ಬದುಕಿನ ಸಂಕೀರ್ಣ ತೆರೆದಿಡುವ ಟೈರ್ಸಾಮಿ

Update: 2017-11-25 18:13 GMT

ಬದುಕಿನ ದಿನಚರಿಯೇ ಬದಲಾದ ದಿನಗಳಿವು. ಪ್ರೀತಿ, ಪ್ರೇಮ, ಬಂಧುತ್ವ, ಖುಷಿ, ದುಃಖ, ಬದುಕಿನ ಗತಿ ಎಲ್ಲದೆಲ್ಲವೂ ಬದಲಾಗಿವೆ. ಗ್ರಾಮ ಜಗತ್ತಿನ ಸಾಂಸ್ಕೃತಿಕ ಸಹಜ ಸೊಬಗು ಮರೆಯಾಗಿ ಮನರಂಜನೆ ಎನ್ನುವುದು ವ್ಯಾಪಾರದ ಸರಕಾಗಿ ವಿಜೃಂಭಿಸುತ್ತಿದೆ. ಎಲ್ಲರೂ ಸಿರಿತನದ ಬೆನ್ನು ಹತ್ತಿ ಸಣ್ಣ ಸಣ್ಣ ನೆಮ್ಮದಿಯ ಗಳಿಗೆಗಳನ್ನೂ ಕಾಲ್ಕಸ ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಜಕಾರಣ ಮತ್ತು ಧರ್ಮ ಒಂದಕ್ಕೊಂದು ಹೆಗಲ ಮೇಲೆ ಕೈ ಹಾಕಿ ಜನಸಾಮಾನ್ಯರನ್ನು ಮೂರ್ಖರನ್ನಾಗಿಸುತ್ತಿವೆ. ಒಂದು ರೀತಿಯ ಹುಸಿತನದ ಬದುಕನ್ನು ಸೃಷ್ಟಿ ಮಾಡುತ್ತಿವೆ. ಇದರ ಪ್ರಭಾವ ಸಮಕಾಲೀನ ಸಾಹಿತ್ಯದ ಮೇಲೂ ಬೀರಿದೆ. ಕೆಲವರು ವಾಸ್ತವ ಬದುಕಿಗೆ ಮುಖಾಮುಖಿಯಾಗುತ್ತಾ, ಎಳ್ಳಷ್ಟೂ ಅಸಹಜತೆ ಇಲ್ಲದೆ ನಿಜ ದನಿಯನ್ನು ಕಾವ್ಯ, ಕತೆ, ಕಾದಂಬರಿ, ನಾಟಕದ ಮೂಲಕ ದಾಖಲಿಸುತ್ತಿದ್ದಾರೆ. ಇನ್ನೂ ಕೆಲವರು ವಾಸ್ತವಕ್ಕೆ ಕುರುಡಾಗಿ ಹೂ ಹಗುರ ಲಹರಿಯಂಥ ಭಾವಗಳನ್ನೇ ಒಂದೊಂದಾಗಿ ಪೋಣಿಸಿ ಸಾಹಿತ್ಯವಾಗಿಸುತ್ತಿದ್ದಾರೆ ಮತ್ತು ಇದೇ ಶುದ್ಧ ಸಾಹಿತ್ಯವೆಂದು ವಿತಂಡ ವಾದ ಮಾಡುತ್ತಿದ್ದಾರೆ. ಆದರೆ, ನಾನಾ ಕ್ಷೇತ್ರ, ಹಿನ್ನೆಲೆಯಿಂದ ಬಂದ ಹೊಸ ತಲೆಮಾರಿನ ಬಹುತೇಕ ಬರಹಗಾರರು ಯಾವ ಮರ್ಜಿ ಗೂ ಒಳಗಾಗದೇ ತಮ್ಮ ಪಾಡಿಗೆ ತಾವು ಭಿನ್ನ ಪ್ರಯೋಗಗಳನ್ನು ಕೈಗೊಳ್ಳುತ್ತಾ ಬದುಕಿನ ಸಂಕೀರ್ಣತೆಯನ್ನು ಕಟ್ಟಿ ಕೊಡುತ್ತಿದ್ದಾರೆ. ಇಂಥಹ ಬರಹಗಾರರಲ್ಲಿ ಚೀಮನಹಳ್ಳಿ ರಮೇಶಬಾಬು ಕೂಡ ಒಬ್ಬರು.

