ನಿಮ್ಮ ನವಜಾತ ಕಂದ ನೋಡಲು ಮತ್ತು ಕೇಳಲು ಆರಂಭಿಸುವುದು ಯಾವಾಗ ಗೊತ್ತಾ?

Update: 2017-11-29 10:13 GMT

ಒಂಭತ್ತು ತಿಂಗಳ ಸುದೀರ್ಘ ನಿರೀಕ್ಷೆಯ ಬಳಿಕ ತಮ್ಮದೇ ರಕ್ತ-ಮಾಂಸಗಳನ್ನು ಹಂಚಿಕೊಂಡ ಕರುಳ ಕುಡಿ ಈ ಧರೆಗಿಳಿದಾಗ ಹೆತ್ತವರು ಸಂಭ್ರಮದಿಂದ ಸ್ವರ್ಗದಲ್ಲಿ ತೇಲುತ್ತಿರುತ್ತಾರೆ. ಮಾತೃತ್ವ ನಿಜಕ್ಕೂ ಅತ್ಯದ್ಭುತ ಅನುಭವ. ನವಜಾತ ಕಂದನನ್ನು ಎದೆಗಪ್ಪಿಕೊಂಡಾಗ ಆವರೆಗೆ ಅನುಭವಿಸಿದ ಹೆರಿಗೆಯ ನೋವು ಮರೆತೇಹೋಗುತ್ತದೆ. ಮಗುವಿಗೆ ಯಾವುದೇ ಸಮಯದಲ್ಲಿಯೂ ತೊಂದರೆಯಾಗದಂತೆ ತಾಯಿ ಅದನ್ನು ತನ್ನ ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಸಾಕುತ್ತಾಳೆ.

 ಹೊಸದಾಗಿ ತಾಯಿಯ ಪಟ್ಟಕ್ಕೇರಿದವರ ಮನಸ್ಸಿನಲ್ಲಿ ಹಲವಾರು ಶಂಕೆಗಳು ಮನೆ ಮಾಡಿರುತ್ತವೆ. ಮಗುವಿಗೆ ಹಸಿವೆಯಾಗಿದೆಯೇನೋ,ಅದಕ್ಕೆ ನಿದ್ರೆ ಬರುತ್ತಿದೆಯೇನೋ ಅಥವಾ ತನಗೆ ಅದರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವುದೇ ಎಂದೆಲ್ಲ ಆಕೆ ನಿರಂತರವಾಗಿ ಚಿಂತಿಸುತ್ತಿರುತ್ತಾಳೆ.

ನವಜಾತ ಶಿಶುಗಳ ದೃಷ್ಟಿಯಲ್ಲಿ ಈ ಲೋಕ ಬೇರೆಯೇ ಆಗಿರುತ್ತದೆ. ಜನ್ಮ ತಳೆದ ನಂತರ ಶಿಶು ಒಂದು ಬಗೆಯ ಚಡಪಡಿಕೆಯನ್ನು ಅನುಭವಿಸುತ್ತಿರುತ್ತದೆ. ತಾಯಿಯ ಗರ್ಭಕೋಶದ ಬಿಸುಪು ತಪ್ಪಿರುವುದು ಇದಕ್ಕೆ ಕಾರಣ. ಶಿಶುವು ತನ್ನ ಅಗತ್ಯಗಳ ಬಗ್ಗೆ ತಿಳಿಸಲು ತನ್ನದೇ ಆದ ವಿಶಿಷ್ಟ ಸಂವಹನ ಮಾರ್ಗಗಳನ್ನು ಹೊಂದಿರುತ್ತದೆ. ತಾಯಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ, ಅದನ್ನು ಮಗುವೇ ತಾಯಿಗೆ ಕಲಿಸುತ್ತದೆ.

ಮಗುವಿನ ಬೆಳವಣಿಗೆ ಹೊಸದಾಗಿ ತಾಯಿಯ ಪಟ್ಟವನ್ನೇರಿದವರಿಗೆ ನಿರಂತರ ಚಿಂತೆಯ ವಿಷಯವಾಗಿರುತ್ತದೆ. ಮಗುವಿನ ಮಿದುಳಿನಲ್ಲಿ ಏನು ನಡೆಯುತ್ತಿರುತ್ತದೆ, ಅದು ತನ್ನ ಸುತ್ತಮುತ್ತಲಿನ ವಾತಾವರಣವನ್ನು ಹೇಗೆ ಗ್ರಹಿಸುತ್ತದೆ, ಅದಕ್ಕೆ ತನ್ನನ್ನು ಗುರುತಿಸಲು ಅಥವಾ ತನ್ನ ಧ್ವನಿಯನ್ನು ಕೇಳಲು ಸಾಧ್ಯವಾಗುತ್ತಿದೆಯೇ ಎಂಬ ಕೌತುಕ ತಾಯಿಯಾದ ವಳಲ್ಲಿ ಮನೆ ಮಾಡಿರುತ್ತದೆ.

