×
Ad

ಪುಸ್ತಕಗಳ ನಿಷೇಧ ಜನವಿರೋಧಿ ಧೋರಣೆ: ಕವಿ ಸಿದ್ದಲಿಂಗಯ್ಯ

Update: 2017-11-29 22:15 IST

ಬೆಂಗಳೂರು, ನ.29: ಪುಸ್ತಕಗಳನ್ನು ನಿಷೇಧಿಸುವುದು ಅಪಾಯಕಾರಿ ಹಾಗೂ ಜನವಿರೋಧಿ ಧೋರಣೆಯಾಗಿದೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಹೇಳಿದ್ದಾರೆ.

ರಾಜ್ಯ ಗ್ರಂಥಾಲಯ ಇಲಾಖೆಯು ಕಬ್ಬನ್ ಉದ್ಯಾನದ ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಓದು ಮನುಷ್ಯರನ್ನು ಮಾನಸಿಕ ದಾಸ್ಯದಿಂದ ವಿಮೋಚನೆ ಮಾಡುತ್ತದೆ. ಜನರನ್ನು ಅಜ್ಞಾನದ ಕತ್ತಲಿನಲ್ಲಿ ಇಡಬೇಕೆಂದು ಇಂದು ಸಹ ಕೆಲವು ಪುಸ್ತಕಗಳ ನಿಷೇಧದ ಮಾತುಗಳು ಕೇಳಿ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಶತಮಾನದ ಹಿಂದೆ ರಷ್ಯಾದಲ್ಲಿ ಝ್ಹಾರ್ ದೊರೆಗಳು ಅಧಿಕಾರ ನಡೆಸುತ್ತಿದ್ದ ಕಾಲದಲ್ಲಿ ಪುಸ್ತಕಗಳನ್ನು ಓದುವವರನ್ನು ಜೈಲಿಗೆ ಹಾಕಲಾಗುತ್ತಿತ್ತು. ವಿಚಾರಗಳನ್ನು ತಿಳಿಯಬೇಕು ಎಂಬುವವರು ಕದ್ದು-ಮುಚ್ಚಿ ಪುಸ್ತಕಗಳನ್ನು ಓದುತ್ತಿದ್ದರು. ಸಿಕ್ಕಿಬಿದ್ದಾಗ ಚಡಿಯೇಟುಗಳನ್ನು ತಿನ್ನುತ್ತಿದ್ದರು. ಜನರು ವಿದ್ಯಾವಂತರಾದರೆ ಶೋಷಣೆಯ ವಿರುದ್ಧ ಎದ್ದು ನಿಲ್ಲುತ್ತಾರೆ, ಹಕ್ಕುಗಳನ್ನು ಕೇಳುತ್ತಾರೆ, ಅದಕ್ಕಾಗಿ ಪ್ರತಿಭಟನೆಗಳನ್ನು ಮಾಡುತ್ತಾರೆ ಎಂಬ ಭಯ ರಾಜರಲ್ಲಿ ಮನೆ ಮಾಡಿತ್ತು ಎಂದು ತಿಳಿಸಿದರು.

ಗ್ರಂಥಾಲಯಗಳು ಜ್ಞಾನ ಸಮುದ್ರಗಳಿದ್ದಂತೆ. ಹೊಸ ಮನೆ ಕಟ್ಟುವ ಪ್ರತಿಯೊಬ್ಬರು ದೇವರ ಕೋಣೆ ಕಟ್ಟುವಂತೆ, ಚಿಕ್ಕ ಗ್ರಂಥಾಲಯಕ್ಕೆ ಸ್ಥಳ ಮೀಸಲಿಡಬೇಕು. ಓದುವ ಹವ್ಯಾಸ ಬೆಳೆಸಿಕೊಂಡ ವ್ಯಕ್ತಿ ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾನೆ ಎಂದು ಕಿವಿಮಾತು ಹೇಳಿದರು.

