ನಾನು ಕಾಲನ್ನು ಕಳೆದುಕೊಂಡೆ....ಆದರೆ ಬದುಕುವ ಛಲವನ್ನಲ್ಲ

Update: 2017-11-29 13:32 GMT

ನಾಲ್ವರು ಸೋದರರಿದ್ದರೂ ಹೆತ್ತವರಿಗೆ ಏಕಮಾತ್ರ ಆಧಾರವಾಗಿದ್ದ ಬಾಂಗ್ಲಾದೇಶದ ನಿವಾಸಿ ಸಗೀರ್ ಅದೊಂದು ದಿನ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಒಂದು ಕಾಲನ್ನು ಕಳೆದುಕೊಂಡಿದ್ದ. ಕಾಲು ತುಂಡಾಗಿ ರೈಲುಹಳಿಯಲ್ಲಿ ಬಿದ್ದುಕೊಂಡಿದ್ದಾಗಲೂ ತನ್ನ ಹೆತ್ತವರನ್ನು ಇನ್ನು ಹೇಗೆ ಪೋಷಿಸಲಿ ಎಂಬ ಚಿಂತೆ ಈ 20ರ ಹರೆಯದ ಯುವಕನನ್ನು ಕಾಡುತ್ತಿತ್ತು. ಆದರೆ ಇಂದು ಒಂದು ಕಾಲಿಲ್ಲದಿದ್ದರೂ ಬದುಕುವ ಛಲವನ್ನು ಕಳೆದುಕೊಳ್ಳದ ಸಗೀರ್ ಹೇಳಿದ್ದನ್ನು ಆತನ ಮಾತುಗಳಲ್ಲೇ ಕೇಳಿ.....

 ಎರಡು ವರ್ಷಗಳ ಹಿಂದಿನ ಆ ರೈಲು ಅಪಘಾತವನ್ನು ಈಗಲೂ ನಾನು ಮರೆತಿಲ್ಲ. ಅಂದು ನಾನು ಅನುಭವಿಸಿದ್ದ ಭಯ ಮತ್ತು ಆತಂಕ ಈಗಲೂ ನನಗೆ ನೆನಪಿದೆ. ಟೊಂಗಿಯಲ್ಲಿ ನಮ್ಮ ಕಡೆಯ ನಮಾಝ್ ಮುಗಿಸಿಕೊಂಡು ನಾನು ಮತ್ತು ನನ್ನ ತಂದೆ ಮನೆಗೆ ಮರಳುತ್ತಿದ್ದೆವು. ರೈಲು ಕಿಕ್ಕಿರಿದು ತುಂಬಿದ್ದರಿಂದ ಮೇಲ್ಚಾವಣಿಯ ಮೇಲೆ ನಾವು ಕುಳಿತಿದ್ದೆವು. ನನ್ನ ತಂದೆ ಕುಳಿತಿದ್ದ ಸ್ಥಳದಿಂದ ವ್ಯಕ್ತಿಯೋರ್ವ ಕೆಳಗೆ ಬಿದ್ದ ಎಂದು ಕೆಲವರು ಹೇಳುತ್ತಿದ್ದರು. ನನ್ನ ತಂದೆ ಅಲ್ಲೆಲ್ಲೂ ಕಾಣಿಸುತ್ತಿರಲಿಲ್ಲ. ಕಂಗಾಲಾಗಿದ್ದ ನಾನು ಅವರಿಗಾಗಿ ಹುಡುಕುತ್ತಿದ್ದಾಗ ಯಾರೋ ನನ್ನನ್ನು ತಳ್ಳಿದ್ದರು,ಅಷ್ಟೇ. ನನಗೆ ಆಗಿನ ಪ್ರತಿಯೊಂದು ಕ್ಷಣವೂ ಚೆನ್ನಾಗಿ ನೆನಪಿದೆ. ಮುಂದಿನ 2-3 ಸೆಕೆಂಡ್‌ಗಳಲ್ಲಿ ನಾನು ರೈಲಿನ ಕೆಳಗೆ ಬಿದ್ದಿದ್ದೆ. ರೈಲಿನ ಚಕ್ರ ಹರಿದು ನನ್ನ ಎಡಗಾಲು ಸ್ಥಳದಲ್ಲಿಯೇ ತುಂಡಾಗಿತ್ತು. ರಕ್ತವು ಹರಿದು ಹೋಗುತ್ತಲೇ ಇತ್ತು ಮತ್ತು ಜೀವನದ ಕುರಿತು ನನ್ನೆಲ್ಲ ಕನಸುಗಳು ಮತ್ತು ವೃದ್ಧ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ನನ್ನ ಆಸೆಗಳು ಆ ರಕ್ತದೊಂದಿಗೆ ಕೊಚ್ಚಿಕೊಂಡು ಹೋಗಿದ್ದವು. ನನ್ನ ಕಣ್ಣಿಗೆ ನನ್ನ ಮೇಲಿನಿಂದ ಚಲಿಸುತ್ತಿದ್ದ ರೈಲಿನ ಅಡಿಭಾಗ ಮಾತ್ರ ಕಾಣಿಸುತ್ತಿತ್ತು. ರೈಲು ನನ್ನೆಲ್ಲ ಕನಸುಗಳನ್ನು ಕಿತ್ತುಕೊಂಡಿತ್ತು.

