ತರಕಾರಿ-ಮೊಟ್ಟೆಗೆ ಮುಂಗಡವಾಗಿ ಹಣ ನೀಡಲು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ
ಬೆಂಗಳೂರು, ನ.29: ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ, ಬಡಿಸಲು ಬೇಕಾದ ಪರಿಕರಗಳನ್ನು ಕೊಳ್ಳಲು ಮುಂಗಡವಾಗಿ ಹಣ ನೀಡುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದ (ಎಐಟಿಯುಸಿ) ಸದಸ್ಯರು ನಗರದ ಸ್ವಾತಂತ್ರ ಉದ್ಯಾನದಲ್ಲಿ ಬುಧವಾರ ಧರಣಿ ನಡೆಸಿದರು.
ಈ ವೇಳೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಮಾತನಾಡಿ, ಸರಕಾರ ಅಕ್ಟೋಬರ್ 2 ರಿಂದ ಯೋಜನೆ ಜಾರಿ ಮಾಡಿದೆ. ಆದರೆ, ತರಕಾರಿ, ಮೊಟ್ಟೆಗಳನ್ನು ಖರೀದಿಸಲು ಮುಂಗಡವಾಗಿ ಹಣ ನೀಡುತ್ತಿಲ್ಲ. ಹಾಗಾಗಿ ಕಾರ್ಯಕರ್ತೆಯರೆ ಸ್ವಂತ ಹಣವನ್ನು ವ್ಯಯಿಸಿ ಅಡುಗೆ ತಯಾರಿಸುತ್ತಿದ್ದಾರೆ. ಖರ್ಚು ಮಾಡಿದ ಹಣವನ್ನು ಪಡೆಯಲು ಸರಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ ಎಂದು ತಿಳಿಸಿದರು.
ಇನ್ನೂ ಕೆಲವು ಅಂಗನವಾಡಿಗಳಿಗೆ ಅಡುಗೆ ತಯಾರಿಸಲು ಬೇಕಾದ ಪಾತ್ರೆಗಳು, ಕುಕ್ಕರ್ ಮತ್ತು ಅಡುಗೆ ಅನಿಲದ ಸಿಲಿಂಡರ್ ಸರಬರಾಜು ಮಾಡಿಲ್ಲ. ಇದಲ್ಲದೆ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ದೂರಿದರು.
ಪಂಚಾಯತ್ ಮಟ್ಟದಲ್ಲಿ ಬಾಲವಿಕಾಸ ಸಮಿತಿ ರಚಿಸಲಾಗಿದ್ದು, ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹೆಸರಲ್ಲಿ ಜಂಟಿಖಾತೆ ತೆರೆಯಲಾಗಿದೆ. ಆ ಮೂಲಕ ತರಕಾರಿ ಮತ್ತು ಮೊಟ್ಟೆಗೆ ಖರ್ಚು ಮಾಡಿದ ಮೊತ್ತವನ್ನು ಮರುಪಾವತಿಸಲು ಯೋಜಿಸಲಾಗಿದೆ. ಜಂಟಿಖಾತೆ ತೆಗೆದಾಗ ಜನಪ್ರತಿನಿಧಿಗಳ ಮರ್ಜಿಗೆ ಮಣಿದು ನಾವು ಕೆಲಸ ಮಾಡಬೇಕು. ಹಣಕ್ಕಾಗಿ ಅವರ ಕಚೇರಿ, ಮನೆಗಳಿಗೆ ಅಲೆಯುತ್ತಿದ್ದೇವೆ. ಇದನ್ನು ರದ್ದುಪಡಿಸಬೇಕು. ಕಾರ್ಯಕರ್ತೆಯರ ಹೆಸರಿನ ಖಾತೆಗೆ ಮೊತ್ತವನ್ನು ನೇರವಾಗಿ ವರ್ಗಾಹಿಸಬೇಕು ಎಂದು ಅವರು ಒತ್ತಾಯಿಸಿದರು.
ಸಿಬ್ಬಂದಿ ನಿವೃತ್ತಿಯಾದ ಬಳಿಕ ನೀಡುವ ಇಡುಗಂಟು ಅಥವಾ ಎನ್‌ಪಿಎಸ್ ಹಣವನ್ನು ಸಕಾಲಕ್ಕೆ ಕೊಡಬೇಕು. ತುಟ್ಟಿಭತ್ತೆ ಮತ್ತು ಪ್ರಭಾರ ಭತ್ತೆಗಳನ್ನು ಹೆಚ್ಚಿಸಬೇಕು. ಕಾಯಿಲೆ ಬಿದ್ದಾಗ ಸಂಬಳ ಸಹಿತ ರಜೆ ನೀಡಬೇಕು. ಗುಣಮಟ್ಟದ ಸಮವಸ್ತ್ರಗಳನ್ನು ವಿತರಿಸಬೇಕು ಎಂದು ಬೇಡಿಕೆಗಳನ್ನು ಮಂಡಿಸಿದರು.
ಒಕ್ಕೂಟದ ಕಾರ್ಯದರ್ಶಿ ಎನ್.ಶಿವಣ್ಣ, ಮಾತೃಪೂರ್ಣ ಯೋಜನೆ ಅನುಷ್ಠಾನಕ್ಕಾಗಿ ಕಾರ್ಯಕರ್ತೆಯರಿಗೆ 500 ರೂ. ಸಹಾಯಕಿಯರಿಗೆ 250 ರೂ. ಗೌರವಧನ ಹೆಚ್ಚಿಸುವ ಪ್ರಸ್ತಾವನೆಯನ್ನು ಪರಿಶೀಲಿಸಬೇಕು ಎಂದರು.
ಧರಣಿ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾಮಹಾದೇವನ್ ಹಾಗೂ ನಿರ್ದೇಶಕಿ ದೀಪಾಚೋಳನ್ ಭೇಟಿ ನೀಡಿ ಒತ್ತಾಯಗಳ ಮನವಿ ಪತ್ರ ಸ್ವೀಕರಿಸಿದರು. ಬೇಡಿಕೆಗಳ ಕುರಿತು ಮಾತುಕತೆ ನಡೆಸಲು ಡಿ.4 (ಸೋಮವಾರ)ರಂದು ಅಧಿಕಾರಿಗಳು ನಡೆಸುವ ಸಭೆಯಲ್ಲಿ ಭಾಗವಹಿಸುವಂತೆ ಒಕ್ಕೂಟದ ಕಾರ್ಯದರ್ಶಿಗಳಿಗೆ ಆಹ್ವಾನ ನೀಡಿದರು.
ಒತ್ತಾಯಗಳು: ಅಂಗನವಾಡಿಗಳಲ್ಲಿ ಖಾಲಿ ಇರುವ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸ್ಥಾನಗಳು ಆದಷ್ಟು ಬೇಗ ತುಂಬಬೇಕು. ಆರೋಗ್ಯ ಸುರಕ್ಷಾ ಯೋಜನೆಯಡಿ ಯಾವ ಆಸ್ಪತ್ರೆಗಳಲ್ಲಿ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಬೇಕು. ಸಿಬ್ಬಂದಿ ಮೃತಪಟ್ಟಾಗ ಸಿಗುವ 50 ಸಾವಿರ ರೂ. ಪರಿಹಾರ ಮೊತ್ತವನ್ನು ಅವರ ಕುಟುಂಬದ ಸದಸ್ಯರಿಗೆ ಆದಷ್ಟು ಬೇಗ ಸಿಗುವಂತಾಗಬೇಕು.