ಆದಿವಾಸಿ ನಾಯಕ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ

Update: 2017-11-25 17:41 GMT

ಬಿರ್ಸಾ ಮುಂಡಾ ಈ ಹೆಸರೇ ಭಾರತದ ಅದರಲ್ಲೂ ಮಧ್ಯ ಭಾರತದ ಬುಡಕಟ್ಟು ಜನಾಂಗಗಳಲ್ಲಿ ಈಗಲೂ ಹೋರಾಟದ ರೋಮಾಂಚನ ಮೂಡಿಸುತ್ತದೆ. ಇಂದು ಬಿರ್ಸಾ ಮುಂಡಾ ಹೆಸರು ಜನಜನಿತ.

ಬಿರ್ಸಾ ಮುಂಡಾ 1875ರ ನವೆಂಬರ್ 15 ರಂದು ಹುಟ್ಟಿದ ಎಂದು ಹೇಳಲಾಗುತ್ತದೆ. ತಂದೆ ಸುಗಾನ ಮುಂಡಾ, ತಾಯಿ ಕರ್ಮ ಹಟು, ಅಂದು ಬಂಗಾಳ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬಿಹಾರಿನ ಉಲಿಹಟದಲ್ಲಿ ಈತ ಹುಟ್ಟಿದ್ದು. ಮುಂಡಾ ಎಂಬ ಬುಡಕಟ್ಟು ಸಮುದಾಯದಲ್ಲಿ ತೀವ್ರ ಬಡತನದ ಮಧ್ಯೆ ಬೆಳೆದ ಬಿರ್ಸಾ ಮುಂಡಾ. ಬಿರ್ಸಾ ಎಂದರೆ ಬುಡ ಕಟ್ಟು ಭಾಷೆಯಲ್ಲಿ ಗುರುವಾರ ಎಂದು. ಈತ ಹುಟ್ಟಿದ್ದು ಗುರುವಾರದ ದಿನವಾದ್ದರಿಂದ ಅದೇ ಹೆಸರನ್ನೇ ಇವನಿಗೆ ಇಡಲಾಯಿತು. ಬಿರ್ಸಾ ನಿಗೆ ಅಲ್ಪ ವಿದ್ಯಾಭ್ಯಾಸಕ್ಕೆ ಅವಕಾಶ ಸಿಕ್ಕಿತ್ತು. ಆತ ಕೊಳಲು ಹಾಗೂ ಕುಂಬಳದ ಬಿರಡೆಯಿಂದ ಮಾಡಿರುವ ‘ಟ್ಯೂಲಾ’ ಎಂಬ ವಾದ್ಯ ಗಳನ್ನು ನುಡಿಸುತ್ತಿದ್ದ ಆ ಭಾಗದಲ್ಲಿ ಜರ್ಮನ್ ಹಾಗೂ ಕ್ರೈಸ್ತ ಮಿಷನರಿ ಗಳು ಕಾರ್ಯನಿರ್ವಹಿಸುತ್ತಿದ್ದುದು ಬಿರ್ಸಾ ಮುಂಡಾ ವಿದ್ಯಾಭ್ಯಾಸ ಪಡೆಯಲು ನಂತರ ಕ್ರೈಸ್ತನಾಗಿ ಪರಿವರ್ತನೆಗೊಳ್ಳಲು ಕಾರಣವಾ ಯಿತು. ಆದರೆ ಅವನ ಕುಟುಂಬ ಕ್ರೈಸ್ತರಾಗಿ ನಂತರ ಮುಂದುವರಿ ಯಲಿಲ್ಲ. ಅದು ಬುಡಕಟ್ಟು ಸಂಸ್ಕೃತಿಗೆ ಹಾನಿ ಮಾಡುತ್ತದೆ ಎಂಬು ದನ್ನು ಮನಗಂಡಿದ್ದನು. ಬುಡಕಟ್ಟು ಸಾಮೂಹಿಕತೆಯ ನೆಲೆ ಹಾಗೂ ಮೌಲ್ಯಗಳ ಮೇಲೆ ವಸಾಹತುಶಾಹಿ ಬ್ರಿಟಿಷರು ಹಾಗೂ ಕ್ರೈಸ್ತ ಮಿಷನರಿಗಳು ದಾಳಿ ಮಾಡುತ್ತಾ ಆ ಸಮುದಾಯ ಗಳನ್ನು ದೊಡ್ಡ ಭೂಮಾಲಕರ ಜೀತದಾಳುಗಳ ನ್ನಾಗಿ ಪರಿವರ್ತಿಸುತ್ತಾ ಅವರುಗಳಿರುವ ಭೂಪ್ರ ದೇಶದಿಂದ ನಿರ್ವಸಿತರನ್ನಾಗಿ ಮಾಡುತ್ತಿರುವುದನ್ನು ಮುಂಡಾ ಗ್ರಹಿಸಿ ಬ್ರಿಟಿಷ್ ವಸಾಹತುಶಾಹಿ ವಿರೋಧಹೋರಾಟಗಳಲ್ಲಿ ಸಕ್ರಿಯನಾದ.

