ಆಸ್ಟ್ರೇಲಿಯನ್ ಓಪನ್‌ಗೆ ಸೆರೆನಾ ವಿಲಿಯಮ್ಸ್ ಅಲಭ್ಯ?

Update: 2017-11-29 18:33 GMT

ಮೆಲ್ಬೋರ್ನ್, ನ.29: ವಿಶ್ವದ ಮಾಜಿ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಖಚಿತ ನಿರ್ಧಾರ ತೆಗೆದುಕೊಂಡಿಲ್ಲ. ಮಣಿಕಟ್ಟು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಶ್ವದ ನಂ.12ನೇ ಆಟಗಾರ್ತಿ ಸ್ವೆತ್ಲಾನಾ ಕುಝ್ನೆಸೋವಾ 2018ರ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಯಲ್ಲಿ ಆಡುವ ಬಗ್ಗೆ ಸಂಶಯವಿದೆ.

ಈ ವರ್ಷಾರಂಭದಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆರೆನಾ 23ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಗ 2 ತಿಂಗಳ ಗರ್ಭಿಣಿಯಾಗಿದ್ದರು. ಸೆಪ್ಟಂಬರ್‌ನಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿರುವ ಸೆರೆನಾ ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಇತ್ತೀಚೆಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

 ‘‘ಸೆರೆನಾ 2018ರ ಋತುವಿಗೆ ಸಜ್ಜಾಗುತ್ತಿದ್ದಾರೆ. ಅವರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ನಾನು ಅವರಿಗೆ ಫ್ಲೋರಿಡಾದಲ್ಲಿ ತರಬೇತಿ ನೀಡುವೆ. ಅವರ ಫಿಟ್‌ನೆಸ್ ಮಟ್ಟವನ್ನು ನೋಡಿದ ಬಳಿಕ ಆಸ್ಟ್ರೇಲಿಯಕ್ಕೆ ತೆರಳುವ ಬಗ್ಗೆ ನಿರ್ಧರಿಸಲಾಗುವುದು’’ ಎಂದು ಸೆರೆನಾರ ಕೋಚ್ ಪ್ಯಾಟ್ರಿಕ್ ಹೇಳಿದ್ದಾರೆ.

 ‘‘ಈ ತಿಂಗಳಾರಂಭದಲ್ಲಿ ನನ್ನ ಮಣಿಕಟ್ಟಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಇದೀಗ ನಾನು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಯಾವಾಗ ಅಭ್ಯಾಸ ಆರಂಭಿಸಬಹುದೆಂದು ವೈದ್ಯರು ಹೇಳಿಲ್ಲ. ಹೀಗಾಗಿ ಟೆನಿಸ್‌ಗೆ ಯಾವಾಗ ಮರಳುತ್ತೇನೆಂಬ ಬಗ್ಗೆ ಸ್ಪಷ್ಟತೆಯಿಲ್ಲ’’ಎಂದು ರಶ್ಯದ ಆಟಗಾರ್ತಿ ಕುಝ್ನೆಸೋವಾ ಹೇಳಿದ್ದಾರೆ. ಆಸ್ಟ್ರೇಲಿಯನ್ ಓಪನ್ ಜ.15 ರಿಂದ 28ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News