×
Ad

ಮಕ್ಕಳಲ್ಲಿ ಪರಿಸರ ಕುರಿತು ಪ್ರೀತಿ ಮೂಡಿಸಬೇಕು: ಕೇಂದ್ರ ಸಚಿವ ಅನಂತ್‌ಕುಮಾರ್

Update: 2017-11-26 18:36 IST

ಬೆಂಗಳೂರು, ನ.26: ಮಕ್ಕಳಿಗೆ ನಮ್ಮ ಪರಿಸರ ಕುರಿತು ಪ್ರೀತಿ, ಕಾಳಜಿ ವಹಿಸುವಂತೆ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆ ಸ್ವಚ್ಛಂದ ವಾತಾವರಣದಲ್ಲಿ ಬದುಕಲು ಸಾಧ್ಯವೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.

ರವಿವಾರ ಅದಮ್ಯ ಚೇತನ ಸಂಸ್ಥೆ ವತಿಯಿಂದ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ನೂರು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಸಿವೊಂದನ್ನು ನೆಟ್ಟು ಚಾಲನೆ ನೀಡಿದ ಅವರು, ಕೇವಲ ಸಸಿ ನೆಟ್ಟರೆ ಸಾಲದು. ಎಂತಹ ಗಿಡಗಳನ್ನು ನೆಡಬೇಕು ಹಾಗೂ ನೆಟ್ಟ ಗಿಡಗಳ ಸಂರಕ್ಷಣೆ ಹೇಗೆ ಎಂಬುದನ್ನು ಅರಿಯಬೇಕೆಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಿವೆ. ಹಾಗಾಗಿ ಅವುಗಳ ನಡುವೆ ಎಂತಹ ಗಿಡ ನೆಡಬೇಕು. ಸಸಿಗಳಿಂದ ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಪಕ್ಷಿಗಳಿಗೂ ಅನುಕೂಲ ಆಗಬೇಕು. ಅಂತಹ ಗಿಡಗಳನ್ನು ನೆಡಬೇಕು. ಹೀಗಾಗಿ 2017-18ರೊಳಗೆ ನಗರದಲ್ಲಿ 10 ಲಕ್ಷ ಸಸಿ ನೆಡಬೇಕು. ಅದಕ್ಕೆ ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

1 ಕೋಟಿ ಸಸಿ ನೆಡುವ ಗುರಿ ಹೊಂದಿದ್ದು, ಕೇವಲ ಒಂದೂವರೆ ಲಕ್ಷ ಮಾತ್ರ ನೆಡಲಾಗಿದೆ. ಇದು ಸಂಪೂರ್ಣ ಯಶಸ್ಸು ಆಗಬೇಕೆಂದಲ್ಲಿ ಸಾರ್ವಜನಿಕರು ಕೈಜೋಡಿಸಬೇಕು. ಅವರಿಗೆ ತಾವು ಉಚಿತವಾಗಿ ಸಸಿ ನೀಡುತ್ತೇವೆ. ಅದನ್ನು ಸುದಪಯೋಗಪಡಿಸಿಕೊಳ್ಳಿ. ಈ ಮೂಲಕ ನಗರದಲ್ಲಿ 1:1 (ಒಬ್ಬರಿಗೆ ಒಂದು ಮರ) ಆಗುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಅವರು ಕರೆ ನೀಡಿದರು.

ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ರಾಮಚಂದ್ರಗೌಡ, ಶಾಸಕ ರವಿಸುಬ್ರಮಣ್ಯ, ಪಾಲಿಕೆಯ ಬಿಜೆಪಿ ಸದಸ್ಯರು, ಸ್ಥಳೀಯರು ಭಾಗವಹಿಸಿದ್ದರು. ಇದೇ ವೇಳೆ ನಾನಾ ಶಾಲಾ ಮಕ್ಕಳು ನೃತ್ಯ ಪ್ರದರ್ಶಿಸುವ ಮೂಲಕ ಪರಿಸರ ಉಳಿಸಿ, ಬೆಳೆಸುವ ಕುರಿತು ಮಾಹಿತಿ ನೀಡಿದರು.

ಕೃಷ್ಣರಾವ್ ಪಾರ್ಕ್, ಶಿವನಹಳ್ಳಿ, ಬಸವನಗುಡಿ, ನಾಗರಬಾವಿ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ಹುಳಿಮಾವು, ಎಚ್‌ಎಸ್‌ಆರ್ ಲೇಔಟ್, ಪುಟ್ಟೇನಹಳ್ಳಿ, ಜೆ.ಪಿ.ನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರು ಸಸಿ ನೆಟ್ಟು 100ನೆ ಹಸಿರು ಭಾನುವಾರದ ಸಂಭ್ರಮಾಚರಣೆ ಮಾಡಿದರು.
ನಟ ಸುದೀಪ್, ನಟಿಯರಾದ ತಾರಾ, ಮಾಳವಿಕ, ಸಾಹಿತಿ ಚಂದ್ರಶೇಖರ ಕಂಬಾರ, ಕವಿ ಡಾ.ಸಿದ್ದಲಿಂಗಯ್ಯ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ಬಿ.ಎನ್.ವಿಜಯ್‌ಕುಮಾರ್ ಮತ್ತಿತರರು ಸಸಿ ನೆಟ್ಟು ಹಸಿರು ಭಾನುವಾರಕ್ಕೆ ಬೆಂಬಲ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News