ಬಾಹ್ಯ ಉಗ್ರವಾದದಷ್ಟೇ ಆತಂಕ ಆಂತರಿಕ ಉಗ್ರವಾದದ್ದು!

Update: 2017-11-28 18:41 GMT

ಮಾನ್ಯರೆ,

ನಮ್ಮ ಪ್ರಧಾನಿಗಳು ‘ಮನ್ ಕಿ ಬಾತ್’ನಲ್ಲಿ ಮಾತನಾಡುತ್ತ ‘‘ಉಗ್ರವಾದದಿಂದ ಮಾನವತೆಯ ನಾಶವಾಗುತ್ತಿದೆ. ಅದನ್ನು ನಿರ್ನಾಮ ಮಾಡಲು ನಾವು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ’’ ಎಂದು ತಿಳಿಸಿರುವುದು ಸ್ವಾಗತಾರ್ಹ. ಈ ಭಾರತವನ್ನು ಹೊರಗಿನ ಉಗ್ರವಾದಿಗಳು ಎಷ್ಟು ನಾಶಮಾಡುತ್ತಿದ್ದಾರೆಯೋ, ಅಷ್ಟೇ ಪ್ರಮಾಣದಲ್ಲಿ ಒಳಗಿನ ಮೂಲಭೂತವಾದಿಗಳು ನಾಶಮಾಡುತ್ತಿದ್ದಾರೆ ಎಂಬುದು ಮಾನ್ಯರ ಅರಿವಿಗೆ ಬಾರದಿರದು. ನಮ್ಮದು ಭಾವೈಕ್ಯತೆಯ ರಾಷ್ಟ್ರ. ಇಲ್ಲಿ ಹಲವು ಧರ್ಮ, ಜಾತಿಯ ಜನಗಳಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡೇ ಬಾಬಾಸಾಹೇಬರು ಭಾರತಕ್ಕೆ ಇಡೀ ವಿಶ್ವವೇ ಶ್ಲಾಘಿಸುವಂತಹ ಸಂವಿಧಾನವನ್ನು ರಚಿಸಿಕೊಟ್ಟಿರುವುದು. ಆದರೆ ಮೊನ್ನೆ ಜರುಗಿದ ಧರ್ಮ ಸಂಸದ್ ಸಮ್ಮೇಳನದಲ್ಲಿ ಪೇಜಾವರ ಸ್ವಾಮಿಯವರು ‘‘ಈ ದೇಶದ ಸಂವಿಧಾನವು ಅಲ್ಪಸಂಖ್ಯಾತರಿಗೊಂದು, ಬಹುಸಂಖ್ಯಾತರಿಗೊಂದು ರೀತಿಯ ಕಾನೂನನ್ನು ಹೊಂದಿದೆ. ಆದ್ದರಿಂದ ಸಂವಿಧಾನವನ್ನೇ ಬದಲಾಯಿಸಬೇಕು’’ ಎಂಬ ಮಾತುಗಳನ್ನು ಆಡಿದ್ದಾರೆ. ಒಂದೆಡೆ ಸಂವಿಧಾನವೇ ಶ್ರೇಷ್ಠವೆಂದು ಪ್ರಧಾನಿಯವರೇ ನುಡಿಯುತ್ತಾರೆ. ಮತ್ತೊಂದೆಡೆೆ ಬಿಜೆಪಿಯ ಮುಖ್ಯ ಸಂಸ್ಥೆಯಾದ ಆರೆಸ್ಸೆಸ್‌ನ ಸದಸ್ಯರು ಮನಬಂದಂತೆ ಹೇಳಿಕೆಗಳನ್ನು ನೀಡುತ್ತಾರೆ. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಮತ್ತೊಬ್ಬ ಸದಸ್ಯರಾದ ನರೇಂದ್ರನ್ ಸರಸ್ವತಿಯವರು ‘‘ಈ ದೇಶದ ಮುಸಲ್ಮಾನರು ಮದುವೆಯಾಗಲು ಹೆಣ್ಣುಮಕ್ಕಳೇ ದೊರಕದಂತೆ ಮಾಡುತ್ತೇವೆ’’ ಎಂದು ಪ್ರಚೋದನಾಕಾರಿ ಭಾಷಣವನ್ನು ಮಾಡಿದ್ದಾರೆ. ‘‘ಅಲ್ಲದೆ ಈ ದೇಶದಲ್ಲಿ ಧರ್ಮ, ಜಾತಿಯ ಆಧಾರದ ಮೇಲೆ ಸಂವಿಧಾನದಲ್ಲಿ ಮೀಸಲಾತಿಯನ್ನು ನೀಡಲಾಗಿದೆ ಆದ್ದರಿಂದ ಸಂವಿಧಾನವನ್ನೇ ಬದಲಾಯಿಸಬೇಕು’’ ಎಂದು ಹೇಳಿದ್ದಾರೆ. ‘‘ಈ ದೇಶದ ಯುವಕರು ಲಕ್ಷಾಂತರ ಬೆಲೆಯ ಮೊಬೈಲ್ ಫೋನ್‌ಗಳನ್ನು ಬಿಟ್ಟು ಧರ್ಮ ರಕ್ಷಣೆಗೆ ತಲವಾರ್‌ಗಳನ್ನು ಹಿಡಿಯಬೇಕು’’ ಎಂದಿದ್ದಾರೆ. ಇಂತಹ ನುಡಿಗಳು ಯಾವುದೇ ಬಾಹ್ಯ ಉಗ್ರ ಸಂಘಟನೆಗಳ ಹೇಳಿಕೆಗಿಂತ ಕಡಿಮೆ ಇಲ್ಲ ಎಂಬುದು ನಮ್ಮ ಪ್ರಧಾನಿಯವರಿಗೆ ತಿಳಿಯದೇ? ಒಂದೆಡೆ ಪರವಾಗಿ, ಮತ್ತೊಂಡೆದೆ ವಿರೋಧವಾಗಿ ಮಾತನಾಡುವವರೂ ಇವರೇ. ಈ ಎಲ್ಲಾ ಮಾತುಗಳು ಇವರ ಇಬ್ಬಗೆಯ ನೀತಿಯನ್ನು, ಪ್ರಚಾರದ ಗೀಳನ್ನು ತೋರಿಸುತ್ತಿದೆ. ದಯಮಾಡಿ ಪ್ರಧಾನಿಯವರು ತಮ್ಮ ಸಂಘಪರಿವಾರದ ಆಂತರಿಕ ಉಗ್ರವಾದಿಗಳಿಗೆ ಉಪಯೋಗಕ್ಕೆ ಬಾರದ ವಿಷಯ ಲಂಪಟತನವನ್ನು ಬಿಟ್ಟು ಈ ದೇಶದ ಅಭಿವೃದ್ಧಿಯ ಬಗ್ಗೆ ಯೋಚಿಸುವಂತೆ ತಿಳಿಹೇಳುವುದು ಒಳಿತು.

Similar News