×
Ad

ಭಾರತದ ಯುವ ಪೀಳಿಗೆ ಒತ್ತಡದಲ್ಲಿದೆ: ಜಾಂಟಿ ರೋಡ್ಸ್ ಆತಂಕ

Update: 2017-11-26 19:58 IST

ಬೆಂಗಳೂರು, ನ.26: ಭಾರತದ ಯುವ ಪೀಳಿಗೆ ಆಧುನಿಕ ಜೀವನ ಶೈಲಿಯ ಆಕರ್ಷಣೆಗೆ ಒಳಗಾಗಿ ಒತ್ತಡಕ್ಕೆ ಸಿಲುಕಿ, ಅನಾರೋಗ್ಯಕ್ಕೀಡಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವರ್ತೂರು ವೈಟ್‌ಫೀಲ್ಡ್‌ನಲ್ಲಿರುವ ಟೋಟಲ್ ಫಿಟ್‌ನೆಸ್‌ನ 4ನೆ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಜನತೆ ಪ್ರಗತಿಯ ಪಥದಲ್ಲಿ ಸಾಗುತ್ತಿರುವ ಬೆನ್ನಲ್ಲೇ ಒತ್ತಡಕ್ಕೆ ಒಳಗಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರೀಡೆ ಇಲ್ಲವೆ ವ್ಯಾಯಾಮದ ಕಡೆಗೆ ಗಮನ ಕೊಡಬೇಕೆಂದು ತಿಳಿಸಿದರು.

ವಿಶ್ವದಲ್ಲಿಯೇ ಭಾರತ ಅತ್ಯಂತ ಪ್ರಗತಿಪರ ಹಾದಿಯಲ್ಲಿ ಸಾಗುತ್ತಿದೆ. ಇಲ್ಲಿನ ಯುವ ಜನತೆಯ ಮನಸ್ಥಿತಿ ವೇಗದ ಜೀವನಕ್ಕೆ ಹೊಂದಿಕೊಳ್ಳಲು ಸಿದ್ಧವಾಗಿದೆ. ಇದು ಒಳ್ಳೆಯ ಬೆಳವಣಿಗೆಯಾದರೂ ಈ ಸಂದರ್ಭದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಆಗುವ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ದಿನಕ್ಕೆ ಒಂದು ಗಂಟೆ ಮೀಸಲಿಟ್ಟು, ವ್ಯಾಯಾಮದಲ್ಲಿ ತೊಡಗಬೇಕು ಎಂದು ಅವರು ಆಶಿಸಿದರು.

ನನ್ನ ಕ್ರಿಕೆಟ್ ವೃತ್ತಿಯಲ್ಲೂ ನಾನು ಸಾಕಷ್ಟು ಒತ್ತಡ ಎದುರಿಸಿದ್ದೆ. ಆದರೆ, ವ್ಯಾಯಾಮ, ಕ್ರೀಡೆ, ಯೋಗದ ಮೂಲಕ ಪ್ರತಿಯೊಂದು ದಿನವನ್ನು ಹೊಸತನ್ನಾಗಿಸಿಕೊಳ್ಳುವ ಮೂಲಕ ಒತ್ತಡದಿಂದ ಮುಕ್ತಿ ಪಡೆಯುತ್ತಿದ್ದೆ. ಹೀಗೆ ಒತ್ತಡವೆನ್ನುವುದು ಪ್ರತಿಯೊಬ್ಬರಿಗೂ ಸಾಮಾನ್ಯ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ. ಆದರೆ, ಅದನ್ನು ದೊಡ್ಡ ಸಮಸ್ಯೆಯಾಗಿ ಬೆಳೆಯುವುದಕ್ಕೆ ಬಿಡಬಾರದು ಎಂದು ಅವರು ಹೇಳಿದರು.

 ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ವೈಟ್‌ಫೀಲ್ಡ್ ಟೋಟಲ್ ಫಿಟ್‌ನೆಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News