1886-1890 ರವರೆಗೆ ಅದೇ ರಾಜ್ಯದ ಚಾಯ್‌ಬಸ ಎಂಬಲ್ಲಿ ಬಂಧು ವೊಬ್ಬರ ಮನೆಯಲ್ಲಿ ಕಳೆದಿದ್ದ ಬಿರ್ಸಾ ಮುಂಡಾ. ಇದಕ್ಕೆ ಕಾರಣ ಬಡತನವಾಗಿತ್ತು. ಅದಾಗಲೇ ಅಲ್ಲಿ ವಸಾಹತುಶಾಹಿ ವಿರೋಧಿ ಹೋರಾಟಗಳು ನಡೆಯುತ್ತಿದ್ದವು. ಅದನ್ನು ‘ಸರ್ದಾರ್’ ಚಳವಳಿ ಎಂದು ಕರೆಯಲಾಗುತ್ತದೆ. ಬುಡಕಟ್ಟು ಸಮುದಾಯಗಳ ಪರಂಪರಾಗತ ಹಕ್ಕುಗಳನ್ನು ಮೊಟಕುಗೊಳಿಸಿ ನಿರ್ಬಂಧಗಳನ್ನು ಹೇರುತ್ತಿದುದ್ದು ಆದಿವಾಸಿ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬಿರ್ಸಾ ಮುಂಡಾ ಬ್ರಿಟಿಷ್ ವಸಾಹತುಶಾಹಿಗಳ ಈ ಎಲ್ಲಾ ದಮನಕಾಂಡಗಳನ್ನು ಎದುರಿಸಲು ಸಶಸ್ತ್ರ ಬಂಡಾಯ ಆವಶ್ಯಕವೆಂದು ಗ್ರಹಿಸಿ ಬುಡಕಟ್ಟು ಸೇನೆಯನ್ನು ಸಂಘಟಿಸಿದ. ಕೇವಲ ಮುಂಡಾ ಬುಡಕಟ್ಟನ್ನು ಮಾತ್ರವಲ್ಲದೆ ಒರಾಯ, ಖಾರಿಯ ಮೊದಲಾದ ಆ ಭಾಗದ ಬುಡಕಟ್ಟುಗಳನ್ನು ಸೇನೆಯಲ್ಲಿ ಸಂಘಟಿಸಿದ. ಗೆರಿಲ್ಲಾ ಯುದ್ಧತಂತ್ರದ ಮೂಲಕ ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯ ಸಾರಿದ.

‘‘ರಾಣಿಯ ಸಾಮ್ರಾಜ್ಯ ಕೊನೆಯಾಗಲಿ ನಮ್ಮ ಸಾಮ್ರಾಜ್ಯ ನೆಲೆ ಗೊಳ್ಳಲಿ’’ ಎಂಬುದು ಈ ಸೇನೆಯು ನೀಡಿದ ಕರೆಯಾಗಿತ್ತು. ಬಿರ್ಸಾ ಮುಂಡಾನ ಈ ಕರೆ ಆಗ ಆದಿವಾಸಿ ಸಮುದಾಯಗಳಲ್ಲಿ ಬಹಳ ಪರಿಣಾಮ ಕಾರಿಯಾದುದಾಗಿತ್ತು. ಬಿರ್ಸಾ ಮುಂಡಾ ಮತ್ತವನ ಸಂಗಾತಿಗಳು ನಡೆಸಿದ ಈ ಬಂಡಾಯ ನಿರ್ದಿಷ್ಟವಾಗಿ ಮಧ್ಯ ಭಾರತದಾದ್ಯಂತ ಬುಡಕಟ್ಟು ಸಮುದಾಯಗಳು ಬ್ರಿಟಿಷರ ವಿರುದ್ಧ ಬಂಡೇಳುವಂತೆ ಮಾಡಿತು. ಇದರ ಪ್ರಭಾವ ದೇಶದ ಹಲವು ಭಾಗಗಳಿಗೆ ಹರಡಿತು. ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಆದಿವಾಸಿ ಬುಡಕಟ್ಟು ಸಮು ದಾಯಗಳದ್ದು ಬಹಳ ಮಹತ್ವದ್ದಾಗಿದೆ. ಆದರೆ ಚರಿತ್ರೆಯಲ್ಲಿ ಈ ಹೋರಾಟಗಳಿಗೆ ಸರಿಯಾದ ಸ್ಥಾನ ಇನ್ನೂ ಸಿಕ್ಕಿಲ್ಲ ಎನ್ನುವುದು ವಾಸ್ತವ.