ರಮೇಶಬಾಬು ಒಬ್ಬ ವಿಜ್ಞಾನದ ವಿದ್ಯಾರ್ಥಿಯಾಗಿ ಸಾಹಿತ್ಯದ ಕಸುಬುದಾರನಂತೆ ಬರೆಯುತ್ತಿದ್ದಾರೆ. ಟೈರ್ಸಾಮಿ ಅವರ ಮೂರನೇಯ ಕಾದಂಬರಿ. ನವೀನ ಎಂಬ ವ್ಯಕ್ತಿ ಚೆಂದದ ಹರೆಯದ ಹೆಂಡತಿ, ಮಗು, ಇರುವ ನೌಕರಿ ಬಿಟ್ಟು ಸಾವಿನ ಬೆನ್ನು ಹತ್ತಿ, ಲೋಕದ ಅನುದಿನದ ಸಂಗತಿಗಳಿಗೆ ಕಿವಿಗೊಡದೆ, ಕಣ್ತೆರೆಯದೇ ಸಾವಿನ ಸಂಕೀರ್ಣತೆಯನ್ನು ಅರಿಯಲು ಅಂತರ್ಮುಖಿಯಾಗಿ ಕೆಲವರಿಗೆ ಹುಚ್ಚನಂತೆಯೂ, ಮತ್ತೆ ಕೆಲವರಿಗೆ ದೇವರ ಸ್ವರೂಪದ ವ್ಯಕ್ತಿಯಂತೆಯೂ ತೋರುತ್ತಾ, ಟೈಯರ್ ಹೊಡಿಯುತ್ತಾ ಓಡುವ ಟೈರ್ಸಾಮಿಯಾಗುವ ಕಥಾನಕವನ್ನು ಈ ಕಾದಂಬರಿ ಒಳಗೊಂಡಿದೆ. ಊರ ಹೊರಗಿನ ದೊಡ್ಡ ಹುಣಸೆ ಮರದ ಕೆಳಗೆ ನೆಲೆಯೂರಿದ್ದ ಟೈರ್ಸಾಮಿ ಜಗದ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆದರೆ, ಅವನ ಧ್ಯಾನಸ್ಥ ಮುಖ, ಹೊಳೆಯುವ ಕಣ್ಣುಗಳು ಊರಿನ ಕೆಲವರಿಗೆ ದೇವರಂತೆ ಗೋಚರಿಸಿಬಿಟ್ಟವು. ಹುಣಸೆ ಮರವಿದ್ದ ಹೊಲದ ಮಾಲಕ ಒಂದು ಸಲ ಮಾತಾಡಿಸಿದಾಗ ಟೈರ್ಸಾಮಿ ಮುಗಳ್ನಕ್ಕಿದ್ದೇ ಉಳ್ಳಾಗಡ್ಡಿ ಧಾರಣಿ ಹೆಚ್ಚಲು ಕಾರಣವಾಯಿತೆಂದು ಭಾವಿಸಿದ. ಅಂದಿನಿಂದ ಭಯ-ಭಕ್ತಿ ವ್ಯಕ್ತಪಡಿಸುತ್ತಾ ಅದನ್ನು ಕಂಡ ಕಂಡವರಿಗೂ ಸಾರಿದ. ಹಾಲಿ ಶಾಸಕ ಟೈರ್ಸಾಮಿ ಕೃಪೆಯಿಂದಲೇ ತಾನು ಚುನಾವಣೆಯಲ್ಲಿ ಗೆದ್ದಿರುವುದಾಗಿ ಹೇಳಿದ. ಈ ಎಲ್ಲ ಸಂಗತಿಗಳಿಂದ ಟೈರ್ಸಾಮಿ ಪ್ರಚಲಿತವಾಗುತ್ತಾನೆ. ಬಂದ ಭಕ್ತರು ದುಡ್ಡು ಕೊಡತೊಡಗಿದರು. ಆದರೆ, ಟೈರ್ಸಾಮಿ ಮಾತ್ರ ಆ ದುಡ್ಡನ್ನು ಕಣ್ಣೆತ್ತಿಯೂ ನೋಡದೇ ಟೈರ್ ಗಾಲಿ ಹೊಡೆಂಯುತ್ತಾ ಓಟ ಕೀಳುತ್ತಿದ್ದ. ಆದರೆ, ಹೊಲದ ಮಾಲಕ ಟೈರ್ಸಾಮಿಗೊಂದು ಆಶ್ರಮ ಕಟ್ಟಿಸಬೇಕೆಂದು ಹಣ ಎತ್ತಲು ಶುರು ಮಾಡಿದ. ಇದು ಧರ್ಮ ಈ ಹೊತ್ತು ಬಂಡವಾಳ ತರುವ ಸರಕಾಗಿರುವುದನ್ನು ಸೂಚ್ಯವಾಗಿ ಬಿಂಬಿಸುತ್ತದೆ. ಟೈರ್ಸಾಮಿ ಯಾರು? ಅವನ ಹಿನ್ನೆಲೆ ಏನು? ಎಂಬುದು ತಿಳಿಯದೇ ತಮಗೆ ಬೇಕಾದಂತೆ ಅವನನ್ನು ಬಳಸಿಕೊಳ್ಳುತ್ತಾರೆ. ಹೀಗಿರುವಾಗ ಸ್ಥಳೀಯ ವರದಿಗಾರ ನಟರಾಜ ಟೈರ್ಸಾಮಿ ಬಗೆಗೆ ಕುತೂಹಲ ತಾಳಿ ಚಿತ್ರಸಮೇತ ಲೇಖನವೊಂದನ್ನು ಪ್ರಕಟಿಸುತ್ತಾನೆ. ಈ ವೇಳೆ ಸತೀಶ ಎಂಬವನು ಈ ಟೈರ್ಸಾಮಿಯನ್ನು ಹುಡುಕಿಕೊಂಡು ಹುಣಸೆ ಮರದ ಹತ್ತಿರ ಬಂದಾಗ ನಟರಾಜನಿಗೂ ಸತೀಶನಿಗೂ ಪರಿಚಯವಾಗಿ ಸತೀಶ ತಾನು ಟೈರ್ಸಾಮಿ ಕುರಿತು ಬರೆದ ಕಾದಂಬರಿಯನ್ನು ಕೊಡುತ್ತಾನೆ. ಆಗ ನಟರಾಜ ಆ ಕಾದಂಬರಿ ಓದುತ್ತಾ ಹೋದಂತೆ ಟೈರ್ಸಾಮಿ ಬದುಕಿನ ಪುಟಗಳು ತೆರೆಯುತ್ತಾ ಹೋಗುತ್ತವೆ. ಕಾದಂಬರಿಕಾರರು ನೇರವಾಗಿ ಟೈರ್ಸಾಮಿಯ ಕುರಿತು ಹೇಳದೇ ಕಾದಂಬರಿಯೊಳಗೊಂದು ಕಾದಂಬರಿ ಓದಿಸುತ್ತಾ ಅವನ ಜೀವನಗಾಥೆಯನ್ನು ಬಿಚ್ಚಿಡುತ್ತಾ ಹೋಗುವ ತಂತ್ರ ಬಳಸಿದ್ದಾರೆ. ಈ ತಂತ್ರ ಫಲಿಸಿದೆ. ಹಾಗೆ ನೋಡಿದರೆ ಆ ಕಾದಂಬರಿಯ ಪುಟಗಳೇ ತುಂಬಾ ಸಶಕ್ತವಾಗಿ ಅನಾವರಣಗೊಂಡಿವೆ. ಆದರೆ, ಆ ಕಾದಂಬರಿ ಆಚೆಗಿನ ನಿರೂಪಣೆ ತುಸು ವಾಚ್ಯವಾಗುತ್ತದೆ. ಅಸಹಜತೆ ನುಸುಳುತ್ತದೆ.

