×
Ad

‘ರಾಣಿ ಚೆನ್ನಮ್ಮ-ಒನಕೆ ಓಬವ್ವ ಅವಹೇಳನ’ ಅಕ್ಷಮ್ಯ ಅಪರಾಧ: ರಾಣಿ ಸತೀಶ್

Update: 2017-11-30 17:59 IST

ಬೆಂಗಳೂರು, ನ.30: ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿರುವ ಫೇಸ್‌ಬುಕ್ ಪೇಜ್‌ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಬಗ್ಗೆ ಆಕ್ಷೇಪಾರ್ಹವಾಗಿ ಅತ್ಯಂತ ಕೀಳುಮಟ್ಟದ ಭಾಷೆಯನ್ನು ಬಳಕೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಕೆಪಿಸಿಸಿ ಉಪಾಧ್ಯಕ್ಷೆ ರಾಣಿ ಸತೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚೆನ್ನಮ್ಮ ಹಾಗೂ ಚಿತ್ರದುರ್ಗದ ಹೆಮ್ಮೆಯ ಪುತ್ರಿ ಓಬವ್ವ ಬಗ್ಗೆ ಕೀಳುಮಟ್ಟದ ಭಾಷೆಯನ್ನು ಬಳಸಿರುವುದು ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ ಎಂದರು.

ಪ್ರತಾಪ್ ಸಿಂಹ ಈ ಹಿಂದೆ ಗುಂಡ್ಲುಪೇಟೆ ಉಪ ಚುನಾವಣೆ ಸಂದರ್ಭದಲ್ಲಿಯೂ ಮಹಿಳೆಯರಿಗೆ ಅಗೌರವ ನೀಡುವ ರೀತಿಯಲ್ಲಿ ಮಾತುಗಳನ್ನಾಡಿದ್ದರು. ಇತ್ತೀಚೆಗೆ ಅವರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ, ನಮ್ಮ ಯುವ ಸಮುದಾಯಕ್ಕೆ ಅವರು ಯಾವ ರೀತಿಯ ಮಾರ್ಗದರ್ಶನ ಮಾಡಲು ಸಾಧ್ಯ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದರು.

ಬಿಜೆಪಿ ಸಂಸದರು ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಪ್ರಧಾನಿ ನರೇಂದ್ರಮೋದಿ ಗಮನಿಸಬೇಕು. ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿರುವ ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರನ್ನು ಅವಹೇಳನ ಮಾಡಿರುವ ವಿಚಾರದ ಕುರಿತು ಪ್ರಧಾನಮಂತ್ರಿಗೆ ಪತ್ರ ಬರೆದು ಗಮನ ಸೆಳೆಯಲಾಗುವುದು ಎಂದು  ತಿಳಿಸಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ನಿನ್ನೆ ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಹೋದರೆ ಅವರ ಕುಲಗೋತ್ರವನ್ನು ಹುಡುಕಲು ಹೊರಟಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಇಂತಹ ಕೆಲಸಗಳನ್ನು ಮಾಡುವ ಮೂಲಕ ಜನರ ಎದುರು ಅವರು ನಗೆಪಾಟಲಿಗೆ ಈಡಾಗಿದ್ದಾರೆ ಎಂದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿ, ಪ್ರತಾಪ್‌ಸಿಂಹ ಫಾರ್ ಸಿಎಂ, ಐ ಸಪೋರ್ಟ್ ಪ್ರತಾಪ್ ಸಿಂಹ ಎಂಬ ಫೇಸ್‌ಬುಕ್ ಪೇಜ್‌ಗಳಲ್ಲಿ ಈ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ. ಈ ಘಟನೆಗೂ ನನಗೂ ಯಾವುದೆ ಸಂಬಂಧವಿಲ್ಲ ಎಂದು ಪ್ರತಾಪ್ ಸಿಂಹ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದರು.

ಟ್ವಿಟರ್ ಅಥವಾ ಫೇಸ್‌ಬುಕ್ ಪೇಜ್ ಅನ್ನು ನಿರ್ವಹಿಸುವವರು ಯಾವ ವ್ಯಕ್ತಿಯ ಹೆಸರಿನಲ್ಲಿ ಖಾತೆ ಇದೆಯೊ ಅವರ ಮನಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿ ಕೊಂಡಿರುತ್ತಾರೆ. ಅದನ್ನೆ ಪ್ರಕಟ ಮಾಡುತ್ತಾರೆ. ಪ್ರತಾಪ್‌ಸಿಂಹಗೆ ಸಂಬಂಧಿಸಿದ ಈ ಪೇಜ್‌ಗಳನ್ನು ನಿರ್ವಹಿಸುತ್ತಿರುವವರು ಯಾರು ಎಂಬುದು ಬಹಿರಂಗವಾಗಬೇಕಿದೆ. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಒಬ್ಬರನ್ನು ಕೆಣಕುವುದು, ಕಿಚಾಯಿಸುವುದು, ಅವಹೇಳನ ಮಾಡುವುದು ಬಿಜೆಪಿಯ ಸಂಸ್ಕೃತಿಯಾಗಿದೆ. ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಅನಂತ್‌ಕುಮಾರ್ ಹೆಗಡೆ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನಿತರರು ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದವರು, ರಾಣಿ ಚೆನ್ನಮ್ಮ ಹಾಗೂ ಒಬವ್ವ ಬಗ್ಗೆ ಅವಹೇಳನ ಮಾಡುವ ಮೂಲಕ ಕನ್ನಡಿಗರ ಅಸ್ಮಿತೆಗೆ ಬಿಜೆಪಿಯವರು ಧಕ್ಕೆ ತಂದಿದ್ದಾರೆ. ಆದುದರಿಂದ, ಪ್ರಧಾನಿ ನರೇಂದ್ರಮೋದಿ ಈ ಕೂಡಲೇ ಪ್ರತಾಪ್ ಸಿಂಹ ಅವರನ್ನು ಪಕ್ಷದಿಂದ ಅಮಾನತ್ತು ಮಾಡಬೇಕು ಎಂದು ರಾಧಾಕೃಷ್ಣ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News