ಬಿರ್ಸಾ ಮುಂಡಾನಂತೆ, ಜಾವರಾ ಪಹಾರಿಯಾ, ಟೆಲ್ಕಾ ಮಜಿ, ಸಿದು, ಕಾನೂ ಮುರ್ಮುರಂತಹ ನಾಯಕರು ಮುಂಡಾ, ಪಹಾರಿಯಾ ಕೋಲ್, ಸಂತಾಲ್, ಭೀಲ್ ಹೀಗೆ ಹಲವಾರು ಆದಿವಾಸಿ ಬುಡಕಟ್ಟು ಸಮುದಾಯಗಳ ಧೀರೋದಾತ್ತ ಹೋರಾಟಗಳಿಗೆ ನೇತೃತ್ವ ನೀಡಿದ್ದರು.

ಆದಿವಾಸಿಗಳ ಈ ಎಲ್ಲಾ ಸಶಸ್ತ್ರ ಬಂಡಾಯಗಳಿಂದಾಗಿ ಅನಿವಾರ್ಯ ವಾಗಿ ಆಗಿನ ಬ್ರಿಟಿಷ್ ವಸಾಹತುಶಾಹಿ ಸರಕಾರವು ಆದಿವಾಸಿ ಬುಡಕಟ್ಟು ಗಳು ವಾಸವಿರುವ ಪ್ರದೇಶಗಳಿಗೆ ಇತರರು ಸುಲಭವಾಗಿ ಪ್ರವೇಶಿಸಿಆಕ್ರಮಿಸಿಕೊಳ್ಳಲು ಸಾಧ್ಯವಾಗದಂತಹ ಕಾನೂನನ್ನು ರೂಪಿಸ ಬೇಕಾಯಿತು. ಭಾರತದ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಬಿರ್ಸಾ ಮುಂಡಾನ ನೇತೃತ್ವದಲ್ಲಿ ನಡೆದ ಹೋರಾಟ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಆದಿವಾಸಿ ಬುಡಕಟ್ಟುಗಳು ನಡೆಸಿದ ಬ್ರಿಟಿಷ್ ವಿರೋಧಿ ಪ್ರಥಮ ಸಶಸ್ತ್ರದಂಗೆಯೆಂದೂ ಬಿರ್ಸಾ ಮುಂಡಾನ ನೇತೃತ್ವದ ಹೋರಾಟವನ್ನು ಗುರುತಿಸಲಾಗುತ್ತಿದೆ.

ಈ ಹೋರಾಟಗಳನ್ನು ಸುಲಭವಾಗಿ ದಮನಿಸಲು ಬ್ರಿಟಿಷರಿಗೆ ಸಾಧ್ಯ ವಾಗಲಿಲ್ಲ. ಹಾಗಾಗಿ ಆದಿವಾಸಿಗಳ ಪರ ಎನ್ನುವಂತಹ ಕಾನೂನುಗಳನ್ನು ರೂಪಿಸುವ ಜಾಣತಂತ್ರಗಳನ್ನು ಆ ಸರಕಾರ ಅನುಸರಿಸಿತ್ತು.

ಬ್ರಿಟಿಷ್ ಪಡೆಗಳು ಬಿರ್ಸಾನನ್ನು ಆತ ತನ್ನ ಗೆರಿಲ್ಲಾ ಪಡೆಯೊಂದಿಗೆ ನಿದ್ರಿಸಿದ್ದ ಸಮಯದಲ್ಲಿ ದಾಳಿ ನಡೆಸಿ 1900 ರ ಮಾರ್ಚ್ 3 ರಂದು ಬಂಧಿಸಿ ರಾಂಚಿಯ ಕಾರಾಗೃಹದಲ್ಲಿ ಕೂಡಿಹಾಕಿದರು. ಅಲ್ಲೇ ಅದೇವರ್ಷದ ಜೂನ್ 9 ರಂದು ಬಿರ್ಸಾ ಮುಂಡಾ ತನ್ನ ಕೊನೆಯುಸಿರೆಳೆ ಯುತ್ತಾನೆ. ಕಾಲರಾದಿಂದ ಮರಣ ಸಂಭವಿಸಿತು ಎಂದು ಸರಕಾರ ಹೇಳಿದ್ದರೂ, ಅದು ಸುಳ್ಳು, ಸರಕಾರವೇ ಕಾರಾಗೃಹದಲ್ಲಿ ನೀಡುವ ಆಹಾರದ ಮೂಲಕ ವಿಷ ನೀಡಿ ಕೊಂದು ಹಾಕಿದೆ ಎಂಬ ವರದಿಗಳಿವೆ. ಕೊನೆಯುಸಿರೆಳೆಯುವಾಗ ಆತನ ವಯಸ್ಸು ಕೇವಲ 24. ಎಳೇ ವಯಸ್ಸಿನಲ್ಲಿ ಮಹತ್ತರ ಹೋರಾಟಗಾರನಾಗಿ, ಸಂಘ ಟಕನಾಗಿ, ಗೆರಿಲ್ಲಾ ಯುದ್ಧ ನಿಪುಣನಾಗಿ, ಆದಿವಾಸಿ ಬುಡಕಟ್ಟು ಅಸ್ಮಿತೆಯ ಪ್ರತಿ ರೂಪವಾಗಿ, ಸ್ವಾತಂತ್ರ ದ ನಾಯಕನಾಗಿ ಬಿರ್ಸಾ ಜನಸಮುದಾಯಗಳಲ್ಲಿ ಸ್ಥಾಪಿತನಾಗಿದ್ದ.

