ನಿಮ್ಮ ಕಿವಿಯ ಗುಗ್ಗೆಯ ಬಣ್ಣ ನಿಮ್ಮ ಆರೋಗ್ಯದ ಈ ವಿವರಗಳನ್ನು ನೀಡುತ್ತದೆ...

Update: 2017-11-26 11:05 GMT

ಪ್ರತಿ ಕೆಲವು ದಿನಗಳಿಗೊಮ್ಮೆ ಕಿವಿಯನ್ನು ಸ್ವಚ್ಛ ಮಾಡಿಕೊಳ್ಳುವುದು ನಮ್ಮ ಸಾಮಾನ್ಯ ಅಭ್ಯಾಸವಾಗಿದೆ. ಕಿವಿಯಲ್ಲಿನ ಮೇಣ ಅಥವಾ ಗುಗ್ಗೆಯು ರಕ್ಷಣೆಯ ಕಾರ್ಯವನ್ನು ಮಾಡುತ್ತದೆ ಮತ್ತು ಅದು ನಮ್ಮ ಆರೋಗ್ಯದ ಮಾಹಿತಿ ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಕ್ಯೂ-ಟಿಪ್ ಎಂಬ ಗುಗ್ಗೆಯನ್ನು ತೆಗೆಯಲು ಬಯಸುವ ಪುಟ್ಟ ಸಾಧನದಿಂದ ಅದರ ಬಣ್ಣವನ್ನು ತಿಳಿದುಕೊಳ್ಳಬಹುದು. ವಾಸ್ತವದಲ್ಲಿ ನಾವು ಕಡೆಗಣಿಸುವ ಈ ಗುಗ್ಗೆ ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ.

ವೈಜ್ಞಾನಿಕವಾಗಿ ಸೆರುಮನ್ ಎಂದು ಕರೆಯಲಾಗುವ ಗುಗ್ಗೆ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರವನ್ನು ಹೊಂದಿದೆ. ಫ್ಯಾಟಿ ಆ್ಯಸಿಡ್‌ಗಳು,ಸ್ಕ್ವಾಲಿನ್ ಮತ್ತು ಅಲ್ಕೋಹಾಲ್‌ಗಳ ಸರಣಿಯನ್ನು ಒಳಗೊಂಡಿರುವ ಗುಗ್ಗೆಯು ಕಿವಿಗಳಿಗೆ ವಾಟರ್‌ಪ್ರೂಫ್ ಲೈನಿಂಗ್‌ನ್ನು ಒದಗಿಸುವ ಜೊತೆಗೆ ಸೋಂಕು ಮತ್ತು ಇತರ ಸಮಸ್ಯೆಗಳಿಂದ ರಕ್ಷಣೆಯನ್ನು ನೀಡುತ್ತದೆ. ಅದು ಕಿವಿಯ ರಂಧ್ರವನ್ನು ಬ್ಯಾಕ್ಟೀರಿಯಾಗಳು ಮತ್ತು ಕಸದಂತಹ ಕಲ್ಮಶಗಳಿಂದ ರಕ್ಷಿಸುತ್ತದೆ. ಗುಗ್ಗೆಯ ಬಣ್ಣ ನಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ಎಂಬ ಬಗ್ಗೆ ಮಾಹಿತಿಯಿಲ್ಲಿದೆ.

► ಇತರ ಯಾವುದೇ ಲಕ್ಷಣಗಳಿಲ್ಲದೆ ಗುಗ್ಗೆಯು ಬೂದು ಬಣ್ಣವನ್ನು ಹೊಂದಿದ್ದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಅದು ಕೇವಲ ಧೂಳು ಆಗಿದ್ದು, ವಾಯುಮಾಲಿನ್ಯವಿರುವ ನಗರಗಳಲ್ಲಿ ವಾಸವಿರುವವರಲ್ಲಿ ಗುಗ್ಗೆಯ ಈ ಬಣ್ಣ ಸಾಮಾನ್ಯವಾಗಿದೆ.

► ಇಯರ್ ಬಡ್ ಬಳಸಿ ಕಿವಿಗಳನ್ನು ಸ್ವಚ್ಛಗೊಳಿಸುವಾಗ ರಕ್ತದ ಕಲೆಗಳು ಕಂಡುಬಂದರೆ ಅದು ಕಿವಿಯ ತಮಟೆಗೆ ರಂಧ್ರವಾಗಿರುವುದನ್ನು ಸೂಚಿಸಬಹುದು. ನಿಮ್ಮ ಕಿವಿಗಳು ಸೋಂಕಿಗೊಳಗಾಗಿರಬಹುದು ಮತ್ತು ಅದು ಕಿವಿಯ ಉರಿಯೂತಕ್ಕೆ ಕಾರಣವಾಗಬಹುದು. ಇದು ಕಿವಿಗಳ ಆರೋಗ್ಯವನ್ನು ಹದಗೆಡಿಸುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

