ಶ್ರಮಿಕರ ಕೈಗೆ ಆರ್ಥಿಕ ಶಕ್ತಿ ತುಂಬುವೆ: ದೇವೇಗೌಡ
ಬೆಂಗಳೂರು, ನ.29: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಭಾಗ್ಯಗಳ ಬದಲು ಶ್ರಮಿಸುವ ಕೈಗಳಿಗೆ ಆರ್ಥಿಕ ಶಕ್ತಿ ತುಂಬುತ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಬುಧವಾರ ನಗರದ ಪುರಭವನದಲ್ಲಿ 'ನಮ್ಮ ಟೈಗರ್ ಕ್ಯಾಬ್' ಸೇವೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. 20 ತಿಂಗಳಲ್ಲಿ ಆಡಳಿತ ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾದವರು. ಇನ್ನು ಐದು ತಿಂಗಳಷ್ಟೆ, ಮತ್ತೆ ನಮ್ಮದೇ ಪಕ್ಷ ಆಡಳಿತಕ್ಕೆ ಬರಲಿದೆ. ಬಳಿಕ ಯಾವುದೇ ಭಾಗ್ಯವನ್ನು ಕಲ್ಪಿಸುವುದಿಲ್ಲ. ಬದಲಿಗೆ ದುಡಿಯುವ ಕೈಗೆ ಆರ್ಥಿಕ ಶಕ್ತಿ ಕಲ್ಪಿಸುತ್ತೇವೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಉದ್ಯೋಗ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಯಾರು ಎಷ್ಟೇ ಹೊಟ್ಟೆ ಕಿಚ್ಚುಪಟ್ಟರೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಾನು ಕೊಡುವ ಭಾಗ್ಯವಲ್ಲ, ನಾಡಿನ ಜನರು ನೀಡುವ ಭಾಗ್ಯವಾಗಿದೆ ಎಂದು ನುಡಿದರು.
ಎಲ್ಲೆಡೆ 'ಕುಮಾರಣ್ಣ ಕುಮಾರಣ್ಣ' ಎಂಬ ಕೂಗು ಎದ್ದಿದೆ. ಅಲ್ಲದೆ, ಪುತ್ರವಾತ್ಸಲ್ಯದಿಂದ ಲಾಂಛನ ಬಿಡುಗಡೆಗೆ ದೇವೇಗೌಡರು ಹೋಗಿದ್ದಾರೆ ಎಂದು ಟೀಕೆ ಬರಬಹುದು ಅದಕ್ಕೆ ನಾನು ಭಯಪಡೋದಿಲ್ಲ ಎಂದವರು, ಚಾಲಕರು ಸಂಸಾರವನ್ನು ನಡೆಸುವ ನಿಟ್ಟಿನಲ್ಲಿ ಉದ್ಯೋಗ ಕಲ್ಪಿಸುತ್ತೇವೆ. ಕೂತು ತಿನ್ನುವವರನ್ನು ಹಿಂದೆ ಸರಿಸಿ, ಚಾಲಕರಿಗೆ ಸಾಕಷ್ಟು ಸೌಲಭ್ಯ ಕೊಡಲು ನಮ್ಮ ಟೈಗರ್ ಸಂಸ್ಥೆ ನಿರ್ಧರಿಸಿದೆ. ಚಾಲಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಯೋಗ್ಯವಾದ ನಿರ್ಣಯ ಮಾಡಿದ್ದಾರೆ ಎಂದರು.
ರಾಜ್ಯದ ಸಂಪತ್ತನ್ನು ಉಳಿಸಿ ಬೆಳೆಸುವ ಕೆಲಸ ಮಾಡುವ ಸಲುವಾಗಿ ನಮ್ಮ ಟೈಗರ್ ಟ್ಯಾಕ್ಸಿಯ ಲಾಂಛನದಲ್ಲಿ ಹುಲಿ ಮುಖ ಇದೆ. ಆದರೆ, ಇದು ಯಾರನ್ನೂ ತಿನ್ನಲ್ಲ. ಲೂಟಿ ಮಾಡುವ ರಾಜಕಾರಣಿಗಳತ್ತ ಕಣ್ಣಿಡಲಿದೆ ಎಂದು ಹೇಳಿದರು.
ಈ ವೇಳೆ ಎಚ್‌ಡಿಕೆ ರಕ್ತದಾನಿಗಳ ಸಮಿತಿ ಲಾಂಛನವನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಚೌಡರೆಡ್ಡಿ, ಚಾಲಕ ಸಂಘದ ಅಧ್ಯಕ್ಷ ತನ್ವೀರ್ ಪಾಷಾ, ನಮ್ಮ ಟೈಗರ್ ಸಂಸ್ಥೆಯ ಸಂಸ್ಥಾಪಕ ಆದಿತ್ಯ ಪೊದ್ದರ್, ವ್ಯವಸ್ಥಾಪಕ ನಿರ್ದೇಶಕ ದೀಪಾಂಜಲ್ ಸೇರಿ ಪ್ರಮುಖರಿದ್ದರು.