ಅಷ್ಟಾದ ಬಳಿಕ ನಾನು ಅದೇ ಸ್ಥಿತಿಯಲ್ಲಿ ಹಳಿಗಳ ಮೇಲೆ ಬಿದ್ದುಕೊಂಡಿದ್ದೆ. ನಾನು ಶಾಶ್ವತವಾಗಿ ಅಲ್ಲಿಯೇ ಬಿದ್ದುಕೊಂಡಿರುತ್ತೇನೆ ಎಂಬಂತೆ ನನಗೆ ಭಾಸವಾಗುತ್ತಿತ್ತು. ನನ್ನ ಗಂಟಲು ಒಣಗುವವರೆಗೂ ನಾನು ಚೀರುತ್ತಲೇ ಇದ್ದೆ, ನಾನು ನೆರವಿಗಾಗಿ ಆಕ್ರಂದನ ಮಾಡುತ್ತಿದ್ದೆ. ಅಲ್ಲಿ ಸಾವಿರಾರು ಜನರಿದ್ದರು, ಆದರೆ ಯಾರೂ ನನ್ನ ನೆರವಿಗೆ ಬರಲಿಲ್ಲ. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆಯನ್ನು ಕಳೆದುಕೊಂಡ ನಾನು ಕಣ್ಣು ಬಿಟ್ಟಾಗ ಆಸ್ಪತ್ರೆಯ ಹಾಸಿಗೆಯಲ್ಲಿದ್ದೆ. ಯೋಧರ ತಂಡವೊಂದು ನನ್ನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿತ್ತು ಎನ್ನುವುದು ನನಗೆ ನಂತರ ತಿಳಿದುಬಂದಿತ್ತು.

ನನಗೆ ನಾಲ್ವರು ಅಣ್ಣಂದಿರಿದ್ದರೂ ನಾನೊಬ್ಬನೇ ಹೆತ್ತವರಿಗೆ ಆಶಾಕಿರಣವಾಗಿದ್ದೆ. ಅಣ್ಣಂದಿರಿಗೆಲ್ಲ ಮದುವೆಯಾಗಿದ್ದು, ಅವರ್ಯಾರೂ ಹೆತ್ತವರ ಪೋಷಣೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅವರ ಖರ್ಚಿಗೂ ಹಣ ಕೊಡುತ್ತಿರಲಿಲ್ಲ. ಬಾಲ್ಯದಿಂದಲೇ ನಾನೊಬ್ಬನೇ ಅವರಿಗಾಗಿ ದುಡಿಯುತ್ತಿದ್ದೆ.

ಕಾಲು ತುಂಡಾಗಿ ರೈಲ್ವೆ ಹಳಿಗಳ ಮೇಲೆ ಬಿದ್ದುಕೊಂಡಿದ್ದಾಗ ಮತ್ತು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗಲೂ ನಾನು ಈಗೇನು ಮಾಡಬೇಕು, ನನ್ನ ಮುದಿ ತಂದೆ-ತಾಯಿಯ ತುತ್ತಿನ ಚೀಲಗಳನ್ನು ಹೇಗೆ ತುಂಬಿಸಬೇಕು, ಅವರ ಎಲ್ಲ ಖರ್ಚುಗಳಿಗೆ ಹಣ ಹೊಂದಿಸುವುದು ಹೇಗೆ, ಈ ಸ್ಥಿತಿಯಲ್ಲಿ ನನಗೆ ಯಾರು ಕೆಲಸ ಕೊಡುತ್ತಾರೆ ಎಂಬ ಬಗ್ಗೆಯೇ ನಾನು ಚಿಂತಿಸುತ್ತಿದ್ದೆ.

