ವೃದ್ಧ ದಂಪತಿಗಳ ಹತ್ಯೆ ಪ್ರಕರಣ: ಮೊಮ್ಮಗ ಸೇರಿ ಮೂವರ ಬಂಧನ
ಬೆಂಗಳೂರು, ನ.29: ಅಶ್ವತ್ಥನಗರ ವ್ಯಾಪ್ತಿಯಲ್ಲಿ ನಡೆದಿದ್ದ ದಂಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಮ್ಮಗ ಸೇರಿ ಮೂವರನ್ನು ಬಂಧಿಸುವಲ್ಲಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ದಂಪತಿಯ ಮೊಮ್ಮಗ ಪ್ರಮೋದ್, ಆತನ ಸ್ನೇಹಿತರಾದ ಪ್ರವೀಣ್, ಹಸನ್ ಪಾಷಾ ಬಂಧಿತ ಆರೋಪಿಗಳು ಎಂದು ವೈಟ್‌ಫೀಲ್ಡ್ ಉಪವಿಭಾಗದ ಡಿಸಿಪಿ ಅಬ್ದುಲ್ ಅಹದ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನಲೆ: ನ.26ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಎಚ್‌ಎಎಲ್ ಸಮೀಪದ ಅಶ್ವತ್ಥನಗರ ವ್ಯಾಪ್ತಿಯಲ್ಲಿ ದಂಪತಿಗಳಾದ ಸರೋಜಾ(60) ಹಾಗೂ ಗೋವಿಂದನ್(65) ಎಂಬವರನ್ನು ಮನೆಯ ಗ್ಯಾಸ್ ಲೀಕ್ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಮಂಗಳವಾರ(ನ.28) ಸಂಜೆ ಪ್ರಕರಣ ಬೆಳಕಿಗೆ ಬಂದು, ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದವು.
ಈ ಪ್ರಕರಣದ ತನಿಖೆಗೆ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿತ್ತು. ಮೊಮ್ಮಗ ಪ್ರಮೋದ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕೆಲವು ಮಾಹಿತಿಗಳು ಬೆಳಕಿಗೆ ಬಂದಿದ್ದವು. ಬಳಿಕ ಮಾರತ್ತಹಳ್ಳಿ ಪೊಲೀಸರು ಈತನ ಸ್ನೇಹಿತ ಪ್ರವೀಣ್‌ನನ್ನು ತೀವ್ರ ವಿಚಾರಣೆ ನಡೆಸಿದಾಗ ಮತ್ತೊಬ್ಬ ಪ್ರಮುಖ ಆರೋಪಿ ಹಸನ್ ಪಾಷಾ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಹೊರಬಂದಿತ್ತು.
ಗುಂಡು ಹಾರಿಸಿ ಬಂಧನ: ಆರೋಪಿ ಹಸನ್‌ಪಾಷಾ ಏರ್‌ಪೋರ್ಟ್ ಕಾಂಪೌಂಡ್ ಬಳಿ ಇರುವುದಾಗಿ ಮಾಹಿತಿ ತಿಳಿದ ತನಿಖಾಧಿಕಾರಿಗಳು ಆತನನ್ನು ವಶಕ್ಕೆ ಪಡೆಯಲು ಹೋದಾಗ ಹಸನ್ ಪಾಷಾ ಪೇದೆ ರವಿ ಎಂಬುವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ. ಆ ವೇಳೆ ಆತ್ಮ ರಕ್ಷಣೆಗಾಗಿ ಎಸ್ಸೈ ಪ್ರಶೀಲಾ ಅವರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಹಸನ್ ಪಾಷಾ ಕಾಲಿಗೆ ಗುಂಡು ಬಿದ್ದು, ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡ ಪೊಲೀಸ್ ಪೇದೆ ರವಿ ಅವರಿಗೂ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.