ನಾನು ಬೌದ್ಧಿಕ ಮತ್ತು ಸಾಹಿತ್ಯಕ ಜ್ಞಾನ ಬೆಳೆಸಿಕೊಳ್ಳಲು ಕಬ್ಬನ್ ಉದ್ಯಾನದಲ್ಲಿನ ರಾಜ್ಯ ಕೇಂದ್ರ ಗ್ರಂಥಾಲಯ ಹಾಗೂ ಶೇಷಾದ್ರಿಪುರದಲ್ಲಿನ ಸಾರ್ವಜನಿಕ ಗ್ರಂಥಾಲಯ ಬಹಳ ಸಹಕಾರಿಯಾದವು. ಸರಕಾರಿ ಕಲಾ ಕಾಲೇಜಿನಲ್ಲಿ ಓದುವಾಗ ಮಧ್ಯಾಹ್ನ 3 ರಿಂದ ಸಂಜೆ 7 ರವೆಗೆ ಈ ಗ್ರಂಥಾಲಯದಲ್ಲಿ ಅಧ್ಯಯನದಲ್ಲಿ ತೊಡಗುತ್ತಿದ್ದೆ. ಬಸವರಾಜ ಕಟ್ಟಿಮನಿ, ಕುವೆಂಪುರಿಂದ ಆರಂಭವಾದ ಓದು ನೂರಾರು ಸಾಹಿತಿಗಳನ್ನು ಓದಲು ಪ್ರೇರೇಪಿಸಿತು. ಗ್ರಂಥಾಲಯದ ಭೇಟಿಯಲ್ಲಿ ಹತ್ತಾರು ಸಾಹಿತಿಗಳು ಪರಿಚಿತರಾದರು ಎಂದು ಹಳೆಯ ದಿನಗಳನ್ನು ಸ್ಮರಿಸಿದರು.

ಕೆಲವು ದಶಕಗಳ ಹಿಂದೆ ಹೆಚ್ಚು ಓದುತ್ತಿದ್ದಾಗ ‘ಹೆಚ್ಚು ಓದ್‌ಬೇಡ್ವೊ ಹುಚ್ಚು ಹಿಡಿಯುತ್ತೆ’ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹೆಚ್ಚು ಓದಿ, ತಿಳಿದವರನ್ನು ಇಂದು ಚಿಂತಕರು ಎನ್ನುತ್ತಿದ್ದಾರೆ. ಒಳ್ಳೆಯ ಪುಸ್ತಕಗಳು ಸಾಮಾನ್ಯನನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಗಾಂಧಿ, ಅಂಬೇಡ್ಕರ್ ಎಂದರು.

ಪ್ರತಿಯೊಬ್ಬರು ಕಂದಾಯ ಕಟ್ಟುವಾಗ ಗ್ರಂಥಾಲಯ ಸೆಸ್ ಪಾವತಿಸುತ್ತಾರೆ. ಅದನ್ನು ಸಂಗ್ರಹಿಸುವ ಸ್ಥಳೀಯ ಆಡಳಿತ ಸಂಸ್ಥೆಗಳು, ಗ್ರಂಥಾಲಯ ಇಲಾಖೆಗೆ ವರ್ಗಾಯಿಸುತ್ತಿಲ್ಲ. ಬಿಬಿಎಂಪಿ 250 ಕೋಟಿ ರೂ. ಮೊತ್ತದ ಗ್ರಂಥಾಲಯ ಸೆಸ್ ಹಣವನ್ನು ಇಲಾಖೆಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಆ ಮೊತ್ತ ನೀಡಿದರೆ, ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಬಹುದು ಎಂದು ತಿಳಿಸಿದರು.

ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಹೊಸಮನಿ ಮಾತನಾಡುತ್ತ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಖ್ಯಾತನಾಮರ ಪ್ರತಿಕ್ರಿಯೆಗಳ ಕುರಿತು ಸಾಕ್ಷಚಿತ್ರ ರೂಪಿಸುತ್ತೇವೆ. ಗ್ರಂಥಾಲಯ ವಿಜ್ಞಾನ ಪಿತಾಮಹ ಎಸ್.ಆರ್.ರಂಗನಾಥ ರಚಿಸಿದ ಪುಸ್ತಕಗಳನ್ನು ಪ್ರತಿ ಗ್ರಂಥಾಲಯದಲ್ಲಿ ಇಡುತ್ತೇವೆ’ ಎಂದು ಹೇಳಿದರು.

ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ವೈ.ರಾಜೇಂದ್ರಕುಮಾರ್, ರಾಜ್ಯದಲ್ಲಿ ಪುಸ್ತಕಗಳ ಸಗಟು ಖರೀದಿ ಯೋಜನೆಯಡಿ ಗ್ರಂಥಾಲಯಗಳಿಗಾಗಿ ಒಂದು ಪುಸ್ತಕದ 300 ಪ್ರತಿಗಳನ್ನು ಖರೀದಿಸಲಾಗುತ್ತಿದೆ. ಇದನ್ನು 1 ಸಾವಿರ ಪ್ರತಿಗಳಿಗೆ ಹೆಚ್ಚಿಸಬೇಕು. ಜನ್ಮದಿನದಂದು ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಪ್ರವೃತಿ್ತ ಬೆಳೆಯಬೇಕು ಎಂದು ನುಡಿದರು.

ಸಪ್ತಾಹದ ಪ್ರಯುಕ್ತ ಶಾಲಾ ಮಕ್ಕಳು ಮತ್ತು ಗ್ರಂಥಾಲಯ ಇಲಾಖೆಯ ಸಿಬ್ಬಂದಿಗೆ ಚಿತ್ರಕಲೆ, ಪ್ರಬಂಧ ರಚನೆ, ಗೀತಗಾಯನ, ರಸಪ್ರಶ್ನೆ, ಜ್ಞಾಪಕ ಶಕ್ತಿ ಪರೀಕ್ಷೆ, ಮ್ಯೂಜಿಕಲ್ ಚೇರ್, ಪಾಸಿಂಗ್ ದಿ ಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇವುಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. 65 ವರ್ಷದ ಜಿ.ನಾಗರಾಜ್ ಅವರಿಗೆ ‘ವಾರ್ಷಿಕ ಉತ್ತಮ ಓದುಗ ಪ್ರಶಸ್ತಿ’ ನೀಡಿ ಗೌವಿಸಲಾಯಿತು.

ದೇವಾಲಯಗಳಿಗಿಂತ ಗ್ರಂಥಾಲಯಗಳ ಸಂಖ್ಯೆ ಹೆಚ್ಚಾದಲ್ಲಿ ಜನರ ಅರಿವಿನ ಪರಿಧಿ ವಿಸ್ತಾರಗೊಳ್ಳುತ್ತದೆ
-ಡಾ.ಸತೀಶ್‌ಕುಮಾರ್ ಹೊಸಮನಿ, ನಿರ್ದೇಶಕ, ಗ್ರಂಥಾಲಯ ಇಲಾಖೆ.

ವಾರಕ್ಕೊಂದು ಪುಸ್ತಕ ಓದದಿದ್ದರೆ, ಏನೊ ಕಳೆದುಕೊಂಡ ಪಾಪಪ್ರಜ್ಞೆ ನಮ್ಮಲ್ಲಿ ಮೂಡಬೇಕು. ರಾಜಕಾರಣಿಗಳು ಅತ್ಯುತ್ತಮ ಕೃತಿಗಳನ್ನು ಓದಬೇಕು. ಆಗ ಅವರ ಬಾಯಿಂದ ಎಡಬಿಡಂಗಿ ಮಾತುಗಳು ಬರುವುದಿಲ್ಲ.
-ಶೂದ್ರ ಶ್ರೀನಿವಾಸ್, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News