ಕನ್ನಡ ಧ್ವಜದ ಬಗ್ಗೆ ಆತುರದ ನಿರ್ಧಾರ ಬೇಡ: ಅಚ್ಚಪ್ಪ ಮನವಿ
ಬೆಂಗಳೂರು, ನ.29: ಸರಕಾರ ಕನ್ನಡ ಧ್ವಜದ ವಿಚಾರದಲ್ಲಿ ಎದ್ದಿರುವ ಗೊಂದಲದ ವಿಚಾರವಾಗಿ ಆತುರದ ನಿರ್ಧಾರ ಕೈಗೊಳ್ಳಲು ಮುಂದಾಗಬಾರದು. ಎಲ್ಲ ಆಯಾಮಗಳಲ್ಲಿ ಚಿಂತನೆ ಮಾಡಿ ಧ್ವಜ ರೂಪಿಸಬೇಕು ಎಂದು ಕನ್ನಡಪರ ಹೋರಾಟಗಾರ ಬಿ.ಎನ್.ಅಚ್ಚಪ್ಪ ಮನವಿ ಮಾಡಿದ್ದಾರೆ.
ರಾಜ್ಯ ಸರಕಾರ ಅನುಷ್ಠಾನ ಮಾಡಲು ಮುಂದಾಗಿರುವ ಧ್ವಜ ಭಾಷೆಯ ಆಧಾರದ ಮೇಲೆಯೋ ಅಥವಾ ರಾಜ್ಯದ ಧ್ವಜದ ಮೇಲೆಯೋ ತಿಳಿಯುತ್ತಿಲ್ಲ. ಪ್ರಪಂಚದಲ್ಲಿ ಇದುವರೆಗೂ ಯಾರು ಒಂದು ಭಾಷೆಯ ಆಧಾರದ ಮೇಲೆ ಧ್ವಜ ಮಾಡಿದ ಉದಾಹರಣೆಗಳಿಲ್ಲ. 1957 ರಿಂದ ಇದುವರೆಗೂ ಮೂರು ಧ್ವಜಗಳು ಕನ್ನಡ ಚಳವಳಿಗಾರರಿಂದ ರೂಪಗೊಂಡು ರಾಜ್ಯಾದ್ಯಂತ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಲವಾರು ಜನರು ಧ್ವಜವನ್ನು ರೂಪಿಸಿದ್ದಾರೆ. ಬಿ.ಶಿವಮೂರ್ತಿ ಬಿಳಿ ಬಣ್ಣದ ಧ್ವಜ ಕಾರ್ಯರೂಪಕ್ಕೆ ತಂದರು. ಅನಂತರ ವಾಟಾಳ್ ನಾಗರಾಜ್ ಬಿ.ಶಿವಮೂರ್ತಿ ಸಲಹೆಯಂತೆ ಹಳದಿ ಬಣ್ಣದಲ್ಲಿ ಏಳು ಗೆರೆಗಳುಳ್ಳ ಧ್ವಜವನ್ನು ನಿರ್ಮಾಣ ಮಾಡಲಾಯಿತು. ಅದನ್ನು 1964-65 ರಲ್ಲಿ ನಗರದ ವಾಣಿಜ್ಯ ಭವನದಲ್ಲಿ ಮಾಜಿ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಇದೇ ಭಾವುಟವನ್ನು ಉದ್ಘಾಟಿಸಿದ್ದರು. ಅಲ್ಲದೆ, ಇದು ನಮ್ಮ ರಾಜ್ಯದ ಮೊಟ್ಟ ಮೊದಲ ಧ್ವಜ ಎಂದು ಬಿಂಬಿತವಾಗಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ, ಸರಕಾರ ಆತುರ ನಿರ್ಧಾರ ಕೈಗೊಳ್ಳುವುದರ ಬದಲಿಗೆ, ಯೋಚನೆ ಮಾಡಿ, ಎಲ್ಲವನ್ನೂ ಸಮಗ್ರವಾಗಿ ಅರ್ಥ ಮಾಡಿಕೊಂಡು ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.