2000 ನವೆಂಬರ್ 15ರಂದು ಜನರ ಹಕ್ಕೊತ್ತಾಯವಾಗಿದ್ದ ಜಾರ್ಖಂಡ್ ರಾಜ್ಯ ಸ್ಥಾಪನೆಯಾಯಿತು. ನವೆಂಬರ್ 15ನ್ನು ಬಿರ್ಸಾ ಮುಂಡಾ ಜಯಂತಿಯನ್ನಾಗಿ ಸರಕಾರಗಳು ಆಚರಿಸಲು ತೊಡಗಿವೆ. ಆಗ ಬುಡಕಟ್ಟು ಅಸ್ಮಿತೆ, ಸಂಸ್ಕೃತಿ, ಸ್ವಾತಂತ್ರದ ಮೌಲ್ಯಗಳಿಗಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಬಿರ್ಸಾನನ್ನು ಈಗ ಹಿಂದೂ ಕೋಮುವಾದೀಕರಣ ಮಾಡಲಾಗುತ್ತಿದೆ. ಸಂಘ ಪರಿವಾರಗಳ ಮಾಮೂಲಿ ಚಾಳಿ ಹಾಗೂ ಕುತಂತ್ರವಾದ ಜನರ ನಾಯಕರನ್ನು ಹಿಂದೂ ಕೋಮುವಾದಿ ನಾಯಕರನ್ನಾಗಿ ಚಿತ್ರಿಸಿ ಬಿಂಬಿಸುವ ಕಾರ್ಯ ಬಿರ್ಸಾ ಮುಂಡಾನ ವಿಚಾರದಲ್ಲೂ ನಡೆಯುತ್ತಿದೆ. ಆತನ ಮೌಲ್ಯಗಳು ಹೋರಾಟಗಳನ್ನು ಮರೆಮಾಚಿ ದೈವೀಕರಣ ಮಾಡಿ ವೈಭವೀಕರಿಸುವ, ಆ ಮೂಲಕ ಆತನ ಹೋರಾಟದ ಸ್ಫೂರ್ತಿಯನ್ನು ಜನರ ಮನಸ್ಸಿನಿಂದ ಹೊರಹಾಕುವ ತಂತ್ರವಾಗಿ ಇದನ್ನೆಲ್ಲಾ ಮಾಡಲಾಗುತ್ತಿದೆ. ಭಾರತದ ಶೇ.8ರಷ್ಟು ಜನಸಂಖ್ಯೆಯಾಗಿರುವ ಬುಡಕಟ್ಟು ಸಮುದಾಯಗಳ ಕಣ್ಣಿಗೆ ಮಣ್ಣೆರಚಿ ತಮ್ಮ ಓಟ್‌ಬ್ಯಾಂಕ್ ರಾಜಕಾರಣಕ್ಕೆ ಹಾಗೂ ಕಾರ್ಪೊರೇಟ್ ಕೇಂದ್ರಿತ ಅಭಿವೃದ್ಧಿ ಹೆಸರಿನ ಯೋಜನೆಗಳಿಗೆ ದಾರಿ ಮಾಡಿಕೊಳ್ಳಲು ಬಿರ್ಸಾ ಮುಂಡಾನನ್ನು ಇಂದು ಆಳುವ ಶಕ್ತಿಗಳು ವ್ಯಾಪಕವಾಗಿ ಬಳಸಲಾರಂಭಿಸಿವೆ.

ಬಿರ್ಸಾ ಮುಂಡಾನ ಹೆಸರನ್ನು ಹಲವು ಸರಕಾರಿ ಸಂಸ್ಥೆಗಳಿಗೆ, ವಿಶ್ವ ವಿದ್ಯಾನಿಲಯಗಳಿಗೆ, ರಸ್ತೆಗಳಿಗೆ, ಅಧ್ಯಯನ ಪೀಠಗಳಿಗೆ ಇಡಲಾಗಿದೆ.

ಇದೇ 2017ರ ನವೆಂಬರ್ 15ಕ್ಕೆ ಬಿರ್ಸಾ ಮುಂಡಾ ಹುಟ್ಟಿ 142ವರ್ಷಗಳಾಗುತ್ತಿದೆ. ಆದಿವಾಸಿ ಬುಡಕಟ್ಟು ಸಮು ದಾಯಗಳೇ ಪ್ರಧಾನವಾಗಿರುವ ಜಾರ್ಖಂಡ್ ರಾಜ್ಯ ಸ್ಥಾಪನೆಯಾಗಿ 17 ವರ್ಷಗಳಾಗಿವೆ. ಪ್ರತ್ಯೇಕ ರಾಜ್ಯ ಸ್ಥಾಪನೆಗಾಗಿ ಅಲ್ಲಿನ ಬುಡಕಟ್ಟು ಜನ ಸಮುದಾಯಗಳು ಹಲವಾರು ವರ್ಷಗಳ ಹೋರಾಟ ನಡೆಸಿದ್ದವು.

