ಬೆಂಗಳೂರಿನ ಆಸ್ಪತ್ರೆ, ಬಿಲ್ಡರ್ ಕಂಪೆನಿಗಳ ಮೇಲೆ ಐಟಿ ದಾಳಿ
ಬೆಂಗಳೂರು, ನ.29: ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಬೆಂಗಳೂರಿನ ವೈದ್ಯೆ ಡಾ.ಕಾಮಿನಿ ರಾವ್ ಅವರ ಮನೆ ಹಾಗೂ ಅವರ ಒಡೆತನದ ಆಸ್ಪತ್ರೆ, ಕೆಲ ಬಿಲ್ಡರ್‌ಗಳು ಸೇರಿದಂತೆ 20ಕ್ಕೂ ಅಧಿಕ ಸ್ಥಳಗಳಲ್ಲಿ ದಿಢೀರ್ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.
ಬುಧವಾರ ಬೆಳ್ಳಂಬೆಳಗ್ಗೆ ನೂರಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಇಲ್ಲಿನ ಶಿವಾನಂದ ವೃತ್ತದಲ್ಲಿನ ಡಾ.ಕಾಮಿನಿ ರಾವ್ ಒಡೆತನದ ಮಿಲನ್ ಆಸ್ಪತ್ರೆ, ಐವಿಎಫ್ ಕ್ಲಿನಿಕ್ಸ್, ಡಯಾಗ್ನೆಸ್ಟಿಕ್ ಸೆಂಟರ್‌ಗಳು ಹಾಗೂ ಔಷಧಿ ವಿತರಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಕೇಂದ್ರ ಸರಕಾರ 500 ರೂ.ಮತ್ತು 1 ಸಾವಿರ ರೂ.ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಿದ ಬಳಿಕ ಮೇಲ್ಕಂಡ ಆಸ್ಪತ್ರೆ, ಕ್ಲಿನಿಕ್‌ಗಳು, ಬಿಲ್ಡರ್ಸ್‌ಗಳು ದೊಡ್ಡ ಮೊತ್ತ ಹಣಕಾಸಿನ ವಹಿವಾಟು ನಡೆಸಿದ ಮಾಹಿತಿ ಸಂಗ್ರಹಿಸಿದ್ದ ಐಟಿ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.
ಸುಮಾರು 800 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಹಿವಾಟು ನಡೆಸಿರುವ ಸಾಧ್ಯತೆಗಳಿದ್ದು, ಈ ಸಂಬಂಧ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿರುವ ಐಟಿ ಅಧಿಕಾರಿಗಳು ತಡರಾತ್ರಿಯ ವರೆಗೂ ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಪತ್ತೆಯಾದ ನಗದು, ದಾಖಲೆ ಪತ್ರಗಳಿಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಕೆಲ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗಿದೆ.