×
Ad

ವಿಕಲಚೇತನರ ಭತ್ತೆ ಹೆಚ್ಚಿಸಲು ಒತ್ತಾಯಿಸಿ ಧರಣಿ

Update: 2017-11-29 19:26 IST

ಬೆಂಗಳೂರು, ನ.29: ವಿಕಲಚೇತನರ ಮಾಶಾಸನ(ಮಾಸಿಕ ಭತ್ತೆ) ಮೊತ್ತ ಹೆಚ್ಚಿಸಬೇಕು ಹಾಗೂ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016 ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಹಕ್ಕುಗಳ ಒಕ್ಕೂಟ ಆಗ್ರಹಿಸಿದೆ.

ಬುಧವಾರ ನಗರದ ಪುರಭವನದ ಎದುರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಹಕ್ಕುಗಳ ಒಕ್ಕೂಟದ ಸದಸ್ಯರು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ್, ಶೇ.40ರಿಂದ ಶೇ.74ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಮಾಸಿಕ 3 ಸಾವಿರ ರೂ.ಗಳು ಹಾಗೂ ಶೇ.75ಕ್ಕಿಂತ ಮೇಲ್ಪಟ್ಟ ವಿಕಲಚೇತನರಿಗೆ ಮಾಸಿಕ 5 ಸಾವಿರ ರೂ.ಗಳ ಮಾಶಾಸನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಸರಕಾರ ಶೇ.40ರಿಂದ ಶೇ.74ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಮಾಸಿಕ 500 ರೂ.ಗಳು ಹಾಗೂ ಶೇ.75ಕ್ಕಿಂತ ಮೇಲ್ಪಟ್ಟ ವಿಕಲಚೇತನರಿಗೆ ಮಾಸಿಕ 1,200 ರೂ.ಗಳ ಭತ್ತೆ ನೀಡುತ್ತಿದೆ. ಇದು ಇಂದಿನ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ತುಂಬಾ ಕಡಿಮೆ ಮೊತ್ತದ ಮಾಸಿಕ ಭತ್ತೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ವಿಕಲಚೇತನರ ಮಾಸಿಕ ಭತ್ತೆಯನ್ನು 3 ಸಾವಿರ ರೂ.ಗಳಿಗೆ ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ. ಸರಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳಾದರೂ ಆ ಭರವಸೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News