ಈ ಟೈರ್ಸಾಮಿ ಅಥವಾ ನವೀನ ಸಾವಿನ ಬೆನ್ನು ಹತ್ತಿ ಲೋಕವನ್ನೇ ಮರೆಯುತ್ತಾನೆ. ಸತ್ತವರನ್ನು ನೋಡಿ ಸಾವು ಹೇಗಿರುತ್ತದೆ? ಹೇಗೆ ಬರುತ್ತದೆ? ತಾನು ಸಾವು ಬಂದಂತೆ ಸ್ವೀಕರಿಸಬೇಕು ಎನ್ನುವ ಗೊಂದಲದಲ್ಲೇ ದಿನ ದೂಡುತ್ತಾನೆ. ಈ ಕಡೆ ಹುಚ್ಚನೂ ಅಲ್ಲದ, ವಾಸ್ತವವನ್ನೂ ಎದುರಿಸದೇ ಭ್ರಮಾಲೋಕದಲ್ಲಿ ವಿಹರಿಸುತ್ತಾನೆ. ನವೀನನ ಈ ಅಪದ್ಧ ನಡೆಯಿಂದ ಸಂಸಾರ ನಿಭಾಯಿ ಸುವುದು ಹೆಂಡತಿ ಕ್ಯಾಥರಿನ್‌ಗೆ ಕಡು ಕಷ್ಟವಾಗುತ್ತದೆ. ನಿಜಕ್ಕೂ ಕಾದಂಬರಿ ಮುಖ್ಯವಾಗುವುದು ಈ ಕ್ಯಾಥರಿನ್‌ಳ ಮೂಲಕವೇ. ನನಗೆ ನಾಯಕ ನವೀನ ದುರ್ಬಲವಾಗಿ ಕಾಣುತ್ತಾನೆ. ಯಾಕೆಂದರೆ ನವೀನ ಯಾವ ತಾತ್ವಿಕತೆಯೂ ಇಲ್ಲದೆ ಸುಖಾಸುಮ್ಮನೆ ಸಾವಿನ ಬೆನ್ನು ಹತ್ತಿ ಪಲಾಯನವಾದ ಮಾಡುತ್ತಾನೆ. ಆದರೆ, ಕ್ಯಾಥರಿನ್ ಬದುಕಿಗೆ ಹಿಮ್ಮುಖವಾಗಿ ಚಲಿಸದೆ ಬರುವ ಸಂಕಷ್ಟಗಳನ್ನೆಲ್ಲಾ ಎದುರಿಸುವ ಗಟ್ಟಿಗಿತ್ತಿಯಾಗಿ ಬಾಳ್ವೆ ಮಾಡುತ್ತಾಳೆ. ಕ್ಯಾಥರಿನ್ ಬದುಕಿನ ಬಂಡಿ ಸಾಗಿಸಲು ಗಾರ್ಮೆಂಟ್ಸ್‌ಗೆ ಹೋಗುತ್ತಾಳೆ. ಆ ಸಂಬಳ ಯಾತಕ್ಕೂ ಸಾಲದು. ಜತೆಗೆ ಹರೆಯದ ಹುಡುಗಿ ಆದ ಆಕೆಗೆ ನವೀನ ದಾಂಪತ್ಯ ಸುಖವನ್ನೂ ನೀಡದೇ ಬೇರೆ ಯಾರನ್ನಾದರೂ ನೋಡಿಕೋ ಎನ್ನುತ್ತಾನೆ. ಅವಳಿಗೆ ಅಳುವೇ ತುಟಿಗೆ ಬಂದು ದಿಕ್ಕು ತೋಚದಾಗುತ್ತದೆ. ಈ ಹೊತ್ತಿನಲ್ಲಿ ಗೆಳೆಯನೊಬ್ಬ ಸಿಕ್ಕು ಅವನೂ ಅಪಘಾತದಲ್ಲಿ ಸಾಯುತ್ತಾನೆ. ಹೀಗಿರುವಾಗ ಆರ್ಥಿಕ ಸಂಕಷ್ಟ ಎದುರಿಸುವ ಉಪಾಯ ಹೊಳೆಯದೆ ನೋಯುತ್ತಾಳೆ. ಗೆಳತಿಯೊಬ್ಬಳು ಬಾಡಿಗೆ ತಾಯಿಯಾಗಿ ಹಣ ಮಾಡುವ ಹೊಸ ಬಗೆಯನ್ನು ಹೇಳುತ್ತಾಳೆ. ಕ್ಯಾಥರಿನ್‌ಗೆ ಸ್ವರ್ಗವೇ ಬಾಗಿಲ ಬಳಿ ಬಂದಂತಾಗುತ್ತದೆ. ಕಾದಂಬರಿಯ ಯಶಸ್ಸು