ಜಾತಿಯಿಂದ ಯಾರೂ ಶ್ರೇಷ್ಠರಲ್ಲ: ಸಿದ್ದರಾಮಯ್ಯ
ಬೆಂಗಳೂರು, ನ.26: ಜಾತಿಯಿಂದ ಯಾರು ಶ್ರೇಷ್ಠರಾಗುವುದಿಲ್ಲ. ಮನುಷ್ಯರು ತಮ್ಮ ನಡೆ, ನುಡಿ, ಗುಣ, ಮಾನವೀಯ ಮೌಲ್ಯಗಳಿಂದ ಶ್ರೇಷ್ಠರಾಗುತ್ತಾರೆ. ಸಮಾಜದಲ್ಲಿ ಮೇಲು ಕೀಳು ಎಂಬುದು ನಮ್ಮ ಸೃಷ್ಟಿಯೇ ಹೊರತು ದೇವರದ್ದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ನಗರದ ಕೆ.ಆರ್.ಪುರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೆಂಗಳೂರು ಪೂರ್ವ ವಲಯ ಕುರುಬರ ಸಂಘ ಹಾಗೂ ಇನ್ನಿತರ ಸಂಘದ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದಾಸ ಶ್ರೇಷ್ಠ ಕನಕದಾಸರ 530ನೆ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರು ದಾಸರಲ್ಲೇ ಶ್ರೇಷ್ಠ ದಾಸರು. ಅವರು ಕೇವಲ ಭಕ್ತಿಗೀತೆಗಳನ್ನು ಹಾಡಿಕೊಂಡು, ರಚಿಸಿಕೊಂಡು ತಮ್ಮನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಣೆ ಮಾಡಿಕೊಂಡಿದ್ದರ ಜತೆಗೆ ದಾಸ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕನಕದಾಸರು ರಚಿಸಿದ ಎಲ್ಲ ಕೃತಿಗಳು ಪ್ರಬುದ್ಧವಾದದ್ದು. ಬಸವಾದಿ ಶರಣರ ವಚನ ಸಾಹಿತ್ಯ ಹಾಗೂ ಕನಕದಾಸರ ದಾಸ ಸಾಹಿತ್ಯ ಜನ ಸಾಮಾನ್ಯರ ಭಾಷೆಯಲ್ಲಿ ಮೂಡಿ ಬಂದಿದ್ದವು. ಧರ್ಮ ಹಾಗೂ ಸಾಹಿತ್ಯ ಎಲ್ಲರಿಗೂ ಅರ್ಥವಾಗುವಂತಿರಬೇಕು. ಸಂಸ್ಕೃತದಲ್ಲಿ ಧರ್ಮ ಬೋಧನೆ ಅಕ್ಷರ ವಂಚಿತರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎಲ್ಲರಿಗೂ ಅರ್ಥವಾಗುತ್ತದೆ ತಿಳಿಸಿದರು.
ಜಾತಿವಾದಿಗಳು, ಮತೀಯವಾದಿಗಳಿಗೆ ಕನಕದಾಸರ ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಪ್ರಶ್ನಿಸುತ್ತಿದ್ದರು. ಬಸವಾದಿ ಶರಣರು ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ, ನಿನ್ನ ಮನೆಯ ಮಗ ಎಂದೆನಿಸಯ್ಯ ಕೂಡಲ ಸಂಗಮ ದೇವ ಎಂದಿದ್ದರು. ನಾವೆಲ್ಲರೂ ಈ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ನುಡಿದರು.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಿದ್ದು ನಾವು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ನಾವು, ಸರಕಾರಿ ಕಾರ್ಯಕ್ರಮವಾಗಿ ಕೆಂಪೇಗೌಡ ಜಯಂತಿ ಆಚರಿಸಿದ್ದು ನಾವು, ಆದರೆ ಬೇರೆಯವರು ಕೆಂಪೇಗೌಡರ ಹೆಸರು ಹೇಳಿಕೊಂಡು ಮತ ಯಾಚಿಸಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಸರಕಾರ 36 ಜನ ಮಹಾನ್ ಪುರುಷರು ಹಾಗೂ ಮಾತೆಯರ ಜಯಂತಿ ಆಚರಿಸುತ್ತಿದೆ. ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ ಎಂದು ತಿಳಿಸಿದರು.
ಬಸವಾದಿ ಶರಣರ ವಚನ ಸಾಹಿತ್ಯ ಹಾಗೂ ಕನಕದಾಸರ ದಾಸ ಸಾಹಿತ್ಯ ಜನ ಸಾಮಾನ್ಯರ ಭಾಷೆಯಲ್ಲಿ ಮೂಡಿ ಬಂದಿದ್ದವು. ಧರ್ಮ ಹಾಗೂ ಸಾಹಿತ್ಯ ಎಲ್ಲರಿಗೂ ಅರ್ಥವಾಗುವಂತಿರಬೇಕು. ಸಂಸ್ಕೃತದಲ್ಲಿ ಧರ್ಮ ಬೋಧನೆ ಅಕ್ಷರ ವಂಚಿತರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎಲ್ಲರಿಗೂ ಅರ್ಥವಾಗುತ್ತದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