ಜಂಟಿ ಕಾರ್ಯದರ್ಶಿ ಮಲ್ಲಪ್ಪ ಕಾಳೆಗೆ ಜೀವ ಬೆದರಿಕೆ
Update: 2017-11-29 21:34 IST
ಬೆಂಗಳೂರು, ನ. 29: ವಿಧಾನಸಭೆ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ.ಕಾಳೆ ಅವರ ಕಚೇರಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸಚಿವಾಲಯದ ಅಧೀನ ಕಾರ್ಯದರ್ಶಿ ಕೆ.ಎಸ್.ಗಣೇಶ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 127ಕ್ಕೆ ನ.27ರ ಬೆಳಗ್ಗೆ 11:30ರ ಸುಮಾರಿಗೆ ಆಗಮಿಸಿದ ಗಣೇಶ್, ಮಲ್ಲಪ್ಪ ಕಾಳೆ ಅವರಿಗೆ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಮಲ್ಲಪ್ಪ ಕಾಳೆ ನೀಡಿದ ದೂರನ್ನು ಆಧರಿಸಿ ವಿಧಾನಸಭೆ ಸ್ಪೀಕರ್ ಕೋಳಿವಾಡ ಅವರ ಆದೇಶದ ಮೇಲೆ ಗಣೇಶ್ ಅವರನ್ನು ಅಮಾನತ್ತು ಮಾಡಿ ಜಂಟಿ ಕಾರ್ಯದರ್ಶಿ ಎಂ.ಎಸ್.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಸದರಿ ಅಧಿಕಾರಿಯೂ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಅಮಾನತ್ತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.