ಉಡುಪಿಯ ಧರ್ಮ ಸಂಸದ್ ಕೋಮುವಾದಿಗಳ ಸಮ್ಮೇಳನ: ಮಾವಳ್ಳಿ ಶಂಕರ್
ಬೆಂಗಳೂರು, ನ. 29: ‘ಧರ್ಮಸಂಸದ್’ನಲ್ಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ವಿರುದ್ಧ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ಪೇಜಾವರ ಶ್ರೀಯವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕೋಮುವಾದಿಗಳನ್ನು ಪ್ರಚೋದಿಸಿ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದು, ಜಾತ್ಯಾತೀತ ವ್ಯವಸ್ಥೆಯನ್ನು ಟೀಕಿಸಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಆಗ್ರಹಿಸುತ್ತಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಯನ್ನು ಬಂಧಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ವಿಚಾರವಾದಿ, ನಟ ಪ್ರೊ.ಜಿ.ಕೆ.ಗೋವಿಂದರಾವ್, ‘ಖಾವಿ ಹಾಕಿಕೊಂಡರೆ ಪೂರ್ಣ ಜ್ಞಾನಿ ಎಂದು ಸಂಭ್ರಮಿಸುವ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಓರ್ವ ಅಜ್ಞಾನಿ’ ಎಂದು ಟೀಕಿಸಿದರು.
‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯನ್ನು ಸರಿಯಾಗಿ ಓದದೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದು ತಪ್ಪು. ನಮ್ಮ ದೇಶಕ್ಕಿರುವುದು ಒಂದು ಧರ್ಮ ಅದು ‘ಪ್ರಜಾತಂತ್ರ’, ದೇಶಕ್ಕಿರುವುದು ಒಂದೇ ಧರ್ಮಗ್ರಂಥ ಅದು ‘ಸಂವಿಧಾನ’ ಎಂದು ಹೇಳಿದರು.
‘ಮೈಸೂರಿನಲ್ಲಿ ನಡೆಸಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ. ಚಂದ್ರಶೇಖರ್ ಪಾಟೀಲ(ಚಂಪಾ) ಅವರ ಭಾಷಣ ರಾಜಕೀಯ ಎನ್ನುವುದಾದರೆ, ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಸಮಾವೇಶದಲ್ಲಿ ಸಂಘ ಪರಿವಾರದ ಪರವಾಗಿ ಮಾತನಾಡಿದ ಪೇಜಾವರ ಶ್ರೀಗಳದ್ದು ರಾಜಕೀಯ ಭಾಷಣವಲ್ಲವೇ? ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವುದು ವಿಶ್ವೇಶ ತೀರ್ಥ ಸ್ವಾಮೀಜಿಯವರ ಹುನ್ನಾರ ಎಂದು ಆರೋಪಿಸಿದ ಗೋವಿಂದರಾವ್, ಕಾನೂನಿಗೆ ವಿರುದ್ಧವಾಗಿ ಮನೆಗಳಲ್ಲಿ ಆಯುಧಗಳನ್ನಿಟ್ಟುಕೊಳ್ಳಬೇಕೆಂದು ಹೇಳುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಗೋ.ಮಧುಸೂದನ್ ಹೇಳಿಕೆ ಬಳಿಕ ಪೇಜಾವರ ಶ್ರೀಯವರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಎಂಬುದು ವಾಸ್ತವದಲ್ಲಿ ‘ಕೋಮುವಾದಿಗಳ ಸಮ್ಮೇಳನ’ ಎಂದು ವ್ಯಂಗ್ಯವಾಡಿದರು.
ದಸಂಸ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಮಾತನಾಡಿ, ‘ನಾವೆಲ್ಲ ಹಿಂದೂಗಳು ನಾವೆಲ್ಲ ಒಂದು ಎಂದು ಹೇಳುವ ಪೇಜಾವರ ಶ್ರೀಯವರು, ಅಸ್ಪೃಶ್ಯತೆ ನಿವಾರಣೆಯಾಗಬೇಕೆಂದು ಹೇಳುತ್ತಾರೆ. ಮತ್ತೊಂದು ಕಡೆ ಅಂಬೇಡ್ಕರ್ ಬರೆದ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎನ್ನುತ್ತಾರೆ. ಶ್ರೀಗಳ ದ್ವಂದ್ವ ಮತ್ತು ಢೋಂಗಿ ಮಾತುಗಳನ್ನು ಕೂಡಲೇ ನಿಲ್ಲಿಸಬೇಕು’ ಎಂದು ತಾಕೀತು ಮಾಡಿದರು.
ಅಸ್ಪೃಶ್ಯರ ಬಗ್ಗೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಯವರಿಗೆ ಕಳಕಳಿ ಇದ್ದರೆ ಉಡುಪಿಯ ಅಷ್ಟ ಮಠಗಳಿಗೆ ಅಸ್ಪೃಶ್ಯರನ್ನು ಮಠಾಧಿಪತಿಯನ್ನಾಗಿ ನೇಮಿಸಿ. ಅದು ಬಿಟ್ಟು, ಹೋದಲ್ಲಿ-ಬಂದಲ್ಲಿ ಅಸ್ಪೃಶ್ಯತೆ ನಿವಾರಣೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಮಾತುಗಳನ್ನು ಆಡುವ ಪೇಜಾವರ ಶ್ರೀಯವರು, ದೇಶದ ಬಹುಸಂಸ್ಕೃತಿ ಮತ್ತು ಜಾತಿಗಳನ್ನು ವಿಭಜಿಸುವ ಮೂಲಕ ಹಿಂದುತ್ವ ಪ್ರತಿಪಾದಿಸುವ ಸಂವಿಧಾನ ವಿರೋಧಿ ಹೇಳಿಕೆ ಸಲ್ಲ ಎಂದು ಅವರು ಆಕ್ಷೇಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅಣ್ಣಯ್ಯ, ಚನ್ನಕೃಷ್ಣಪ್ಪ, ಪ್ರೊ.ನರಸಿಂಹಯ್ಯ, ವಿ.ನಾಗರಾಜ್, ಎನ್.ಮೂರ್ತಿ, ಸಿದ್ದಲಿಂಗಯ್ಯ, ಅನಂತನಾಯ್ಕೊ, ಜೀವನಹಳ್ಳಿ ವೆಂಕಟೇಶ್, ಕ್ಯಾಲಸನಹಳ್ಳಿ ಶ್ರೀನಿವಾಸ್, ಕಮಲಾ, ಸಿದ್ದಾಪುರ ಮಂಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.