×
Ad

ಪರಿಸರದ ದೃಷ್ಟಿಯಿಂದ ಡೀಸೆಲ್ ಆಟೊ ನೋಂದಣಿ ನಿಷೇಧ: ಹೈಕೋರ್ಟ್‌ಗೆ ಸರಕಾರ ಹೇಳಿಕೆ

Update: 2017-11-29 21:39 IST

ಬೆಂಗಳೂರು, ನ.29: ಪರಿಸರ ಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಡೀಸೆಲ್ ಆಟೊ ರಿಕ್ಷಾಗಳ ನೋಂದಣಿ ನಿಷೇಧಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಡೀಸೆಲ್ ಆಟೊಗಳ ನೋಂದಣಿ ನಿಷೇಧಿಸಿ ಸರಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಮೆಸರ್ಸ್ ಫಾರ್ಮಾ ಪವರ್ ಟ್ರಾಕ್ಟರ್ ಹಾಗೂ ಇತರ ಆಟೊ ತಯಾರಕ ಹಾಗೂ ಮಾರಾಟಗಾರ ಕಂಪೆನಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಪೀಠದಲ್ಲಿ ನಡೆಯಿತು.

ಈ ವೇಳೆ, ಡೀಸೆಲ್ ಆಟೊಗಳ ನೋಂದಣಿ ನಿಷೇಧಿಸಿರುವ ಕ್ರಮವನ್ನು ಸಮರ್ಥಿಸಿಕೊಂಡ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಪರಿಸರ ಮಾಲಿನ್ಯ ತಡೆ ದೃಷ್ಟಿಯಿಂದ ಸರಕಾರ ಈ ನಿರ್ಧಾರ ಕೈಗೊಂಡಿದ್ದು, ಇಂತಹ ನಿರ್ಧಾರಗಳನ್ನು ಕೈಗೊಳ್ಳಲು ರಾಜ್ಯಕ್ಕೆ ಅಧಿಕಾರವಿದೆ ಎಂದು ತಿಳಿಸಿದರು.

ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಡೀಸೆಲ್ ಆಟೊಗಳ ನೋಂದಣಿ ನಿಷೇಧಿಸಲಾಗಿದ್ದು, ನಾಲ್ಕು ಸ್ಟ್ರೋಕ್‌ನ ಎಲ್‌ಪಿಜಿ, ಸಿಎನ್‌ಜಿ ಮತ್ತು ಪೆಟ್ರೋಲ್ ಆಟೊರಿಕ್ಷಾಗಳ ನೋಂದಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ನ್ಯಾಯಪೀಠ, ಆದೇಶದಲ್ಲಿ ಯಾವ ಕಾರಣಕ್ಕೆ ಡೀಸೆಲ್ ಆಟೊ ನಿಷೇಧಿಸಲಾಗಿದೆ ಎಂಬುದನ್ನು ನಮೂದಿಸಿಲ್ಲವೇಕೆ? ನಿಷೇಧಿಸುವುದಾದರೆ ಎಲ್ಲ ಡೀಸೆಲ್ ವಾಹನಗಳನ್ನು ನಿಷೇಧೀಸಬಹುದಲ್ಲವೇ? ಕೇವಲ ಆಟೊಗಳನ್ನು ಮಾತ್ರ ನಿಷೇಧಿಸಿರುವ ಕಾರಣವೇನು? ರಾಜ್ಯದ ಎಲ್ಲ ಭಾಗಗಳಲ್ಲೂ ಎಲ್‌ಪಿಜಿ ಹಾಗೂ ಸಿಎನ್‌ಜಿ ಸೌಲಭ್ಯವಿದೆಯೇ ಎಂದು ಸರಕಾರವನ್ನು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಪೊನ್ನಣ್ಣ, ಆರಂಭಿಕ ಹಂತವಾಗಿ ಡೀಸೆಲ್ ಆಟೊಗಳನ್ನು ನಿಷೇಧಿಸಲಾಗಿದ್ದು, ಹಂತ ಹಂತವಾಗಿ ಉಳಿದ ವಾಹನಗಳನ್ನೂ ನಿಷೇಧಿಸಲಾಗುತ್ತದೆ. ಇಲ್ಲವಾದಲ್ಲಿ ಬೆಂಗಳೂರು ಸಹ ಹೊಸದಿಲ್ಲಿಯಂತಾಗುತ್ತದೆ ಎಂದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News