ದ.ಕ. ಜಿಲ್ಲೆ ಇತ್ತೂರು ಗ್ರಾಪಂ ಅಧ್ಯಕ್ಷ ಹುದ್ದೆಯಿಂದ ವಜಾ: ಆದೇಶ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು, ನ.29: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸುಂಕದಟ್ಟೆ ಗ್ರಾಮದ ಕೆ.ಸತೀಶ್ ಅವರನ್ನು ಇತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಇತ್ತೂರು ಗ್ರಾಮ ಪಂಚಾಯಿತಿಯ ತಮ್ಮ ಸದಸ್ಯತ್ವವನ್ನು ರದ್ದುಪಡಿಸಿದ ಹಾಗೂ ಪಂಚಾಯತ್ ಅಧ್ಯಕ್ಷ ಹುದ್ದೆಯಿಂದ ತಮ್ಮನ್ನು ವಜಾಗೊಳಿಸಿದ್ದ ಸರಕಾರದ ಆದೇಶ ರದ್ದು ಕೋರಿ ಸತೀಶ್ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಕೆ.ಸತೀಶ್ ಅವರ ಗ್ರಾಮ ಪಂಚಾಯತ್ ಸದಸ್ಯತ್ವವನ್ನು ರದ್ದುಪಡಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿದ್ದ ಆದೇಶವನ್ನು ಅಸಿಂಧುಗೊಳಿಸಿತು.
ಗ್ರಾಮ ಪಂಚಾಯತ್ ನಲ್ಲಿ ಬಡವರಿಗೆ 20 ಸಿಂಟೆಕ್ಸ್ ಟ್ಯಾಂಕ್ ವಿತರಣೆ ಮಾಡಿರುವುದರಲ್ಲಿ ಅಕ್ರಮ ಎಸಗಿದ್ದ ಆರೋಪದ ಮೇಲೆ ಸತೀಶ್ ಅವರ ವಿರುದ್ಧ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ತನಿಖೆ ನಡೆಸಿದ್ದರು. ಸಿಂಟೆಕ್ಸ್ ಟ್ಯಾಂಕ್ ವಿತರಣೆಯಲ್ಲಿ ಕೆಲವೊಂದು ಅಕ್ರಮಗಳು ನಡೆಡಿರುವುದು ಕಾರಣವಾಗಿದ್ದರಿಂದ ಕೆ.ಸತೀಶ್ ಅವರನ್ನು ಇತ್ತೂರು ಗ್ರಾಮ ಪಂಚಾಯತ್ ಸದಸ್ಯತ್ವನ್ನು ರದ್ದುಪಡಿಸಿ 2016ರ ಸೆ.14ರಂದು ಆದೇಶಿಸಿದ್ದರು. ಆ ಸಂದರ್ಭದಲ್ಲಿ ಸತೀಶ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದಲ್ಲಿ ಸಣ್ಣಪುಟ್ಟ ಲೋಪದೋಷಗಳು ಉಂಟಾಗಿದೆ. ಗ್ರಾಮ ಪಂಚಾಯತ್, ಸರಕಾರಿ ಪ್ರಾಧಿಕಾರಿಗಳು ಮತ್ತು ಪಿಡಿಓ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪ್ರಕರಣದಲ್ಲಿ ನಡೆದಿರುವ ಕೆಲ ಅಕ್ರಮಗಳನ್ನು ಸರಿಪಡಿಸಬಹುದಾಗಿತ್ತು. ದುರಾದೃಷ್ಟವಶಾತ್ ಪರಿಹಾರ ಕ್ರಮವನ್ನು ಅನುಸರಿಸದೆ, ದೊಡ್ಡ ಪ್ರಮಾಣದಲ್ಲಿ ಹಣ ದುರುಪಯೋಗಪಡಿಸಿ, ವಂಚನೆ ಹಾಗೂ ಭ್ರಷ್ಟಾಚಾರ ಎಸಗಿದಂತಹ ಪ್ರಕರಣದಲ್ಲಿ ಕೈಗೊಳ್ಳಬಹುದಾದ ತೀರ ಸ್ವರೂಪದ ಕ್ರಮವಾದ ಪಂಚಾಯತ್ ಸದಸ್ಯತ್ವ ರದ್ದುಪಡಿಸಲಾಗಿದೆ. ಈ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟು, ಸರಕಾರದ ಆದೇಶ ರದ್ದಪಡಿಸಿದೆ.