಮೊದಲೇ ಕಲಿತಿರುವ ವಿನ್ಯಾಸವನ್ನು ಆಯ್ದುಕೊಂಡು ಬಳಕೆದಾರನು ಟೈಪಿಂಗ್ ಮಾಡಬಹುದು. ವೈವಿಧ್ಯಮಯ ಕೀಲಿಮಣೆಗಳ ವಿನ್ಯಾಸಗಳು ಇರುವ ಕಾರಣ ಹೊಸದಾಗಿ ಕನ್ನಡ ಕಂಪ್ಯೂಟರ್ ಟೈಪಿಂಗ್ ಕಲಿಯುವವರಿಗೆ ಗೊಂದಲ ಉಂಟಾಗುವುದು ಸಹಜ. ಯಾವ ವಿನ್ಯಾಸವನ್ನು ತಾನು ಕಲಿಯಬೇಕು? ಕಲಿಯಲು ಸುಲಭವಾದ ವಿನ್ಯಾಸ ಯಾವುದು? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ಈ ಹಿಂದೆ, ಒಂದು ತಂತ್ರಾಂಶದಲ್ಲಿ ಲಭ್ಯವಿದ್ದ ಕೀಲಿಮಣೆ ವಿನ್ಯಾಸ ಮತ್ತೊಂದರಲ್ಲಿ ಬಳಕೆಗೆ ದೊರೆಯುತ್ತಿರಲಿಲ್ಲ. ಕಾಲಕಾಲಕ್ಕೆ ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಬೇರೆಬೇರೆ ವಿನ್ಯಾಸಗಳನ್ನು ಎಲ್ಲ ತಂತ್ರಾಂಶ ತಯಾರಕರು ನೀಡಿದ್ದರಿಂದ ಅನೇಕ ವಿನ್ಯಾಸಗಳಿಗೆ ಕಾರಣವಾಗಿದೆ. ಇಂತಹ ‘ಅನೇಕತೆ’ಗಳಿಗೆ ಕೊನೆಯಿಲ್ಲದಂತಾದಾಗ, ಬಳಕೆದಾರರೇ ತಮ್ಮ ಇಚ್ಛೆಯಂತೆ (ಕಸೆ್ಕೃುಿಸಬಲ್) ತಮ್ಮದೇ ವಿನ್ಯಾಸವನ್ನು ರೂಪಿಸಿಕೊಳ್ಳಬಹುದಾದ ಸೌಲಭ್ಯವನ್ನು ತಂತ್ರಾಂಶ ತಯಾರಕರು ಕೊಟ್ಟಿರುವುದೂ ಉಂಟು! ಕನ್ನಡಕ್ಕೊಂದು ಏಕರೂಪ (ಸ್ಟಾಂಡರ್ಡ್) ಕೀಲಿಮಣೆ ನಿಗದಿಯಾಗುವವರೆಗೂ ಅನೇಕ ಗೊಂದಲಗಳು ಮುಂದುವರಿದಿದ್ದವು. ಎಲ್ಲ ಗೊಂದಲಗಳ ನಿವಾರಣೆಗೆ ಕನ್ನಡಕ್ಕೆ ಒಂದು ಏಕರೂಪ ಕೀಲಿಮಣೆ ವಿನ್ಯಾಸವನ್ನು ಸರಕಾರವು 1998ರಲ್ಲಿಯೇ ಅನುಮೋದಿಸಿದೆ. ಅದೇ ಕೆ.ಪಿ.ರಾವ್ ವಿರಚಿತ ಫೊನೆಟಿಕ್ ಕೀಲಿಮಣೆ ವಿನ್ಯಾಸ. ಮೊತ್ತಮೊದಲ ಬಾರಿಗೆ ನುಡಿ ತಂತ್ರಾಂಶದಲ್ಲಿ ಅಧಿಕೃತವಾದ ಈ ಒಂದೇ ವಿನ್ಯಾಸವನ್ನು ಅಳವಡಿಸಿ ನೀಡಲಾಗಿದೆ.