ಇರುವುದೇ ಇಲ್ಲಿ. ಈ ಬಾಡಿಗೆ ತಾಯಿ ಎನ್ನುವ ಪರಿಕಲ್ಪನೆಯೇ ನಮಗೆ ಹೊಸದು. ಈ ಕಥಾವಸ್ತುವುಳ್ಳ ಸಾಹಿತ್ಯ ಕನ್ನಡಕ್ಕೆ ಹೊಸದು. ಬಂದಿದ್ದರೂ ಅಲ್ಲಲ್ಲಿ ಲೇಖನ ರೂಪದಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಪರ ಪುರುಷನನ್ನು ಕಣ್ಣೆತ್ತಿ ನೋಡುವುದೇ ಅಪರಾಧವೆನ್ನುವ ಸ್ಥಿತಿಯಲ್ಲಿ ಮತ್ತೊಬ್ಬರ ವೀರ್ಯಕ್ಕೆ ಮಗು ಹೆತ್ತು ಕೊಡುವ ಬಾಡಿಗೆ ತಾಯಿಯಾಗುವ ಅನಿವಾರ್ಯತೆಯನ್ನು ರಮೇಶಬಾಬು ಸೃಜನಶೀಲವಾಗಿ ಅನಾವರಣ ಮಾಡಿದ್ದಾರೆ. ಬಾಡಿಗೆ ತಾಯಿಯಾಗಿ ಸಂಕಷ್ಟ ನೀಗಿಸಿಕೊಳ್ಳಲೇಬೇಕಾದ ಬಡ ಮಹಿಳೆಯರ ಚಿತ್ರಣವನ್ನು ಭಾವುಕತೆ ಇಲ್ಲದೆ ತಣ್ಣಗೆ ಹೇಳುತ್ತಾರೆ. ಇಲ್ಲಿ ನವೀನ ಸಾವಿನ ಬೆನ್ನು ಹತ್ತಿದರೆ ಕ್ಯಾಥರಿನ್ ಮತ್ತೊಂದು ಮಗುವಿಗೆ ಜನ್ಮ ನೀಡಲು ಹೊರಡುತ್ತಾಳೆ. ಈ ಎರಡೂ ವಿರುದ್ಧ ದಿಕ್ಕಿನ ಮನಸ್ಥಿತಿಯನ್ನು ಹಿಡಿದಿಡಲು ರಮೇಶಬಾಬು ಯತ್ನಿಸಿದ್ದಾರೆ. ಬಾಡಿಗೆ ತಾಯಿಯಾಗಲು ಕ್ಯಾಥರಿನ್ ಒಪ್ಪಂದದಂತೆ ಆಸ್ಪತ್ರೆ ಸೇರುತ್ತಾಳೆ. ಮನೆಯಲ್ಲಿ ನವೀನ ಮತ್ತು ಮಗ ಮಾತ್ರ ಉಳಿಯುತ್ತಾರೆ. ಮಗನಿಗೆ ಜ್ವರ ಹಿಡಿದರೂ ನವೀನ ಮಗನ ಬಳಿ ಸಾವು ಬರುವುದನ್ನು ನೋಡಬೇಕೆನ್ನುವಂತೆ ವೈದ್ಯರಿಗೆ ತೋರಿಸುವುದೇ ಇಲ್ಲ. ಜ್ವರ ಹಿಡಿದು ಮಗ ಸಾಯುತ್ತಾನೆ. ಸಾವಿನ ಸುದ್ದಿ ತಿಳಿದು ಕ್ಯಾಥರಿನ್‌ಗೆ ಗರ್ಭಪಾತವಾಗುತ್ತದೆ. ಇದು ಓದುಗರಲ್ಲಿ ವಿಷಾದವನ್ನು ಮೂಡಿಸಿ ಕಣ್ಣಂಚು ತೊಯ್ಯುವಂತೆ ಮಾಡುತ್ತದೆ. ನವೀನ ಟೈಯರ್ ಗಾಲಿ ಹೊಡೆಯುತ್ತಾ ಹೋಗಿ ಟೈರ್ಸಾಮಿ ಆಗುತ್ತಾನೆ. ಕೊನೆಗೆ ತಾನಂದುಕೊಂಡಂತೆ ದೈಹಿಕವಾಗಿ ಕೃಶವಾಗಿ ಹುಣಸೆಮರದ ಕೆಳಗೆ ಕೂಳು ನೀರಿಲ್ಲದೆ ಸಾಯುತ್ತಾನೆ.