ಇಂದು ದೇಶಾದ್ಯಂತ ಜನಸಮುದಾಯಗಳನ್ನು ಅವರ ಪರಂಪ ರಾಗತ ವಾಸಸ್ಥಳಗಳಿಂದ ಎತ್ತಂಗಡಿ ಮಾಡಿ ಕಾರ್ಪೊರೇಟ್ ಕಂಪೆನಿಗಳಿಗೆ ಅವರ ಭೂಮಿಗಳನ್ನು ನೀಡುತ್ತಿರುವುದು ಸಾಮಾನ್ಯವಾದ ಪ್ರಕ್ರಿಯೆ ಯೆಂಬಂತೆ ನಡೆಸಲಾಗುತ್ತಿದೆ. ಇದಕ್ಕೆ ದೇಶದ ಅಭಿವೃದ್ಧಿಯ ಲೇಪನ ನೀಡಲಾಗುತ್ತಿದೆ.

ಬಿರ್ಸಾ ಮುಂಡಾ ಹುಟ್ಟಿ ಬೆಳೆದು ಹೋರಾಡಿ ಮಡಿದ ಪ್ರದೇಶವಾದ ಜಾರ್ಖಂಡಿನ ಪರಿಸ್ಥಿತಿಯನ್ನೇ ನೋಡುವುದಾದರೆ, ಕಾರ್ಪೊರೇಟ್ ಕಂಪೆನಿಗಳು ಇಂದು ಅಲ್ಲಿ ಅವ್ಯಾಹತವಾಗಿ ಖನಿಜ ಸಂಪತ್ತನ್ನು ಲೂಟಿ ಮಾಡುತ್ತಿದೆ. ಅದಕ್ಕಾಗಿ ಅಲ್ಲಿನ ಆದಿವಾಸಿ ಬುಡಕಟ್ಟು ಸಮುದಾಯಗಳ ಪರಂಪರಾಗತ ವಾಸಸ್ಥಳಗಳಿಂದ ವ್ಯಾಪಕವಾಗಿ ಎತ್ತಂಗಡಿ ಪ್ರಕ್ರಿಯೆಗಳು ನಡೆ ಯುತ್ತಿವೆ. 1951ರಿಂದ 1995 ರವರೆಗೆ ಸುಮಾರು 15 ಲಕ್ಷ ಜನರನ್ನು ಅಭಿವೃದ್ಧಿ ನೆಪದಲ್ಲಿ ಎತ್ತಂಗಡಿ ಮಾಡಿ ನಿರಾಶ್ರಿತರನ್ನಾಗಿ ಮಾಡಲಾಗಿತ್ತು. ಅದರಲ್ಲಿ 6,20,372 (ಶೇ.42) ಪರಿಶಿಷ್ಟ ಪಂಗಡ, 2,12,892 (ಶೇ.14) ಪರಿಶಿಷ್ಟ ಜಾತಿಗಳಿಗೆ ಸೇರಿದ ಜನರಾಗಿದ್ದರು. 6,76,575 ಜನರು ಇತರ ಹಿಂದುಳಿದ ಪಂಗಡಗಳಿಗೆ ಸೇರಿದವರಾಗಿದ್ದರು. ಇಲ್ಲಿಯವರೆಗೆ ಸುಮಾರು 70 ಲಕ್ಷ ಜನರನ್ನು ಅಭಿ ವೃದ್ಧಿಯ ಹೆಸರಿನಲ್ಲಿ ಎತ್ತಂಗಡಿ ಮಾಡಿ ನಿರಾಶ್ರಿತರನ್ನಾಗಿ ಮಾಡಿ ಅವರ ಬದುಕುಗಳನ್ನು ನಾಶ ಮಾಡಲಾಗಿದೆ. ಭಾರತ ದೇಶದ ಶೇ.40ರಷ್ಟು ಖನಿಜ ಸಂಪತ್ತು ಜಾರ್ಖಂಡಿನಲ್ಲಿ ಇದೆಯೆಂದು ಹೇಳಲಾಗುತ್ತಿದೆ. ಆದರೆ ಪ್ರತ್ಯೇಕ ರಾಜ್ಯ ಸ್ಥಾಪನೆಯಾಗಿ ಈಗಾಗಲೇ 17 ವರ್ಷಗಳು ಕಳೆದಿದ್ದರೂ ಇದುವರೆಗೂ ಅಲ್ಲಿ ಆಳುತ್ತಾ ಬಂದ ಸರಕಾರಗಳು ಖನಿಜ ನೀತಿಯನ್ನೇ ರೂಪಿಸಿಲ್ಲವೆಂದರೆ ಸಂಪತ್ತಿನ ಲೂಟಿ ಹಾಗೂ ಮಾನವ ಸಂಪತ್ತಿನ ನಾಶ ಯಾವ ಪ್ರಮಾಣದಲ್ಲಿ ನಡೆಯುತ್ತಿದೆಯೆಂಬುದನ್ನು ಗಮನಿಸಬಹುದು. ದುಗ್ಗಾಣಿಯ ನಾಮ್ ಕೆ ವಾಸ್ತೆ ರಾಯ ಧನ ನೀಡಿ ಜಾರ್ಖಂಡಿನ ಖನಿಜ ಸಂಪತ್ತನ್ನು ಲೂಟಿ ಮಾಡುತ್ತಾ ಲಕ್ಷಾಂತರ ಜನರ ಬದುಕು ಹಾಗೂ ಪರಿಸರ ನಾಶ ಮಾಡುತ್ತಾ ಜಿಂದಾಲ್‌ಗಳು, ಮಿತ್ತಲ್‌ಗಳು, ಟಾಟಾ ಗಳು, ಅಂಬಾನಿ, ಅದಾನಿ ಗಳು ವಿಶ್ವದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿದಿನೇ ದಿನೇ ಬೆಳೆಯು ತ್ತಿದ್ದಾರೆ. ವಿಶ್ವದಲ್ಲಿ ಭಾರತ ವೂ ಶ್ರೀಮಂತರಿರುವ ಪಟ್ಟಿಯಲ್ಲಿ ಸೇರಿದೆ ಎಂಬಒಣ ಹೆಮ್ಮೆಗಳನ್ನು ಬಿಂಬಿಸ ಲಾಗುತ್ತಿದೆ. ಆದರೆ ಅದರ ಹಿಂದಿರುವ ಮಾನವ ದುರಂತ ವನ್ನು ಮರೆಮಾಚಿ ಪ್ರಚಾರ ನಡೆಸಲಾಗುತ್ತಿದೆ.

