ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿಲ್ಲ: ಅರುಣ್ ಜೇಟ್ಲಿ

Update: 2017-11-28 16:37 GMT

ಹೊಸದಿಲ್ಲಿ, ನ. 28: ಬ್ಯಾಂಕ್‌ಗಳು ಕೈಗಾರಿಕೋದ್ಯಮಿಗಳ ಸಾಲಮನ್ನಾ ಮಾಡಿವೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ , ಸರಕಾರ ಬೃಹತ್ ಎನ್‌ಪಿಎ ಸುಸ್ತಿದಾರರ ಸಾಲಮನ್ನಾ ಮಾಡಿಲ್ಲ ಎಂದು ತಿಳಿಸಿದ್ದಾರೆ.

  ಕೈಗಾರಿಕೋದ್ಯಮಿಗಳ ಸಾಲವನ್ನು ಬ್ಯಾಂಕ್‌ಗಳು ಮನ್ನಾ  ಮಾಡಿವೆ ಎಂದು ಕಳೆದ ಕೆಲ ದಿನಗಳಿಂದ ವದಂತಿ ಹರಿದಾಡುತ್ತಿದೆ. ಆದರೆ ಇದು ಸತ್ಯವಲ್ಲ. ಈ ವಿಷಯದಲ್ಲಿ ದೇಶಕ್ಕೆ ಸತ್ಯ ತಿಳಿಸುವ ಕಾಲ ಇದೀಗ ಬಂದಿದೆ ಎಂದ ಜೇಟ್ಲಿ, ಯಾರ ಕೋರಿಕೆ ಮೇರೆಗೆ 2008ರಿಂದ 2014ರ ಅವಧಿಯಲ್ಲಿ ಸಾಲ ನೀಡಲಾಗಿದೆ (ಈ ಸಾಲ ಇದೀಗ ಎನ್‌ಪಿಎ- ಅನುತ್ಪಾದಕ ಆಸ್ತಿಯಾಗಿದೆ) ಎಂಬ ಪ್ರಶ್ನೆಯನ್ನು ಕೇಳಬೇಕಿದೆ ಎಂದರು.

  2008ರಿಂದ 2014ರವರೆಗೆ ನೀಡಲಾಗಿರುವ ಸಾಲ ಇದೀಗ ಎನ್‌ಪಿಎ ಆಗಿಬಿಟ್ಟಿದೆ. ಯಾರ ಕೋರಿಕೆ ಅಥವಾ ಪ್ರಭಾವದ ಮೇರೆಗೆ ಈ ರೀತಿ ಬೇಕಾಬಿಟ್ಟಿ ಸಾಲ ನೀಡಲಾಗಿದೆ ಎಂಬುದನ್ನು ವದಂತಿ ಹಬ್ಬುವವರನ್ನು ಜನತೆ ಕೇಳುವ ಕಾಲ ಬಂದಿದೆ. ಅಲ್ಲದೆ ಈ ರೀತಿ ಸಾಲ ಪಡೆದವರು ಸಾಲ ಮರುಪಾವತಿಗೆ ವಿಳಂಬಿಸಿದಾಗ ಅಂದಿನ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನೂ ಕೇಳಬೇಕಿದೆ ಎಂದು ಜೇಟ್ಲಿ ಹೇಳಿದರು.

 ಸಾಲ ಮರುಪಾವತಿ ಮಾಡದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಅಂದಿನ ಸರಕಾರ ಸಾಲ ವರ್ಗೀಕರಣ ನಿಯಮದಲ್ಲಿ ವಿನಾಯಿತಿ ನೀಡಿ ಈ ಸಾಲವನ್ನು ಎನ್‌ಪಿಎ ಪಟ್ಟಿಗೆ ಸೇರಿಸಿದೆ. ಈ ಕಾರಣ 2015ರ ಬ್ಯಾಲೆನ್ಸ್‌ಶೀಟ್‌ನಲ್ಲಿ ಎನ್‌ಪಿಎ ಮೊತ್ತ ಅಧಿಕವಾಗಿದೆ ಎಂದು ಜೇಟ್ಲಿ ಹೇಳಿದರು. ಆಸ್ತಿ ಲಕ್ಷಣ ಅವಲೋಕನ(ಎಕ್ಯೂಆರ್)ದ ಬಳಿಕ ಸುಮಾರು 4,54,466 ಕೋಟಿ ರೂ. ಮೊತ್ತದ ಸಾಲವನ್ನು ಮರೆಮಾಚಿ ಇಟ್ಟಿರುವುದು ತಿಳಿದುಬಂದಿದೆ.ಈ ಸಾಲವನ್ನು ಎನ್‌ಪಿಎಗೆ ಸೇರಿಸಬೇಕಿತ್ತು ಎಂದು ಜೇಟ್ಲಿ ಹೇಳಿದರು.