ಕನ್ನಡ ಕಂಪ್ಯೂಟರ್ ಲಿಪಿತಂತ್ರಜ್ಞಾನದ ವಿವಿಧ ಕಾಲಘಟ್ಟಗಳಲ್ಲಿ ಬೆರಳಚ್ಚುಯಂತ್ರದ (ಟೈಪ್‌ರೈಟರ್) ವಿನ್ಯಾಸ ಮತ್ತು ಇನ್‌ಸ್ಕ್ರಿಪ್ಟ್ (ಇಂಡಿಯನ್ ಸ್ಕ್ರಿಪ್ಟ್) ವಿನ್ಯಾಸ ಮತ್ತು ಕೆ.ಪಿ.ರಾವ್ (ಕರ್ನಾಟಕ ಸರಕಾರದಿಂದ ಅಂಗೀಕೃತ) ವಿನ್ಯಾಸಗಳು ಇವೇ ಕೆಲವೇ ವಿನ್ಯಾಸಗಳು ಬಳಕೆಯಲ್ಲಿದ್ದವು. ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಕನ್ನಡ ಲಿಪಿತಂತ್ರಾಂಶಗಳು ಹೆಚ್ಚಿದಂತೆಲ್ಲಾ ಒಂದೊಂದು ಲಿಪಿತಂತ್ರಾಂಶದಲ್ಲಿ ಪ್ರತಿಯೊಬ್ಬ ತಯಾರಕರೂ ‘ಬಳಕೆಯ ಆಯ್ಕೆ’ಗಾಗಿ ವಿವಿಧ ರೀತಿಯ ವಿನ್ಯಾಸಗಳನ್ನು ನೀಡಲು ಆರಂಭಿಸಿದರು. ಇಂಗ್ಲಿಷ್ ಲಿಪಿಯನ್ನೇ ಬಳಸಿ ಬೆರಳಚ್ಚಿಸುವ ಮೂಲಕ ಕನ್ನಡದ ಪಠ್ಯವನ್ನು ಮೂಡಿಸುವ ಟ್ರಾನ್ಸ್‌ಲಿಟರೇಷನ್ ಕೀಲಿಮಣೆಯನ್ನೇ ಮುಖ್ಯವಾಗಿ ಪ್ರತಿಯೊಬ್ಬರೂ ಅಳವಡಿಸಿ ನೀಡಲಾರಂಭಿಸಿದರು. ಬಹುತೇಕರಿಗೆ ಕನ್ನಡವನ್ನು ಇಂಗ್ಲಿಷ್ ಮೂಲಕ ಟೈಪಿಸುವ ಅನಿವಾರ್ಯತೆ ಎದುರಾಯಿತು. ಕನ್ನಡ ಭಾಷಾಲಿಪಿ ಜ್ಞಾನ ಇಲ್ಲದವರಿಗೆ ಇಂದಿಗೂ ಇಂತಹ ವಿನ್ಯಾಸವೇ ಅಪ್ಯಾಯಮಾನವಾಗಿ ಕಾಣುತ್ತದೆ. ಆದರೆ, ಕನ್ನಡ ಭಾಷಿಕರಿಗೆ ಇಂಗ್ಲಿಷ್ ಆಲೋಚನೆಯ ಮೂಲಕ ಕನ್ನಡವನ್ನು ಟೈಪಿಸುವುದು ಕಿರಿಕಿರಿಯ ವಿಷಯವೇ ಸರಿ. ಕನ್ನಡವನ್ನು ಕನ್ನಡದಲ್ಲಿಯೇ ಆಲೋಚಿಸಿ ಟೈಪಿಸುವ ತರ್ಕಬದ್ಧ ವಿಧಾನಗಳಿರುವ, ಸರಳವಾದ ಕೀಲಿಮಣೆ ವಿನ್ಯಾಸದ ಅಗತ್ಯವಿತ್ತು. ನಾಡೋಜ ಡಾ.ಕೆ.ಪಿ.ರಾವ್ ಅದನ್ನು ಎಂಬತ್ತರ ದಶಕದಲ್ಲಿಯೇ ಸಾಧಿಸಿ ತೋರಿಸಿದ್ದರು.