ಕಾದಂಬರಿಯ ತುಂಬಾ ವಿಷಾದವೊಂದು ಸ್ಥಾಯಿಭಾವವಾಗಿ ಹರಿ ಯುತ್ತದೆ. ಟೈರ್ಸಾಮಿಯ ವಿಕ್ಷಿಪ್ತತೆಯನ್ನು ಕಟ್ಟಿ ಕೊಡುವಾಗ ಅದೊಂದು ತಾತ್ವಿಕತೆಯ ದಡ ಮುಟ್ಟುವಂತಾಗಿದ್ದರೆ ಚೆನ್ನಾಗಿತ್ತೇನೋ. ಕ್ಯಾಥರಿನ್‌ಳ ಜೀವನಪ್ರೇಮವನ್ನು ಅನನ್ಯವಾಗಿ ಕಟ್ಟಿಕೊಡುವುದರಲ್ಲೇ ಕಾದಂಬರಿಯ ಯಶಸ್ಸಿದೆ. ಈಕೆಯೇ ಕಾದಂಬರಿಯ ಮುಖ್ಯ ಪಾತ್ರವಾಗಿದ್ದರೆ ಕಾದಂಬ ರಿಗೆ ಬೇರೆಯದೇ ಆದ ಹೊಸ ಆಯಾಮವೊಂದು ದಕ್ಕಿಬಿಡುತ್ತಿತ್ತು. ಭಾಷೆಯ ದೃಷ್ಟಿಯಿಂದ ನೋಡಿದರೆ ಅಲ್ಲಲ್ಲಿ ಒಂದಿಷ್ಟು ವಾಚ್ಯತೆ ನುಸುಳಿದ್ದರೂ ಕಾದಂಬರಿ ಪುಟದಿಂದ ಪುಟಕ್ಕೆ ಓದಿಸಿ ಕೊಳ್ಳುತ್ತದೆ. ಕಾದಂಬರಿ ಪ್ರಕಾರ ಸಿದ್ಧಿಸಿದಂತಿರುವ ರಮೇಶಬಾಬು ಹೀಗೆ ಅನನ್ಯ ಕೃತಿಗಳನ್ನು ರಚಿಸುತ್ತಾ ನಮ್ಮನ್ನು ಓದಿಸುತ್ತಲೇ ಇರಲಿ.

ನಾನು ಓದಿದ ಪುಸ್ತಕ

ಟಿ.ಎಸ್.ಗೊರವರ

Writer - ಟಿ.ಎಸ್.ಗೊರವರ

contributor

Editor - ಟಿ.ಎಸ್.ಗೊರವರ

contributor

Similar News