×
Ad

ಅರಸರ ಕಾಲದ ವಿಗ್ರಹ ಕದ್ದ ಆರೋಪಿಯ ಬಂಧನ

Update: 2017-11-30 18:33 IST

ಬೆಂಗಳೂರು, ನ.30: ಪ್ರಖ್ಯಾತ ಜ್ಞಾನಭಿರಾಮಡು ದೇವಸ್ಥಾನಕ್ಕೆ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯ ಅರಸ ಕೊಡುಗೆಯಾಗಿ ನೀಡಿದ್ದ ವಿಗ್ರಹಗಳನ್ನು ಕಳವು ಮಾಡಿದ್ದ ವ್ಯಕ್ತಿಯನ್ನು ವೈಟ್‌ಫೀಲ್ಡ್ ವಿಭಾಗದ ಕೆ.ಆರ್.ಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರ ಜಿಲ್ಲೆಯ ರಾಮಸಂದ್ರ ಗ್ರಾಮದ ಅಂಬರೀಶ್(36) ಎಂಬಾತ ಬಂಧಿತ ಆರೋಪಿ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.

ಬಂಧಿತನಿಂದ 11 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 6 ಲಕ್ಷ ರೂ.ಮೌಲ್ಯದ 200 ಗ್ರಾಂ ತೂಕದ ಚಿನ್ನಾಭರಣ ಹಾಗೂ ಪುರಾತನ ಕಾಲದ ಆರು ಪಂಚಲೋಹ ವಿಗ್ರಹ, ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಈತ ಬೈಕ್‌ನಲ್ಲಿ ಓಡಾಡಿ ಒಬ್ಬಂಟಿಯಾಗಿರುವ ಮಹಿಳೆಯನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಒಟ್ಟು 160 ಗ್ರಾಂ ತೂಕದ ಆರು ಸರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ವಿಗ್ರಹ: ಆರೋಪಿ ಅಂಬರೀಶ್, ಆಂಧ್ರದ ಪಲಮನೇರು ತಾಲೂಕು, ಚಿತ್ತೂರು ಜಿಲ್ಲೆ, ಹೊಸಕೋಟೆಯ ನಂದಗುಡಿ ದೇವಸ್ಥಾನಗಳ ಬೀಗ ಮುರಿದು ಪಂಚ ಲೋಹದ ವಿಗ್ರಹಗಳನ್ನು ಕಳವು ಮಾಡುತ್ತಿದ್ದ. ಅಷ್ಟೇ ಅಲ್ಲದೆ, ದೇವಸ್ಥಾನದ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್‌ನಿಂದಲೂ 31ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಎಂದು ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.

ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಾರತಹಳ್ಳಿ ಎಸ್ಸೈಗಳಾದ ಪ್ರಶಾಂತ್ ಬಾಬು, ಜಯರಾಜ್, ವೈಟ್‌ಫೀಲ್ಡ್ ವಿಭಾಗದ ಕ್ರೈಂ ಸಿಬ್ಬಂದಿ ಮೋಹನಕುಮಾರ, ಮಮತೇಶಗೌಡ, ವೆಂಕಟೇಶ್ ಸೇರಿ ಸಿಬ್ಬಂದಿಯನ್ನು ಶ್ಲಾಘಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News