×
Ad

ರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಿ ಏಕಪಕ್ಷೀಯ ತೀರ್ಮಾನ: ದಿನೇಶ್‌ ಗುಂಡೂರಾವ್ ವಾಗ್ದಾಳಿ

Update: 2017-11-29 20:05 IST

ಬೆಂಗಳೂರು, ನ.29: ದೇಶದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರಮೋದಿಯವರು ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದು, ಯುಪಿಎ ಸರಕಾರದ ಅವಧಿಯಲ್ಲಿ ರಫಾಯಲ್ ಏರ್‌ಕ್ರಾಫ್ಟ್ ಖರೀದಿಗೆ ಸಂಬಂಧಿಸಿದಂತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸಿರುವುದಾಗಿ ಫ್ರಾನ್ಸ್‌ನಲ್ಲಿ ಘೋಷಣೆ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರವು 3-4 ವರ್ಷ ಎಲ್ಲ ಸಾಧಕ ಬಾಧಕಗಳ ಕುರಿತು ಪರಾಮರ್ಶಿಸಿದ ಬಳಿಕವೇ ರಫಾಯಲ್ ಏರ್‌ಕ್ರಾಫ್ಟ್ ಖರೀದಿಗೆ ಸಂಬಂಧಿಸಿದಂತೆ 2012ರಲ್ಲಿ ಒಡಂಬಡಿಕೆ ಮಾಡಿಕೊಂಡಿತ್ತು. 18 ಏರ್‌ಕ್ರಾಫ್ಟ್‌ಗಳನ್ನು ನೇರವಾಗಿ ಖರೀದಿಸುವುದು ಹಾಗೂ 108 ಏರ್‌ಕ್ರಾಫ್ಟ್ ಗಳನ್ನು ತಂತ್ರಜ್ಞಾನ ವಿನಿಮಯದೊಂದಿಗೆ ಎಚ್‌ಎಎಲ್‌ನಲ್ಲಿ ಉತ್ಪಾದನೆ ಮಾಡಲು ಸುಮಾರು 56 ಸಾವಿರ ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಆದರೆ, 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರಕಾರ ಯಾವುದೇ ಕಾರಣ ನೀಡದೆ ಒಪ್ಪಂದವನ್ನು ರದ್ದುಪಡಿಸಿರುವುದೇಕೆ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರಮೋದಿಯವರು ಫ್ರಾನ್ಸ್‌ಗೆ ತೆರಳುವಾಗ ಅವರೊಂದಿಗೆ ರಿಲಯನ್ಸ್ ಸಂಸ್ಥೆಯ ಅನಿಲ್ ಅಂಬಾನಿ ಜತೆಗಿದ್ದರು. ರಫಾಯಲ್ ಏರ್‌ಕ್ರಾಫ್ಟ್ ಖರೀದಿ ಒಪ್ಪಂದ ರದ್ದುಪಡಿಸುತ್ತಿರುವ ಘೋಷಣೆ ಹೊರಬೀಳುವ ಎರಡು ತಿಂಗಳ ಮುಂಚೆಯಷ್ಟೇ ಅನಿಲ್ ಅಂಬಾನಿ ವಾಯುಯಾನ ಕಂಪೆನಿಯನ್ನು ಆರಂಭಿಸಿದ್ದಾರೆ ಎಂದು ಹೇಳಿದರು.

ದೇಶದ ಪ್ರತಿಷ್ಠಿತ ಎಚ್‌ಎಎಲ್ ಸಂಸ್ಥೆಗೆ ಅವಕಾಶವನ್ನು ತಪ್ಪಿಸಿ ಯಾವುದೇ ಅನುಭವ ಇಲ್ಲದ ಅನಿಲ್ ಅಂಬಾನಿ ಕಂಪೆನಿಯಿಂದ 36 ಏರ್‌ಕ್ರಾಫ್ಟ್‌ಗಳನ್ನು ನೇರವಾಗಿ ಖರೀದಿಸಲು ಹಸಿರು ನಿಶಾನೆ ತೋರಿರುವುದು ಎಷ್ಟರಮಟ್ಟಿಗೆ ಸರಿ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಉನ್ನತಮಟ್ಟದಲ್ಲಿ ಯಾವುದೇ ಚರ್ಚೆಗಳನ್ನು ನಡೆಸದೆ ಏಕಪಕ್ಷೀಯ ತೀರ್ಮಾನಗಳನ್ನು ಪ್ರಧಾನಿ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಾನೂನು ವ್ಯಾಜ್ಯ ಹೊರತುಪಡಿಸಿ ಅನಿಲ್‌ಅಂಬಾನಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿರುವ ಅಂಶಗಳನ್ನು ಬಹಿರಂಗಗೊಳಿಸುವ ಅವಶ್ಯಕತೆ ಇಲ್ಲ ಎಂಬ ಶರತ್ತು ವಿಧಿಸಿಕೊಂಡಿದ್ದಾರೆ. ಈ ನಡೆಯನ್ನು ಗಮನಿಸಿದರೆ ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