► ಗುಗ್ಗೆಯು ಅತಿಯಾದ ಪ್ರಮಾಣದಲ್ಲಿ ಹೊರಬರುತ್ತಿದ್ದರೆ ಮತ್ತು ಗಾಢ ಕಂದು ಬಣ್ಣವನ್ನು ಹೊಂದಿದ್ದರೆ ಅದು ನಿಮ್ಮ ಶರೀರವು ಅತ್ಯಂತ ಒತ್ತಡದಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ಇಂತಹ ಸಂದರ್ಭದಲ್ಲಿ ಕೆಲಕಾಲ ಶಾಂತಿಯುತ ವಾತಾವರಣದಲ್ಲಿ ಕಳೆಯುವುದು ಉತ್ತಮ ಪರಿಹಾರವಾಗುತ್ತದೆ.

► ಎಂದಾದರೂ ಒಮ್ಮೆ ಗುಗ್ಗೆಯ ಬಣ್ಣ ಕಪ್ಪಾಗಿದ್ದರೆ ಚಿಂತಿಸಬೇಕಿಲ್ಲ. ಆದರೆ ಕಪ್ಪುಬಣ್ಣದ ಗುಗ್ಗೆ ಆಗಾಗ್ಗೆ ಕಾಣಿಸಕೊಳ್ಳುತ್ತಿದ್ದು, ಕಿವಿಗಳಲ್ಲಿ ತೀವ್ರ ತುರಿಕೆಯಾಗುತ್ತಿದ್ದರೆ ನಿಮ್ಮ ಕಿವಿ ಬೂಷ್ಟಿನ ಸೋಂಕಿಗೊಳಗಾಗಿರಬಹುದು. ಹೀಗಿದ್ದಾಗ ನೀವು ವೈದ್ಯರನ್ನು ಖಂಡಿತ ಭೇಟಿಯಾಗಬೇಕು.

► ಗುಗ್ಗೆಯು ಬಿಳಿಬಣ್ಣದ್ದಾಗಿದ್ದರೆ ಅದು ಶರೀರದಲ್ಲಿ ವಿಟಾಮಿನ್‌ಗಳು ಮತ್ತು ಮೈಕ್ರೋ ಎಲಿಮೆಂಟ್‌ಗಳ, ವಿಶೇಷವಾಗಿ ಕಬ್ಬಿಣ ಮತ್ತು ತಾಮ್ರದ ಕೊರತೆಯನ್ನು ಸೂಚಿಸುತ್ತದೆ. ಆಹಾರದಲ್ಲಿ ಅವರೆಕಾಳುಗಳು ಮತ್ತು ಓಟ್ ಅಥವಾ ತೋಕೆ ಗೋದಿಯನ್ನು ಸೇರ್ಪಡೆ ಮಾಡಿಕೊಳ್ಳುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ.

► ಗುಗ್ಗೆ ದುರ್ನಾತದಿಂದ ಕೂಡಿದ್ದರೆ ಅದು ನಿಮ್ಮ ಮಧ್ಯಕಿವಿಯಲ್ಲಿ ಸೋಂಕನ್ನು ಸೂಚಿಸುತ್ತದೆ. ವಾಸನೆಯ ಜೊತೆಗೆ ಕಿವಿಯಲ್ಲಿ ಶಬ್ದ ಕೇಳಿದರೆ ಅಥವಾ ಕಿವಿ ಸಿಡಿದಂತೆ ಅನುಭವವಾಗಬಹುದು. ಇಂತಹ ಸಂದರ್ಭದಲ್ಲಿ ನೀವು ಇಎನ್‌ಟಿ ತಜ್ಞರ ದರ್ಶನ ಮಾಡುವುದು ಅಗತ್ಯವಾಗುತ್ತದೆ.

► ಗುಗ್ಗೆಯು ದ್ರವರೂಪ ಪಡೆದುಕೊಂಡಿದ್ದರೆ ಅದು ಕಿವಿಯೊಳಗೆ ಉರಿಯೂತ ಆರಂಭವನ್ನು ಸೂಚಿಸಬಹುದು. ತಜ್ಞವೈದ್ಯರನ್ನು ಕೂಡಲೇ ಸಂಪರ್ಕಿಸುವುದು ಒಳ್ಳೆಯದು.

► ಗುಗ್ಗೆಯು ಒಣಗಿದ್ದರೆ ಅದು ಶರೀರದಲ್ಲಿ ಲಘು ಕೊಬ್ಬಿನ ಕೊರತೆಯನ್ನು ಸೂಚಿಸುತ್ತದೆ. ಡರ್ಮಟೈಟಿಸ್ ಮತ್ತು ಇತರ ಚರ್ಮರೋಗಗಳೂ ಇದಕ್ಕೆ ಕಾರಣ ವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News