ಶಿಶುಗಳು ತಾಯಿಯ ಗರ್ಭದಲ್ಲಿರುವಾಗ ತ್ವರಿತವಾಗಿ ಬೆಳೆಯುತ್ತವೆ. ಭ್ರೂಣಕ್ಕೆ ಆರು ತಿಂಗಳ ಪ್ರಾಯವಾಗಿದ್ದಲೇ ಶಬ್ದಗಳನ್ನು ಗುರುತಿಸಲು ಅದಕ್ಕೆ ಸಾಧ್ಯವಾಗಿರುತ್ತದೆ. ಅದಕ್ಕೆ ತಾಯಿಯ ಧ್ವನಿ ಮತ್ತು ಹೃದಯಬಡಿತ ಚಿರಪರಿಚಿತವಾಗಿರುತ್ತವೆ. ವಾಸ್ತವದಲ್ಲಿ ತಾಯಿ ಯ ಹೃದಯಬಡಿತ ಮಗುವಿಗೆ ಅತ್ಯಂತ ಹೆಚ್ಚಿನ ನೆಮ್ಮದಿಯನ್ನು ನೀಡುವ ಶಬ್ದವಾಗಿದೆ. ಹೀಗಾಗಿ ಮಗುವಿಗೆ ಹಿತಾನುಭವ ಮೂಡಿಸಲು ಅದನ್ನು ಎದೆಗೊತ್ತಿ ಹಿಡಿದುಕೊಳ್ಳುವಂತೆ ವೈದ್ಯರು ತಾಯಂದಿರಿಗೆ ಸೂಚಿಸುತ್ತಾರೆ. ಶಿಶುವಿಗೆ ಅದು ಭ್ರೂಣಾವಸ್ಥೆಯಲ್ಲಿದ್ದಾಗ ಕೇಳಿದ ಕೆಲವು ಹಾಡುಗಳೂ ಚಿರಪರಿಚಿತವಾಗಿರುತ್ತವೆ ಎಂದರೆ ಅಚ್ಚರಿ ಪಡಬೇಕಿಲ್ಲ.

ಮಗುವು ಜನಿಸಿದ ಮೊದಲ ತಿಂಗಳಲ್ಲಿ ಅದಕ್ಕೆ ಈ ಜಗತ್ತಿನಲ್ಲಿಯ ಶಬ್ದಗಳ ಪರಿಚಯವಾಗುತ್ತದೆ, ಆದರೆ ಶಬ್ದಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯ ವಾಗುವುದು ಒಂದು ತಿಂಗಳ ಬಳಿಕವೇ. ಮಗು ತನ್ನ ಧ್ವನಿ ಕೇಳಿ ಬಂದ ದಿಕ್ಕಿನತ್ತ ಹೊರಳುವುದು ಮತ್ತು ಗಟ್ಟಿಯಾದ ಬಾಗಿಲ ಶಬ್ದ ಅಥವಾ ನಾಯಿಯ ಬೊಗಳುವಿಕೆ ಕೇಳಿದಾಗ ಬೆಚ್ಚಿ ಬೀಳುವುದನ್ನು ತಾಯಿ ಗಮನಿಸಬಹುದು. ಪುಟ್ಟ ಕಂದಮ್ಮಗಳು ಹಿತವಾದ ಜೋಗುಳ ಅಥವಾ ಫ್ಯಾನ್ ತಿರುಗುವಾಗಿನ ಸಣ್ಣ ಗುಂಯ್‌ಗುಡುವಿಕೆಯಂತಹ ಮೆಲುವಾದ ಶಬ್ದಗಳನ್ನು ಇಷ್ಟಪಡುತ್ತವೆ. ಅವು ತಾಯಿಯ ಗರ್ಭದಲ್ಲಿದ್ದಾಗ ಸದಾ ಮೆಲುವಾದ ಶಬ್ದವನ್ನು ಕೇಳುತ್ತಿದ್ದುದೇ ಇದಕ್ಕೆ ಕಾರಣವಾಗಿದೆ. ಕೋಣೆಯಲ್ಲಿ ಗಾಢ ವೌನದ ಬದಲು ಮೆಲುವಾದ ಶಬ್ದಗಳಾಗುತ್ತಿದ್ದರೆ ಮಗು ಒಳ್ಳೆಯ ನಿದ್ರೆ ಮಾಡುತ್ತದೆ.

