ಎರಡು ತಲೆ ಹಾವು ಮಾರಾಟ ದಂಧೆ: ನಾಲ್ವರ ಬಂಧನ
ಬೆಂಗಳೂರು, ನ.29: ಆಂಧ್ರಪ್ರದೇಶದ ಚಿತ್ತೂರು ಕಾಡಿನಿಂದ ಹಾವನ್ನು ತಂದು ಎರಡು ತಲೆಯ ಹಾವು ಎಂದು ಹೇಳಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಇಲ್ಲಿನ ಚಿಕ್ಕಜಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಚರ್ಚ್‌ಸ್ಟ್ರೀಟ್‌ನ ಪ್ರಶಾಂತ್ ನಗರದ ಶ್ರೀನಿವಾಸ್(38), ಬನಶಂಕರಿ ಮೂರನೇ ಹಂತದ ಹೇಮಂತ್(38) ಬಂಧಿತ ಆರೋಪಿಗಳಾಗಿದ್ದು, ಈ ಹಾವನ್ನು ಪಡೆಯಲು ಬಂದಿದ್ದ ಹೊಸಕೋಟೆಯ ಅಲೆಗ್ಸಾಂಡರ್, ಮಹೇಶ್ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಾದ ಶ್ರೀನಿವಾಸ್ ಹಾಗೂ ಹೇಮಂತ್, ಹಾವನ್ನು ಲಗೇಜ್ ಬ್ಯಾಗ್‌ನಲ್ಲಿ ತೆಗೆದುಕೊಂಡು ಬಂದು ಇದನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟವೆಂದು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಂದ ವಶಪಡಿಸಿಕೊಂಡ ಹಾವನ್ನು, ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.