ಅಂಬೇಡ್ಕರ್ ಕೇವಲ ದಲಿತ ನಾಯಕನಲ್ಲ, ವಿಶ್ವ ನಾಯಕ: ಡಿ.ಎಸ್.ವೀರಯ್ಯ
ಬೆಂಗಳೂರು, ನ.26: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಶ್ರಮಿಸಿದ್ದ ವಿಶ್ವನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಂದಿಗೂ ದಲಿತ ನಾಯಕನೆಂದು ಗುರುತಿಸುವ ಮನಸ್ಥಿತಿಗಳಿವೆ ಎಂದು ಎಸ್.ಸಿ.ಮೋರ್ಚಾ ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ಎಸ್.ವೀರಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರವಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸದಿದ್ದರೆ ಈ ದೇಶದ ಜಾತಿ ಪದ್ಧತಿ, ಅನಕ್ಷರತೆ, ಅನಿಷ್ಟ ಪದ್ಧತಿಗಳು ಇಂದಿಗೂ ನಮ್ಮನ್ನು ಬೆಂಬಿಡದೆ ಕಾಡುತ್ತಿದ್ದವು. ಅವರ ಶ್ರಮದಿಂದಾಗಿ ಈ ಎಲ್ಲ ಅನಿಷ್ಟಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿವೆ. ಆದರೂ ಅಂಬೇಡ್ಕರ್ ಅವರ ಸಾಧನೆಯನ್ನು ಒಪ್ಪದ ಮನಸ್ಥಿತಿಗಳು ಅವರನ್ನು ಇಂದಿಗೂ ದಲಿತ ನಾಯಕನೆಂದೆ ಗುರುತಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಅಧ್ಯಕ್ಷತೆಯ ಕರಡು ಸಮಿತಿಯು ಸಂವಿಧಾನವನ್ನು ರಚಿಸಲು 2 ವರ್ಷ 11 ತಿಂಗಳು 17 ದಿನಗಳ ಅವಧಿಯನ್ನು ತೆಗೆದುಕೊಂಡು, ಸಂವಿಧಾನದ ತಿದ್ದುಪಡಿಗೆ ಕಳುಹಿಸುತ್ತಾರೆ. ಈ ಸಂದರ್ಭದಲ್ಲಿ ಸಾಕಷ್ಟು ಅಂಶಗಳನ್ನು ತಿದ್ದುಪಡಿ ಮಾಡಬೇಕೆಂದು ಅಭಿವೃದ್ಧಿಯನ್ನು ಒಪ್ಪದ ನಾಯಕರು ಹೇಳುತ್ತಾರೆ. ಆದರೆ, ಅಂಬೇಡ್ಕರ್ ಅವರು ಈ ಎಲ್ಲ ಅಂಶಗಳಿಗೂ ಸಮರ್ಪಕವಾದ ಉತ್ತರವನ್ನು ನೀಡಿ, ಏಳು ಅಂಶಗಳನ್ನು ಮಾತ್ರ ತಿದ್ದುಪಡಿ ಮಾಡಲು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು.
ಸಂವಿಧಾನ ರಚಿಸುವಾಗ ಅಂಬೇಡ್ಕರ್ ಅವರೊಂದಿಗೆ 6 ಜನರು ಸದಸ್ಯರಿದ್ದರು ಆದರೆ, ಈ ಆರು ಸದಸ್ಯರಲ್ಲಿ ಅಂಬೇಡ್ಕರ್ ಅವರೊಂದಿಗೆ ಕಡೆಗೆ ಉಳಿದವರು ಒಬ್ಬರೆ ಸದಸ್ಯರು. ಆದರೂ ಛಲ ಬಿಡದ ಅಂಬೇಡ್ಕರ್ ಅವರು ಈ ದೇಶದ ಒಗ್ಗೂಡುವಿಕೆಗಾಗಿ ಸಂವಿಧಾನವನ್ನು ರಚಿಸಿ ಈ ದೇಶಕ್ಕೆ ಸಮರ್ಪಣೆ ಮಾಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ, ಮುನಿಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.