ಮಗು ಹುಟ್ಟಿದಾಗ ಅದರ ದೃಷ್ಟಿಪ್ರಜ್ಞೆ ಹೆಚ್ಚಿನ ಅಭಿವೃದ್ಧಿ ಹೊಂದಿರುವುದಿಲ್ಲ. ಅದು ಹೆಚ್ಚೆಂದರೆ 8ರಿಂದ 12 ಇಂಚುಗಳಷ್ಟೇ ದೂರ ಕಾಣಬಲ್ಲದು. ಉಳಿದಿದ್ದೆಲ್ಲವೂ ಅದಕ್ಕೆ ತುಂಬ ಮಸುಕಾಗಿ ತೋರುತ್ತಿರುತ್ತದೆ. ಬಣ್ಣಗಳ ನಡುವಿನ ವ್ಯತ್ಯಾಸವು ಅದಕ್ಕೆ ಗೊತ್ತಾಗುವುದಿಲ್ಲ. ಮಗುವಿಗೆ ತಾನು ಎದೆಹಾಲು ಕುಡಿಯುವಾಗ ತಾಯಿಯ ಮುಖವನ್ನು ನೋಡಲಷ್ಟೇ ಸಾಧ್ಯವಾಗುತ್ತದೆ, ಆದ್ದರಿಂದ ಅದು ಬೆಳೆಯುತ್ತಿದ್ದಂತೆ ತಾಯಿಯನ್ನೇ ಹೆಚ್ಚು ಹಚ್ಚಿಕೊಳ್ಳುತ್ತದೆ. ಆದರೆ ಚಲಿಸುತ್ತಿರುವ ವಸ್ತುಗಳು ಮಗುವಿನ ಗಮನವನ್ನು ಬಹುಬೇಗನೆ ಸೆಳೆಯುತ್ತವೆ. ನಾಲ್ಕು ತಿಂಗಳು ತುಂಬಿದಾಗ ಮಗುವಿನಲ್ಲಿ ಬಣ್ಣಗಳ ಬಗ್ಗೆ ಪ್ರಜ್ಞೆ ಮೂಡಲು ಅರಂಭವಾಗುತ್ತದೆ ಮತ್ತು ತನ್ನ ಸುತ್ತಲಿನ ಜಗತ್ತು ಬಣ್ಣಗಳಿಂದ ಕೂಡಿದ ಬೃಹತ್ ಕ್ಯಾನ್ವಾಸಿನಂತೆ ಅದಕ್ಕೆ ಕಾಣುತ್ತದೆ. ಈಗ ಮಗುವಿಗೆ ತನ್ನ ಸುತ್ತಲಿನ ಚಿತ್ರಣಗಳ ವಿವರಗಳನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ಅದು ತನಗೆ ಇಷ್ಟವಾದ ಆಟಿಕೆಯನ್ನು ಗುರುತಿಸುತ್ತದೆ.

ಕಂದಮ್ಮಗಳು ಸರಸರನೆ ಬೆಳೆಯುವ ಪವಾಡಗಳಾಗಿವೆ. ಆದರೆ ಪ್ರತಿಯೊಂದು ಮಗುವೂ ಇತರ ಮಗುವಿಗಿಂತ ಭಿನ್ನವಾಗಿರುತ್ತದೆ. ಹೀಗಾಗಿ ಅವುಗಳ ಹೋಲಿಕೆ ಸಾಧ್ಯವಿಲ್ಲ. ಆದ್ದರಿಂದ ತನ್ನ ಮಗು ಇತರ ಮಕ್ಕಳಂತೆ ತ್ವರಿತ ಬೆಳವಣಿಗೆಯ ಕುರುಹುಗಳನ್ನು ತೋರಿಸುತ್ತಿಲ್ಲ ಎಂದು ತಾಯಿ ಚಿಂತಿಸಬೇಕಿಲ್ಲ. ಮಗು ಈ ಜೀವನದ ಜಂಜಾಟದಲ್ಲಿ ಸಿಕ್ಕಿಹಾಕಿಕೊಳ್ಳಲು ಬಯಸುವದಿಲ್ಲ ಮತ್ತು ತನ್ನದೇ ಆದ ಗತಿಯಲ್ಲಿ ಬೆಳೆಯುವುದನ್ನು ಇಷ್ಟಪಡುತ್ತದೆ. ಮಗು ದೊಡ್ಡದಾಗುತ್ತ ಹೋಗುತ್ತಿದ್ದಂತೆ ಪ್ರತಿಯೊಂದನ್ನೂ ಕಲಿತುಕೊಳ್ಳುತ್ತ ಹೋಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News