ಬ್ರಿಟಿಷರು ಭಾರತದಿಂದ ನಿರ್ಗಮಿಸಿದ ನಂತರದಿಂದ ಇಲ್ಲಿಯವರೆಗೆ ಜಾರ್ಖಂಡ್ ರಾಜ್ಯವೊಂದರಲ್ಲೇ 24 ಲಕ್ಷ ಎಕರೆಗಳಷ್ಟು ಜನರ ಭೂಮಿಗಳನ್ನು ಅಭಿವೃದ್ಧಿ ನೆಪ ಹೇಳಿ ಕಿತ್ತುಕೊಳ್ಳಲಾಗಿದೆ. ಇದರ ಪರಿಣಾಮ ಬಹಳ ಗಂಭೀರವಾಗಿದೆ.

ಬಿರ್ಸಾ ಮುಂಡಾ ಸೇರಿದಂತೆ ಅಸಂಖ್ಯಾತ ಬುಡಕಟ್ಟು ಸಮುದಾಯಗಳ ಧೀರೋದಾತ್ತ ಹೋ ರಾಟಗಳ ಪರಿಣಾಮವಾಗಿ ಬ್ರಿಟಿಷರ ಕಾಲದಲ್ಲೇ ಆದಿವಾಸಿ ಬುಡಕಟ್ಟು ಪ್ರದೇಶಗಳ ರಕ್ಷಣೆಗಾಗಿ ಎಂದು ರೂಪಿತವಾಗಿದ್ದ ಕಾನೂನು ಕಟ್ಟಳೆಗಳು ಇಂದು ಇಲ್ಲವಾಗಿವೆ ಮತ್ತು ಸಡಿಲಗೊಳಿಸಲಾಗುತ್ತಿದೆ. ಇದು ಸ್ವತಂತ್ರ ಭಾರತ ಎಂದುಕೊಂಡ ನಂತರದ ಪ್ರಕ್ರಿಯೆಗಳಾಗಿವೆ. ಬ್ರಿಟಿಷರ ನಂತರವೂ ಸ್ಥಾಪಿತ ಹಿತಾಸಕ್ತಿಗಳ ಅಣತಿಯಂತೆ ಆಳ್ವಿಕೆಗೆ ಬಂದ ಸರಕಾರಗಳು ನಡೆದುಕೊಳ್ಳುತ್ತಾ ಬಂದಿವೆ. ಆದಿವಾಸಿ ಬುಡಕಟ್ಟು ಜನಸಮುದಾಯಗಳ ಭೂಮಿ ಅಸ್ಮಿತೆ, ಸಂಸ್ಕೃತಿ, ಭಾಷೆ, ಬದುಕುಗಳ ಮೇಲೆ ನಿರಂತರ ಕ್ರೂರಾತಿಕ್ರೂರ ದಾಳಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇವುಗಳ ವಿರುದ್ಧ ಮಧ್ಯಭಾರತ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಪ್ರಜಾತಾಂತ್ರಿಕ ವಿಧಾನ, ಕಾನೂನಿನ ಹೋರಾಟ ಹಾಗೂ ಸಶಸ್ತ್ರ ಹೋರಾಟ ಸೇರಿದಂತೆ ಹಲವು ರೀತಿಯ ಹೋರಾಟಗಳಲ್ಲಿ ಜನ ಸಮುದಾಯಗಳು ತೊಡಗಿವೆ. ಪ್ರತಿರೋಧಗಳು ತೀವ್ರವಾದಾಗ ಅದನ್ನು ತಣಿಸಲು ಅರಣ್ಯ ಹಕ್ಕು ಕಾಯ್ದೆಯನ್ನು ಹಿಂದಿನ ಯುಪಿಎ ಸರಕಾರದ ಕಾಲದಲ್ಲಿ ರೂಪಿಸಲಾಯಿತು. ಇದಕ್ಕೆ ವ್ಯಾಪಕ ಪ್ರಚಾರ ಕೊಟ್ಟು ಮಹಾನ್ ಕ್ರಾಂತಿಕಾರಿ ಕಾಯ್ದೆ ಎಂಬಂತೆ ಬಿಂಬಿಸಲಾಯಿತು. ಆದರೆ ಆ ಕಾಯ್ದೆ ‘ಲೆಕ್ಕಕ್ಕಷ್ಟೇ ಊಟಕ್ಕಲ್ಲ’ ಎಂಬಂತೆ ರೂಪಿಸಿ ಜಾರಿ ಮಾಡಲಾಗದಂತೆ ಮಾಡಲಾಗಿದೆ. ಇದನ್ನು ಕರ್ನಾಟಕದಲ್ಲೂ ಬಗರ್‌ಹುಕುಂ ವಿಚಾರದಲ್ಲೂ ನಾವು ಕಾಣಬಹುದು.