  ಅಪಘಾತದ ಮೊದಲು ಬೋಟುಗಳಿಗೆ ಬಣ್ಣ ಬಳಿಯುವ ವೃತ್ತಿಯಲ್ಲಿದ್ದ ನಾನು ಚೆನ್ನಾಗಿ ದುಡಿಯುತ್ತಿದ್ದೆ ಮತ್ತು ಹೆಚ್ಚು ಹೆಚ್ಚು ಹಣವನ್ನು ಗಳಿಸುತ್ತಿದ್ದೆ. ಆಗ ನನ್ನಲ್ಲಿ ಹೆಚ್ಚು ಉತ್ಸಾಹವಿತ್ತು, ಸಾಮರ್ಥ್ಯವಿತ್ತು. ಪೇಂಟಿಂಗ್ ವೃತ್ತಿಯೊಂದೇ ಗೊತ್ತಿರುವ ನನಗೆ ಈಗ ಕೆಲಸ ಮಾಡುವುದೂ ಕಠಿಣವಾಗುತ್ತಿದೆ. ಎತ್ತರದ ಬೋಟುಗಳನ್ನು ಹತ್ತಲೂ ಸಾಧ್ಯವಾಗುತ್ತಿಲ್ಲ. ಒಂದು ಕಾಲಿನಿಂದ ಈ ವೃತ್ತಿಯನ್ನು ಮುಂದುವರಿಸುವುದು ನಿಜಕ್ಕೂ ಕಷ್ಟವಾಗುತ್ತಿದೆ. ಆ ಕಾಲಿನಲ್ಲಿ ತುಂಬ ನೋವು ಕಾಣಿಸಿಕೊಳ್ಳುತ್ತಿದೆ. ಒಂದೇ ಕಾಲಲ್ಲಿ ನಿಂತುಕೊಂಡು ಇಡೀ ದಿನ ಬಣ್ಣ ಬಳಿಯುವ ಕೆಲಸ ತುಂಬ ಕಷ್ಟವಾಗುತ್ತಿದೆ. ಹೀಗಾಗಿ ನನ್ನ ದುಡಿಮೆಯೂ ತುಂಬ ಕಡಿಮೆಯಾಗಿದೆ. ಭಿಕ್ಷುಕನಾಗುವಂತೆ ಬಹಳಷ್ಟು ಜನರು ನನಗೆ ಸಲಹೆ ನೀಡಿದ್ದರು. ಬಾಂಗ್ಲಾದೇಶದಲ್ಲಿ ಅಂಗವಿಕಲರಿಗೆ ಇದು ತುಂಬ ಸುಲಭವಾದ ಮತ್ತು ಹೆಚ್ಚು ಲಾಭದಾಯಕವಾದ ದಂಧೆಯಾಗಿದೆ. ಆದರೆ ಆ ಕೆಲಸವನ್ನು ಮಾಡಲು ನನ್ನ ಮನಸ್ಸೆಂದೂ ಒಪ್ಪುವುದಿಲ್ಲ. ಭಿಕ್ಷೆ ಬೇಡುವುದರಲ್ಲಿ ಯಾವುದೇ ಆತ್ಮಗೌರವವಿಲ್ಲ, ನಾನೆಂದೂ ಆ ಕೆಲಸವನ್ನು ಮಾಡಲಾರೆ.

ಆದರೆ ನನ್ನ ಕುಟುಂಬವನ್ನು ಪೋಷಿಸಲು ನಾನು ದುಡಿಯಲೇಬೇಕು, ಹೆಚ್ಚು ಹಣವನ್ನು ಗಳಿಸಲೇಬೇಕು. ನನ್ನ ಕುಟುಂಬಕ್ಕೆ ದಿನದ ಮೂರು ಹೊತ್ತಿನ ಕೂಳು ಸಿಕ್ಕಿದರೆ ಸಾಕು ಎನ್ನುವುದೊಂದೇ ನನ್ನ ಬಯಕೆ. ನಾನು ಕಾಲನ್ನು ಕಳೆದುಕೊಂಡೆ.....ಆದರೆ ಛಲವನ್ನಲ್ಲ.

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News