ಸಾಂಪ್ರದಾಯಿಕ ಬೆರಳಚ್ಚುಯಂತ್ರದಲ್ಲಿ ಅಕ್ಷರಭಾಗಗಳನ್ನು ನೆನಪಿಟ್ಟುಕೊಂಡು ಪ್ರತೀ ಅಕ್ಷರಭಾಗ ಮೂಡಿಸಲು ಒಂದೊಂದು ಕೀಲಿಯನ್ನು ಮೂಡಿಸುವ ಕ್ರಮವನ್ನೇ ಕಂಪ್ಯೂಟರ್‌ಗೂ ಸಹ ಅಳವಡಿಸಿರುವುದನ್ನು ಬೆರಳಚ್ಚುಯಂತ್ರದ ವಿನ್ಯಾಸ (ಟೈಪ್‌ರೈಟರ್ ಲೇಔಟ್) ಎಂದು ಕರೆಯಲಾಗಿದೆ. ಉದಾಹರಣೆಗೆ, ‘ಯೋ’ ಎಂಬುದನ್ನು ಟೈಪಿಸಲು ಸೊನ್ನೆ, ಕೊಂಬು, ತಲೆಕಟ್ಟು, ಏತ್ವ, ಮತ್ತೊಂದು ಕೊಂಬು, ಇಳಿ ಹಾಗೂ ದೀರ್ಘ ಹೀಗೆ ಅಕ್ಷರಭಾಗಗಳನ್ನು ಕ್ರಮವಾಗಿ ಬೆರಳಚ್ಚಿಸಿ ಒಂದು ಪೂರ್ಣಾಕ್ಷರವನ್ನು ಮೂಡಿಸುವ ಕ್ರಮ.  ಬೆರಳಚ್ಚಿಸಿದಾಗ ‘ಕ’ ಎಂದೂ, ್ಞ್ಞ ಒತ್ತಿದಾಗ ‘ನ್ನ’ ಎಂದೂ,  ಒತ್ತಿದಾಗ ‘ಡ’ ಎಂದು ಅಕ್ಷರ ಮೂಡಿಸುವ, ಒಟ್ಟಾರೆ ಓಚ್ಞ್ಞ ಎಂದು ಬೆರಳಚ್ಚಿಸಿದರೆ ಅದು ‘ಕನ್ನಡ’ ಎಂದು ಮೂಡುವ ವಿನ್ಯಾಸವನ್ನು ಇಂಗ್ಲಿಷ್ ಲಿಪ್ಯಂತರಣ ವಿನ್ಯಾಸ (ಟ್ರಾನ್ಸ್‌ಲಿಟರೇಷನ್ ಲೇಔಟ್) ಎನ್ನಲಾಗಿದೆ. ಕೀಲಿಮಣೆಯಲ್ಲಿ, ಎಡಗೈ ಬೆರಳುಗಳನ್ನು ಬಳಸುವ ಸ್ಥಾನಗಳಲ್ಲಿ ಸ್ವರಗಳನ್ನು ಹಾಗೂ ಬಲಗೈ ಬೆರಳುಗಳನ್ನು ಬಳಸುವ ಸ್ಥಾನಗಳಲ್ಲಿ ವ್ಯಂಜನಗಳನ್ನು ನಿಗದಿಪಡಿಸಿರುವ ವಿನ್ಯಾಸವನ್ನು ‘ಇನ್‌ಸ್ಕ್ರಿಪ್ಟ್ (ಇಂಡಿಯನ್ ಸ್ಕ್ರಿಪ್ಟ್) ವಿನ್ಯಾಸ ಎಂದು ಕರೆಯಲಾಗಿದೆ. ಎಲ್ಲಾ ಭಾರತೀಯಭಾಷೆಗಳಿಗಾಗಿ ಏಕರೂಪದ ಕೀಲಿಮಣೆ ವಿನ್ಯಾಸವನ್ನು ನಿಗದಿಪಡಿ ಸುವಾಗ ಈ ವಿನ್ಯಾಸವನ್ನು ಕನ್ನಡಕ್ಕೂ ಸಹ ನಿಗದಿಪಡಿಸಲಾಯಿತು. ಇಂದಿಗೂ ಹಲವು ತಂತ್ರಾಂಶಗಳಲ್ಲಿ ಈ ವಿನ್ಯಾಸವನ್ನು ಅಳವಡಿಸಿ ನೀಡಲಾಗುತ್ತಿದೆ. ಈ ವಿನ್ಯಾಸ ಹೆಚ್ಚು ಬಳಕೆಯಲ್ಲಿಲ್ಲ.

ಮ್ಯಾನುವಲ್ ಟೈಪ್‌ರೈಟರ್ ಬಳಸುತ್ತಿದ್ದ ಟೈಪಿಸ್ಟ್‌ಗಳೇ ಕನ್ನಡವನ್ನು ಟೈಪ್‌ಮಾಡಬೇಕಾದ ಕಾರಣದಿಂದ ಮೊದಲಿಗೆ ಟೈಪ್‌ರೈಟರ್ ವಿನ್ಯಾಸವು ಬಳಕೆಗೆ ಬಂತು. ನಂತರದಲ್ಲಿ ಟ್ರಾನ್ಸ್ ಲಿಟರೇಷನ್ ವಿನ್ಯಾಸವು ಬಳಕೆಗೆ ಬಂತು. ಆ ನಂತರದಲ್ಲಿ ಧ್ವನ್ಯಾತ್ಮಕ, ಅಂದರೆ, ಫೊನೆಟಿಕ್ ವಿನ್ಯಾಸ ಬಂತು. ತದನಂತರ ಇನ್‌ಸ್ಕ್ರಿಪ್ಟ್ ವಿನ್ಯಾಸ ಬಳಕೆಗೆ ಬಂತು.

ಇಂಗ್ಲಿಷ್‌ನ 26 ಕೀಲಿಗಳನ್ನೇ ಬಳಸಿ, ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ, ಇಂಗ್ಲಿಷ್ ಕೀಲಿಯ ಸ್ಥಾನದಲ್ಲಿಯೇ ಇರುವ ಕನ್ನಡದ ಮೂಲಾಕ್ಷರದ ಕೀಲಿಗಳನ್ನಷ್ಟೇ ಬಳಸಿ ತರ್ಕಬದ್ಧವಾಗಿ ಕನ್ನಡವನ್ನು ಟೈಪಿಸಬಹುದಾದ ವಿನ್ಯಾಸ ಎಂದರೆ ಅದು ಧ್ವನ್ಯಾತ್ಮಕ ಕೀಲಿಮಣೆ ವಿನ್ಯಾಸ. (‘ನುಡಿ ವಿನ್ಯಾಸ’). ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಹೊಸದಾಗಿ ಕನ್ನಡ ಟೈಪಿಂಗ್ ಕಲಿಯುವವರಿಗೆ ಕೆ.ಪಿ.ರಾವ್ ವಿನ್ಯಾಸ ಸೂಕ್ತವಾಗಿದೆ.

Writer - ಡಾ.ಎ.ಸತ್ಯನಾರಾಯಣ

contributor

Editor - ಡಾ.ಎ.ಸತ್ಯನಾರಾಯಣ

contributor

Similar News