ನ್ಯಾಯಕ್ಕಾಗಿ ಸರಕಾರದ ಮೊರೆಹೋದ ಪ್ರೇಮಲತಾ ದಂಪತಿ
Update: 2017-11-29 21:21 IST
ಬೆಂಗಳೂರು, ನ.29: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ರಾಮಕಥಾ ಗಾಯಕಿ ಪ್ರೇಮಲತಾ ಹಾಗೂ ದಿವಾಕರ್ ದಂಪತಿಯು ನ್ಯಾಯಕ್ಕಾಗಿ ರಾಜ್ಯ ಸರಕಾರದ ಮೊರೆ ಹೋಗಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ಸಿಗುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ರಾಘವೇಶ್ವರ ಭಾರತಿ ಸ್ವಾಮಿಯ ಪ್ರಭಾವದಿಂದ ನಮಗೆ ನ್ಯಾಯ ಸಿಗಲು ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ನ್ಯಾಯಾಂಗದ ಮೇಲೂ ಶ್ರೀಗಳು ಪ್ರಭಾವ ಬೀರುತ್ತಿರಬಹುದು. ಆದರೂ, ನಾವು ನಮ್ಮ ಕಾನೂನು ಹೋರಾಟವನ್ನು ಬಿಡುವುದಿಲ್ಲ. ಇದು ಸುಳ್ಳಿನ ಕಾಲ, ಸತ್ಯಕ್ಕೆ ನ್ಯಾಯ ಸಿಗುವವರೆಗೆ ಹೋರಾಡಬೇಕಿದೆ ಎಂದು ಪ್ರೇಮಲತಾ ಹೇಳಿದರು.