ಬೃಹತ್ ಎನ್‌ಪಿಎ ಸುಸ್ತಿದಾರರ ಸಾಲವನ್ನು ಮನ್ನಾ ಮಾಡಲಾಗಿಲ್ಲ. ಹೊಸದಾಗಿ ಜಾರಿಗೆ ಬಂದಿರುವ ದಿವಾಳಿತನ ಕಾಯ್ದೆಯಡಿ, 12 ಬೃಹತ್ ಸುಸ್ತಿದಾರರ ಪ್ರಕರಣವನ್ನು ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಾಧಿಕರಣಕ್ಕೆ ವಹಿಸಿಕೊಡಲಾಗಿದೆ. ಈ 12 ಸುಸ್ತಿದಾರರು ಒಟ್ಟು 1.75 ಲಕ್ಷ ಕೋಟಿ ಮೊತ್ತದ ಸಾಲ ಬಾಕಿ ಇರಿಸಿಕೊಂಡಿದ್ದಾರೆ. ಇವರಿಂದ ಸಾಲ ವಸೂಲು ಮಾಡುವ ಪ್ರಕ್ರಿಯೆ ವಿವಿಧ ಹಂತದಲ್ಲಿ ನಡೆಯುತ್ತಿದೆ ಎಂದು ಜೇಟ್ಲಿ ತಿಳಿಸಿದರು.

    ಎನ್‌ಪಿಎ ಹೊರೆಯಿಂದ ದುರ್ಬಲಗೊಂಡಿರುವ ಬ್ಯಾಂಕ್‌ಗಳಿಗೆ ಶಕ್ತಿ ತುಂಬಲು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಬಂಡವಾಳ ಪೂರೈಸಲು ಸರಕಾರ ನಿರ್ಧರಿಸಿದ್ದು , 2.11 ಲಕ್ಷ ಕೋಟಿ ಮೊತ್ತದ ಬಂಡವಾಳ ಹೆಚ್ಚಳವಾಗಲಿದೆ ಎಂದು ಅವರು ಹೇಳಿದರು. ಈ ಬಂಡವಾಳ ಪಡೆಯಬೇಕಾದರೆ ಬ್ಯಾಂಕ್‌ಗಳು ಕೆಲವೊಂದು ಸುಧಾರಣಾ ಪ್ರಕ್ರಿಯೆ ಕೈಗೊಳ್ಳಬೇಕಿದೆ ಎಂದ ಅವರು, ಕಳೆದ ಮೂರು ವರ್ಷಗಳಿಂದ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಲವರ್ಧನೆಗೆ ಸರಕಾರ ಕ್ರಮ ಕೈಗೊಂಡಿದೆ. (ಎಸ್‌ಬಿಐ) ಸ್ಟೇಟ್ ಬ್ಯಾಂಕ್ ನ ಸಂಯೋಜನೆಯ ಮೂಲಕ ಬಲಿಷ್ಟ ಮತ್ತು ಬೃಹತ್ ಬ್ಯಾಂಕ್ ರೂಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರಾಮಾಣಿಕ ಉದ್ಯಮಿಗಳು ಬಲಿಷ್ಟ ಮತ್ತು ಸುಧಾರಿತ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದು . ಕಠಿಣ ಮತ್ತು ಸ್ಪಷ್ಟ ಕಾನೂನು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶುದ್ಧಗೊಳಿಸಲಿದೆ ಎಂದು ಜೇಟ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News