'ಮೇಕ್ ಇನ್ ಇಂಡಿಯಾ' ಎಂದು ಪ್ರತಿಪಾದಿಸುವ ಪ್ರಧಾನಿ ನರೇಂದ್ರಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಒಪ್ಪಂದವನ್ನು ರದ್ದು ಮಾಡುವ ಮೂಲಕ ನಮ್ಮ ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ತಪ್ಪಿಸಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ಯಡಿಯೂರಪ್ಪ, ಕೇಂದ್ರ ಸಚಿವರು, ರಾಜ್ಯಸಭಾ ಸದಸ್ಯ ರಾಜೀವ್‌ಚಂದ್ರಶೇಖರ್ ಯಾಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಬಿಎಸ್‌ವೈ-ಶೋಭಾ ಕ್ಷಮೆಯಾಚನೆಗೆ ಆಗ್ರಹ: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಿಜೆಪಿ ಕಚೇರಿಯಲ್ಲಿ ಕಸ ಹಾಕುವ ಜಾಗದಲ್ಲಿಟ್ಟು ಅವಮಾನ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲೇ ಬಿಜೆಪಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಿ. ಬಿಜೆಪಿಯವರು ಢೋಂಗಿಗಳು, ಹೇಳುವುದು ಒಂದು, ಮಾಡುವುದು ಮತ್ತೊಂದು. ಕಾಂಗ್ರೆಸ್ ಸರಕಾರ ಅಂಬೇಡ್ಕರ್‌ರನ್ನು ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿತು. ಒಂದು ವೇಳೆ ಆಗ ಬಿಜೆಪಿ ಅಥವಾ ಜನಸಂಘ ಅಧಿಕಾರದಲ್ಲಿ ಇದ್ದಿದ್ದರೆ ಅವರಪ್ಪನಾಣೆ ಅಂಬೇಡ್ಕರ್‌ಗೆ ಆ ಜವಾಬ್ದಾರಿ ಸಿಗುತ್ತಿರಲಿಲ್ಲ ಎಂದರು.

ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್‌ ಹೆಸರನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನಾವು ಎಸ್ಸಿ-ಎಸ್ಟಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಅನುದಾನ ಒದಗಿಸಿದ್ದೇವೆ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭಿಸಿದ್ದೇವೆ. ಗುತ್ತಿಗೆಯಲ್ಲೂ ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ನೀಡುವ ಕಾನೂನು ಜಾರಿಗೆ ತಂದಿದ್ದೇವೆ ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.

'ಅನಂತ್‌ಕುಮಾರ್ ಹೆಗಡೆ ದ್ವೇಷ ಹುಟ್ಟಿಸುವ ಯಂತ್ರ'
ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆಗೆ ಸಂಸ್ಕೃತಿ ಇಲ್ಲ. ಅವರೊಬ್ಬ ದ್ವೇಷ ಹುಟ್ಟಿಸುವ ಯಂತ್ರದಂತಾಗಿದ್ದಾರೆ. ಕೌಶಲ ಅಭಿವೃದ್ಧಿ ಸಚಿವರಾಗಿರುವ ಅವರು, ಸ್ವಲ್ಪ ಸಂಸ್ಕೃತಿಯನ್ನು ಕಲಿಯುವುದು ಅಗತ್ಯ. ಯಡಿಯೂರಪ್ಪ ಕೇವಲ ನಾಮಕಾವಸ್ತೆ, ಬಿಜೆಪಿ ಪಾಲಿಗೆ ಅನಂತ್‌ಕುಮಾರ್ ಹೆಗಡೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.

-ದಿನೇಶ್‌ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News