×
Ad

ಮಂಗಳೂರು ಜಿಪಂ ಪ್ರ.ಕಾರ್ಯದರ್ಶಿಗೆ ಖುದ್ದು ಹಾಜರಾಗಲು ಹೈಕೋರ್ಟ್ ಆದೇಶ

Update: 2017-11-29 20:33 IST

ಬೆಂಗಳೂರು, ನ.29: ಮಂಗಳೂರು ತಾಲೂಕಿನ ಬೆಳ್ಮ ಗ್ರಾಮದಲ್ಲಿ ವಸತಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲು ನಿರಾಕರಿಸಿರುವ ಬಗ್ಗೆ ವರದಿ ನೀಡಲು ಸೂಚಿಸಿದ ಕ್ರಮವನ್ನು ಪಾಲಿಸದ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾ ಪಂಚಾಯತ್ ಪ್ರಧಾನ ಕಾರ್ಯದರ್ಶಿಗೆ ಡಿ.13ರಂದು ಖುದ್ದು ಹಾಜರಾಗಲು ಹೈಕೋರ್ಟ್ ಆದೇಶಿಸಿದೆ.

ತಮಗೆ ವಸತಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಮಾಡದ ಬೆಳ್ಮ ಗ್ರಾಪಂ ಕ್ರಮ ಪ್ರಶ್ನಿಸಿ ಹೇಮಂತ್ ಶೆಟ್ಟಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೋಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿತು.

ತಾವೇ ಕಾನೂನು ಎಂಬುದಾಗಿ ಚುನಾಯತಿ ಪ್ರತಿನಿಧಿಗಳು ಭಾವಿಸಬಾರದು, ಹೇಮಂತ್ ಶೆಟ್ಟಿಗೆ ನಕ್ಷೆ ಮಂಜೂರಾತಿ ಮಾಡಬಾರದೆಂದು ನಿರ್ಣಯ ಕೈಗೊಂಡಿದ್ದ ಬೆಳ್ಮ ಗ್ರಾಪಂ ಸದಸ್ಯರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬುದರ ಕುರಿತು ವರದಿ ಸಲ್ಲಿಸುವಂತೆ ನ.22ರಂದು ನ್ಯಾಯಪೀಠವು ಸೂಚನೆ ನೀಡಿತ್ತು. ಆದರೂ ನ.29ರ ಮಂಗಳವಾರ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಮಂಗಳೂರು ಜಿಪಂ ಪ್ರಧಾನ ಕಾರ್ಯದರ್ಶಿಗೆ ಡಿ.13ರಂದು ಖುದ್ದು ಹಾಜರಾಗಲು ಖಡಕ್ ಎಚ್ಚರಿಕೆ ನೀಡಿತು.

ನಕ್ಷೆ ಮಂಜೂರಾತಿಗೆ ಶೆಟ್ಟಿ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಬೆಳ್ಮ ಗ್ರಾಪಂ ಸದಸ್ಯರು ನಿಮಗೆ ನಕ್ಷೆ ಮಂಜೂರಾತಿ ನೀಡದಿರಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದ್ದಾರೆ. ಇದರಿಂದ ನಿಮಗೆ ನಕ್ಷೆ ಮಂಜೂರಾತಿ ನೀಡಲಾಗದು ಎಂದು ತಿಳಿಸಿದ್ದ ಪಿಡಿಒ ಶೆಟ್ಟಿಗೆ ಹಿಂಬರಹ ನೀಡಿದ್ದರು. ತದನಂತರ ಮಂಗಳೂರು ತಾಲೂಕು ಪಂಚಾಯತ್ ಕಾರ್ಯಕಾರಿ ಅಧಿಕಾರಿಯು ಹೇಮಂತ್ ಕುಮಾರ್ ಸಲ್ಲಿಸಿದ ಎಲ್ಲ ದಾಖಲೆ ಸಮರ್ಪಕವಾಗಿದ್ದು, ಕಾನೂನು ಪ್ರಕಾರ ಅವರಿಗೆ ಎರಡು ವಾರದಲ್ಲಿ ನಕ್ಷೆ ಮಂಜೂರಾತಿ ನೀಡಬೇಕು ಎಂದು ಪಿಡಿಒಗೆ 2016 ಎ.25ರಂದು ಆದೇಶಿಸಿದ್ದರು.

ಹೀಗಿದ್ದರೂ ಸ್ಥಳೀಯ ನಿವಾಸಿಗಳು ತಕರಾರು ತೆಗೆದಿರುವ ಕಾರಣ ಹೇಮಂತ್ ಶೆಟ್ಟಿಗೆ ನಕ್ಷೆ ಮಂಜೂರಾತಿ ನೀಡಬಾರದು ಎಂಬುದಾಗಿ ಗ್ರಾಪಂ ಸದಸ್ಯರು ಮತ್ತೆ ನಿರ್ಣಯಿಸಿದ್ದರು. ಹೀಗಾಗಿ ಗ್ರಾಪಂ ಸದಸ್ಯರ ವಿರುದ್ಧ ಕ್ರಮ ಜರುಗಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ, ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ಶಿಫಾರಸು ಮಾಡಿದ್ದರು. ಅದರಂತೆ ಕಾರ್ಯದರ್ಶಿ ಸಹ ಸದಸ್ಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಸದಸ್ಯತ್ವ ಅಮಾನತುಪಡಿಸುವ ಕುರಿತು ವಿವರಣೆ ಕೇಳಿದ್ದರು. ಆದರೆ ನಂತರದ ಕ್ರಮ ಜರಗಿಸಿರಲಿಲ್ಲ. ಇದರಿಂದ, ಅಸಮಾಧಾನಗೊಂಡಿದ್ದ ಹೈಕೋರ್ಟ್ ಈ ಸಂಬಂಧ ವರದಿ ನೀಡಲು ಸೂಚಿಸಿತ್ತು.

ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಬೆಳ್ಮ ಗ್ರಾಮ ಪಂಚಾಯತ್ ಪಿಡಿಒ ತಲಾ 50 ಸಾವಿರ ರೂ. ದಂಡವನ್ನು ಹೈಕೋರ್ಟ್‌ಗೆ ಪಾವತಿಸಿದ್ದರು. ದಂಡ ಪಾವತಿಸಲು ನ.8ರಂದು ಕೋರ್ಟ್ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News