ವಿಪರ್ಯಾಸವೇನೆಂದರೆ ಜಾರ್ಖಂಡಿನ ಈಗಿನ ಬಿಜೆಪಿ ಸರಕಾರ ಅರಣ್ಯ ಹಕ್ಕು ಕಾಯ್ದೆ ಹಾಗೆಯೇ ಭಾರತದ ಸಂವಿಧಾನದ ಐದನೇ ಪರಿಚ್ಛೇದ ನೀಡಿರುವ ಆದಿವಾಸಿಗಳಿಗೆ ನೀಡಿರುವ ರಕ್ಷಣೆಯ ಆಶಯಕ್ಕೆ ಬದಲಾಗಿ ಹೊಸ ನಿಯಮಗಳನ್ನು ರೂಪಿಸಿದೆ. ಅರಣ್ಯ ಹಾಗೂ ಭೂ ಭಕ್ಷಣೆಗೆ ಅನುಕೂಲವಾಗುವಂತೆ, ಬ್ರಿಟಿಷರ ಕಾಲದಲ್ಲೇ ಜನಸಮುದಾಯಗಳ ಹೋರಾಟದ ಫಲವಾಗಿ ರೂಪಿತವಾಗಿದ್ದ, ಚೋಟಾ ನಾಗಪುರ ಟೆನೆನ್ಸಿ ಕಾಯ್ದೆ (1908), ನಂತರದ ಸಂತಾಲ್ ಪರಗಣ ಟೆನೆನ್ಸಿ ಕಾಯ್ದೆ (1949) ಗಳಿಗೆ ತಿದ್ದುಪಡಿ ಮಾಡಿದೆ. ಅಭಿವೃದ್ಧಿಯ ನೆಪದಲ್ಲಿ ಆದಿವಾಸಿ ಬುಡಕಟ್ಟು ಪ್ರದೇಶದ ಭೂಮಿಯನ್ನು ದೇಶದ ಹೊರಗಿನ ಹಾಗೆಯೇ ಒಳಗಿನ ಇತರ ವ್ಯಕ್ತಿಗಳಿಗೆ ನೀಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ನಡೆಯ ವಿರುದ್ಧ 2016ರಿಂದ ರಾಜ್ಯವ್ಯಾಪಿ ಬಂದ್, ಮುಷ್ಕರಗಳು ನಡೆಯುತ್ತಾ ಬಂದಿವೆ. ಈ ತಿದ್ದುಪಡಿಗಳ ಮೂಲಕ ಒಂದೇ ಏಟಿಗೆ ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಭೂಮಿಗಳನ್ನು ಯಾರಿಗೆ ಬೇಕಾದರೂ ವರ್ಗಾಯಿಸಲು, ಪರಭಾರೆ ಮಾಡಲು ಅವಕಾಶ ಮಾಡಿಕೊಂಡಿದೆ.

ಇದೂ ಸಾಲವೆಂಬಂತೆ ಭೂ ಬ್ಯಾಂಕ್ ಸ್ಥಾಪಿಸಿ ಆದಿವಾಸಿ ಬುಡಕಟ್ಟು ಗಳಿಗೆ ಸೇರಿದ ಗೋಮಾಳಗಳು, ರಸ್ತೆಗಳು, ಕೊಳಗಳು, ಶ್ರದ್ಧಾಕೇಂದ್ರಗಳು, ಕೊನೆಗೆ ಸತ್ತರೆ ಹೂಳುವ ಸ್ಮಶಾನಗಳನ್ನೂ ವಶಪಡಿಸಿಕೊಳ್ಳಲಾಗುತ್ತಿದೆ. ಹಾಗೆ ವಶಪಡಿಸಿಕೊಂಡ ಭೂಮಿಯನ್ನು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ಇದರ ಜೊತೆ ಸುಳ್ಳು ದಾಖಲೆ ಸೃಷ್ಟಿಸುವ ಮೂಲಕ ಆದಿವಾಸಿ ಪ್ರದೇಶಗಳನ್ನು ಆದಿವಾಸಿಯೇತರ ಎಂದು ಮಾಡಿ ಜನರನ್ನು ಒಕ್ಕಲೆಬ್ಬಿಸಿ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ.

ಆಳುವ ಸರಕಾರಗಳು ಮತ್ತು ಸ್ಥಾಪಿತ ಹಿತಾಶಕ್ತಿಗಳು ಮಾಡುತ್ತಿ ರುವ ಎತ್ತಂಗಡಿ, ಭೂ ಕಬಳಿಕೆಗಳ ವಿರುದ್ಧ ಜಾರ್ಖಂಡಿನ ಜನಸಮುದಾಯಗಳು ಹೋರಾಡುತ್ತಾ ಬರುತ್ತಿದ್ದಾರೆ. ಹಾಗೆ ಹೋರಾಡುತ್ತಿರುವ ಜನಸಮುದಾಯಗಳನ್ನು ಸುಳ್ಳು ಕೇಸುಗಳಡಿ ಬಂಧಿಸಿ ಕಾರಾಗೃಹಗಳಿಗೆ ಹಾಕಿ ಕೊಳೆಸಲಾಗುತ್ತಿದೆ. ಒಂದು ವರದಿಯ ಪ್ರಕಾರ ಸುಮಾರು 5,000 ಜನರನ್ನು ಈ ರೀತಿ ಕಾರಾಗೃಹಗಳಲ್ಲಿ ಕೊಳೆಸಲಾಗುತ್ತಿದೆ. ಅವರಲ್ಲಿ ಕೆಲವರಿಗೆ ನಕ್ಸಲೀಯರು ಎಂಬ ಹಣೆಪಟ್ಟೆಯನ್ನು ಹಾಕಲಾಗುತ್ತಿದೆ. 2016 ರ ಒಂದು ವರ್ಷದಲ್ಲೇ 27 ಕ್ಕೂ ಹೆಚ್ಚುಆದಿವಾಸಿಗಳನ್ನು ಸುಳ್ಳು ಎನ್‌ಕೌಂಟರ್ ನಡೆಸಿ ಸರಕಾರಿ ಪಡೆಗಳು ಕೊಂದುಹಾಕಿವೆ. ಸರಕಾರಿ ಪಡೆಗಳು ಆದಿವಾಸಿಗಳ ಮೇಲೆ ನಡೆಸುತ್ತಿರುವ ಅತ್ಯಾಚಾರ ದೌರ್ಜನ್ಯ, ಹಿಂಸೆ, ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುವುದು ವಿರಳ.

ಇದೀಗ ಬಿರ್ಸಾ ಮುಂಡಾನ 142ನೇ ಜಯಂತಿ ಕಳೆದಿದೆ. ಬ್ರಿಟಿಷರ ಕಾಲ ಹಾಗೂ ನಂತರದಿಂದ ಈಗಿನವರೆಗೂ ಈ ದೇಶದ ತಳಸಮುದಾಯ ಗಳು ತಮ್ಮ ಅಸ್ಮಿತೆ, ಸಂಸ್ಕೃತಿ, ಭಾಷೆ, ಬದುಕುಗಳಿಗಾಗಿ ನಿರಂತರವಾಗಿ ಹೋರಾಡಬೇಕಾದ ಪರಿಸ್ಥಿತಿ ಇದೆ. ಅವರ ಮೇಲಾಗುತ್ತಿರುವ ದಾಳಿ ಗಳು ಹತ್ತು ಹಲವು ರೂಪಗಳನ್ನು ಪಡೆದುಕೊಳ್ಳುತ್ತಿವೆ. ಇದು ನಮ್ಮ ದೇಶದ ಅಸ್ತಿತ್ವ ಹಾಗೂ ಭವಿಷ್ಯಕ್ಕೆ ಮಾರಕವಾಗುತ್ತದೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಗಮನಿಸಬೇಕಿದೆ.

Writer - ನಂದಕುಮಾರ್

contributor

Editor - ನಂದಕುಮಾರ್

contributor

Similar News