1 ಬಿಲಿಯ ಡಾ. ಪಾವತಿ: ಸೌದಿ ರಾಜಕುಮಾರನ ಬಿಡುಗಡೆ

Update: 2017-11-29 17:01 GMT

ದುಬೈ, ನ. 29: ‘ಸರ್ವಸಮ್ಮತ ಇತ್ಯರ್ಥ ಒಪ್ಪಂದ’ ಏರ್ಪಟ್ಟ ಹಿನ್ನೆಲೆಯಲ್ಲಿ ಸೌದಿ ಅರೇಬಿಯದ ಹಿರಿಯ ರಾಜಕುಮಾರ ಮಿತೇಬ್ ಬಿನ್ ಅಬ್ದುಲ್ಲಾರನ್ನು ಬಂಧನದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸೌದಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.

ಈ ಒಪ್ಪಂದದ ಪ್ರಕಾರ, ಅವರು ಸರಕಾರಕ್ಕೆ 1 ಬಿಲಿಯ ಡಾಲರ್ (ಸುಮಾರು 6,430 ಕೋಟಿ ರೂಪಾಯಿ)ಗೂ ಅಧಿಕ ಮೊತ್ತ ಪಾವತಿಸಿದ್ದಾರೆ ಎನ್ನಲಾಗಿದೆ.

ದಿವಂಗತ ದೊರೆ ಅಬ್ದುಲ್ಲಾರ ಮಗನಾಗಿರುವ 65 ವರ್ಷದ ಮಿತೇಬ್, ಪ್ರಭಾವಿ ನ್ಯಾಶನಲ್ ಗಾರ್ಡ್‌ನ ಮಾಜಿ ಮುಖ್ಯಸ್ಥರಾಗಿದ್ದಾರೆ. ಒಂದು ಕಾಲದಲ್ಲಿ ಅವರನ್ನು ಭವಿಷ್ಯದ ದೊರೆ ಎಂಬುದಾಗಿ ಪರಿಗಣಿಸಲಾಗಿತ್ತು.

ಸೌದಿ ಅರೇಬಿಯದಲ್ಲಿ ಇತ್ತೀಚೆಗೆ ನಡೆದ ಭ್ರಷ್ಟಾಚಾರ ವಿರುದ್ಧದ ದಾಳಿಯ ವೇಳೆ ಬಂಧನಕ್ಕೊಳಗಾಗಿದ್ದ ಡಝನ್‌ಗಟ್ಟಲೆ ರಾಜ ಕುಟುಂಬ ಸದಸ್ಯರು, ಸಚಿವರು ಮತ್ತು ಹಿರಿಯ ಅಧಿಕಾರಿಗಳ ಪೈಕಿ ಅವರೂ ಒಬ್ಬರಾಗಿದ್ದರು.

‘ಸರ್ವಸಮ್ಮತ ಇತ್ಯರ್ಥ ಒಪ್ಪಂದ’ವೊಂದು ಏರ್ಪಟ್ಟ ಹಿನ್ನೆಲೆಯಲ್ಲಿ ಮಿತೇಬ್‌ರನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು ಎಂದು ಭ್ರಷ್ಟಾಚಾರ ನಿಗ್ರಹ ಅಭಿಯಾನದಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ತಿಳಿಸಿದರು.

ಬಿಡುಗಡೆಗಾಗಿ ಪಾವತಿಸಲಾದ ಮೊತ್ತ ಎಷ್ಟೆನ್ನುವುದನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಅದು 1 ಬಿಲಿಯ ಡಾಲರ್‌ಗಿಂತಲೂ ಅಧಿಕ ಮೊತ್ತವಾಗಿದೆ ಎಂದು ಅಧಿಕಾರಿ ಹೇಳಿದರು.

ಅವ್ಯವಹಾರ, ಕೆಲಸಗಾರರನ್ನು ನೇಮಿಸದೆ ನೇಮಿಸಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಿರುವುದು ಹಾಗೂ ತನ್ನದೇ ಕಂಪೆನಿಗಳಿಗೆ ಗುತ್ತಿಗೆಗಳನ್ನು ನೀಡಿರುವ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News