×
Ad

ಅತಿರಥ ಚಿತ್ರದ ವಿರುದ್ಧ ಅಪಪ್ರಚಾರಕ್ಕೆ ನಿರ್ದೇಶಕರ ಖಂಡನೆ

Update: 2017-11-26 19:52 IST

ಬೆಂಗಳೂರು, ನ.26: ‘ಅತಿರಥ’ ಚಲನ ಚಿತ್ರದಲ್ಲಿ ನಟ ಚೇತನ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರ ಚಿತ್ರವನ್ನು ಯಾರೂ ನೋಡಬೇಡಿ. ಚಿತ್ರ ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಚರ್ಚೆ ನಡೆಸಿ ಮುಂದೆ ಏನು ಮಾಡಬೇಕೆನ್ನುವುದನ್ನು ನಿರ್ಧರಿಸುತ್ತೇವೆ ಎಂದು ಚಿತ್ರದ ನಿರ್ದೇಶಕ ಮಹೇಶ್ ಬಾಬು ಹೇಳಿದ್ದಾರೆ.

ಲಿಂಗಾಯಿತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂಬ ಹೋರಾಟ ಸೇರಿದಂತೆ ಹಲವು ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ನಟ ಚೇತನ್ ವಿರುದ್ದ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅತಿರಥ ಚಿತ್ರ ನೋಡದೆ ಬಹಿಷ್ಕರಿಸುವಂತೆ ಪ್ರಚೋದಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಚೇತನ್ ಅವರ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲವರು ಚಿತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಒಂದು ಚಿತ್ರದ ಹಿಂದೆ ಅದೆಷ್ಟೋ ಜನರ ಶ್ರಮವಿರುತ್ತದೆ ಹಾಗೂ ಜೀವನ ಇರುತ್ತದೆ ಎನ್ನುವುದು ಕಿಡಿಗೇಡಿಗಳಿಗೆ ಅರ್ಥವಾಗುತ್ತಿಲ್ಲ. ಚೇತನ್ ಹೇಳಿಕೆಯನ್ನು ಮೊದಲು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿರುವ ನಟ ಚೇತನ್ ವಿರುದ್ದ ಕೆಲವರು ಅನಗತ್ಯವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಅವರು ಹಿಂದೂ ವಿರೋಧಿ ಎಂದು ಬಿಂಬಿಸಿ, ಯಾರೂ ಚಿತ್ರ ನೋಡದಂತೆ ಪ್ರಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಒಳ್ಳೆಯ ಚಿತ್ರ ಮಾಡಿ ಜನರು ಚಿತ್ರಮಂದಿರಕ್ಕೆ ಬರದಂತಾಗಿದೆ. ಹೀಗಾಗಿ ಚಿತ್ರ ನಿರ್ಮಾಣ ಮಾಡಿದ ನಿರ್ಮಾಪಕ ಹಾಗೂ ಹಣ ಖರ್ಚು ಮಾಡಿರುವವರಿಗೆ ತೀವ್ರ ತೊಂದರೆಯಾಗಲಿದೆ ಎಂದು ನಿರ್ದೇಶಕ ಮಹೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಪ್ರತಿಭಟನೆ: ನಟ ಚೇತನ್ ವೀರಶೈವ -ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಭಗತ್ ಯುವ ಸೇನೆ ಹಾಗೂ ಆಜಾದ್ ಹಿಂದೂ ಸೇನೆಯ ಕಾರ್ಯಕರ್ತರು ಇಂದು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸಿಂಹ ಮೂವಿ ಪ್ಯಾರಡೈಸ್ ಚಿತ್ರ ಮಂದಿರದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಚೇತನ್ ನಟನೆಯ ಅತಿರಥ ಚಿತ್ರದ ಪ್ರದರ್ಶನ ರದ್ದುಗೊಳಿಸುವಂತೆ ಒತ್ತಾಯಿಸಿ ಚಿತ್ರದ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News